Advertisement

ಸಿಟಿ ಬಸ್‌ ತೆರಳದ ಜಾಗಕ್ಕೆ ಕೆಎಸ್ಸಾರ್ಟಿಸಿ ಬಸ್‌

06:45 PM Jan 30, 2022 | Team Udayavani |

ಮಹಾನಗರ: ಪರವಾನಿಗೆ ಹೊಂದಿರುವ ಮಾರ್ಗಗಳಲ್ಲಿ ಸಿಟಿ ಬಸ್‌ಗಳು ಸಂಚರಿಸದಿದ್ದರೆ ಅಂತಹ ರೂಟ್‌ಗಳಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳಿಗೆ ತಾತ್ಕಾಲಿಕವಾಗಿ ಪರವಾನಿಗೆ ನೀಡಲು ಆರ್‌ಟಿಒ ಮುಂದಾಗಿದೆ.

Advertisement

ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೆಲವೊಂದು ಮಾರ್ಗಗಳಲ್ಲಿ ಸ್ಥಗಿತಗೊಂಡಿದ್ದ ಸಿಟಿ ಬಸ್‌ ಕಾರ್ಯಾಚರಣೆ ಇನ್ನೂ ಆರಂಭ ಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿ ಕರಿಂದ ದೂರುಗಳು ಕೇಳಿ ಬರುತ್ತಿವೆ. ಇದೇ ಕಾರಣಕ್ಕೆ ಸಾರ್ವಜನಿ ಕರು ಲಿಖೀತ ದೂರು ನೀಡಲು ಆರ್‌ಟಿಒ ಮನವಿ ಮಾಡಿತ್ತು. ಅದರಂತೆ ಈಗಾ ಗಲೇ ಸುಮಾರು 15 ಮಂದಿ ಲಿಖೀತ ದೂರು ನೀಡಿದ್ದು, ಇವುಗಳು ಪರಿಶೀಲನೆ ಹಂತದಲ್ಲಿವೆ. ಯಾವ ಮಾರ್ಗಗಳಲ್ಲಿ ಅತೀ ಹೆಚ್ಚಿನ ಪ್ರಯಾಣಿಕರಿದ್ದು, ಅಲ್ಲಿ ಪರ್ಮಿಟ್‌ ಇದ್ದರೂ ಸಿಟಿ ಬಸ್‌ ಸಂಚರಿಸದಿದ್ದರೆ ಆ ಭಾಗಕ್ಕೆ ತಾತ್ಕಾಲಿಕ ನೆಲೆ ಯಲ್ಲಿ ಕೆಎಸ್ಸಾರ್ಟಿಸಿ ಬಸ್‌ ಕಾರ್ಯಾಚರಣೆ ನಡೆ ಸಲು ಸಾರಿಗೆ ಇಲಾಖೆ ಕೇಳಿಕೊಂಡಿದೆ.

ಸಾರ್ವಜನಿಕರಿಂದ ಬರುವ ದೂರಿನನ್ವಯ ಶಾಸಕ ವೇದವ್ಯಾಸ ಕಾಮತ್‌ ನೇತೃತ್ವದಲ್ಲಿ ಸಾರಿಗೆ ಇಲಾಖೆ ಸಹಿತ ಸಂಬಂಧಪಟ್ಟ ಅಧಿಕಾರಿಗಳು, ಸಾರ್ವಜನಿಕ ರನ್ನು ಒಳಗೊಂಡು ಇತ್ತೀಚೆಗೆ ಸಭೆ ನಡೆಸಲಾಗಿತ್ತು. ಇನ್ನು ಸಾರಿಗೆ ಪ್ರಾಧಿಕಾರದ ಸಭೆ ಕೂಡ ಕೆಲವು ದಿನಗಳ ಹಿಂದೆ ನಡೆದಿದ್ದು, ಪರವಾನಿಗೆ ಹೊಂದಿದ ಮಾರ್ಗಗಳಲ್ಲಿ ಬಸ್‌ ಕಾರ್ಯಾಚರಣೆ ನಡೆಸದಿದ್ದರೆ ಅಂತಹ ರೂಟ್‌ಗಳ ಪರವಾನಿಗೆ ರದ್ದುಗೊಳಿಸುವಂತೆ ಸಾರಿಗೆ ಇಲಾಖೆಗೆ ಜಿಲ್ಲಾಧಿಕಾರಿಗಳು ಸೂಚನೆಯನ್ನೂ ನೀಡಿದ್ದರು. ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, “ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದ ಕೆಲವೊಂದು ಮಾರ್ಗಗಳಲ್ಲಿ ಬಸ್‌ ಮಾಲಕ ಕೈಯಿಂದ ಹಣ ವ್ಯಯಮಾಡಿ ಬಸ್‌ ಓಡಿಸಬೇಕಾದ ಅನಿವಾರ್ಯವಿದೆ. ಆ ರೀತಿಯ ಕೆಲವು ರೂಟ್‌ಗಳಲ್ಲಿ ಬಸ್‌ ಸಂಚಾರ ಸ್ಥಗಿತಗೊಂಡಿದೆ. 340 ಬಸ್‌ಗಳಲ್ಲಿ ಕೇವಲ 10 ಬಸ್‌ ಮಾತ್ರ ಸಂಚರಿಸುತ್ತಿಲ್ಲ. ಸಾರ್ವಜನಿಕ ಸೇವೆಗೆ ನಾವು ಸದಾ ಸಿದ್ಧ. ಕೆಲವೊಂದು ರೂಟ್‌ಗಳಲ್ಲಿ ಇನ್ನೂ ಪ್ರಯಾಣಿಕರು ಇರದ ಪರಿಣಾಮ ಆರ್‌ಟಿಒಗೆ ಸರಂಡರ್‌ ಮಾಡಿದ ಬೆರಳೆಣಿಕ ಬಸ್‌ಗಳು ಕಾರ್ಯಾಚರಿಸುತ್ತಿಲ್ಲ’ ಎನ್ನುತ್ತಾರೆ.

ಇಕ್ಕಟ್ಟಿನಲ್ಲಿ ಕೆಎಸ್ಸಾರ್ಟಿಸಿ
ನಗರದ ಸುಮಾರು ಆರು ರೂಟ್‌ಗಳಲ್ಲಿ ಕೆಎಸ್ಸಾರ್ಟಿಸಿ ಬಸ್‌ ಕಾರ್ಯಾಚರಣೆ ನಡೆಸಲು ಸಾರಿಗೆ ಇಲಾಖೆ ಈಗಾಗಲೇ ಮನವಿ ಮಾಡಿದೆ. ಆದರೆ ಸದ್ಯ ಕೆಎಸ್ಸಾರ್ಟಿಸಿಯಲ್ಲಿ ಅಷ್ಟೊಂದು ಬಸ್‌ಗಳು, ನಿರ್ವಾಹಕ, ಚಾಲಕರಿಲ್ಲ. ತಾತ್ಕಾಲಿಕ ಪರವಾನಿಗೆ ನೀಡಿ, ಕೆಲವು ತಿಂಗಳ ಬಳಿಕ ಪರವಾನಿಗೆ ರದ್ದುಗೊಳಿ ಸಿದರೆ ಅನಂತರ ಯಾವ ರೂಟ್‌ಗಳಲ್ಲಿ ಆ ಬಸ್‌ ಕಾರ್ಯಾಚರಣೆ ನಡೆಸು ವುದು ಎಂಬ ಗೊಂದಲದಲ್ಲಿ ಕೆಎಸ್ಸಾರ್ಟಿಸಿಗೆ ಇದೆ. ಈ ನಿಟ್ಟಿನಲ್ಲಿ ಶಾಸಕರ ಸೂಚನೆಯ ಅನ್ವಯ ಮುಂದಿನ ನಿರ್ಧಾರ ಕೈಗೊಳ್ಳಲು ಕೆಎಸ್ಸಾರ್ಟಿಸಿ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಸೂಕ್ತ ಕ್ರಮ
ನಗರದ ಕೆಲವು ರೂಟ್‌ಗಳಲ್ಲಿ ಹಿಂದೆ ಕಾರ್ಯಾಚರಿ ಸುತ್ತಿದ್ದ ಸಿಟಿ ಬಸ್‌ಗಳು ಓಡುತ್ತಿಲ್ಲ ಎಂಬ ದೂರು ನನಗೆ ಬಂದಿತ್ತು. ಈ ಕುರಿತಂತೆ ಸಾರ್ವಜನಿಕರು, ಕೆಎಸ್ಸಾರ್ಟಿಸಿ, ಸಾರಿಗೆ ಇಲಾಖೆ ಸಹಿತ ಇನ್ನಿತರ ಸಂಸ್ಥೆಗಳ ಜತೆ ಸಭೆ ನಡೆಸಿ ದ್ದೇನೆ. ಅದರಂತೆ ಸದ್ಯ ಮರೋಳಿ ಮಾರ್ಗವಾಗಿ ನರ್ಮ್ ಬಸ್‌ ಕಾರ್ಯಾಚರಣೆ ನಡೆಸಲು ಸೂಚಿಸಿದ್ದೇನೆ. ಆದರೂ ಇನ್ನೂ ಹಲವು ಮಾರ್ಗಗಳಲ್ಲಿ ಬಸ್‌ ಓಡಾಟಕ್ಕೆ ಆಗ್ರಹ ಕೇಳಿಬರುತ್ತಿದೆ. ಸಾರ್ವಜನಿಕರ ಬೇಡಿಕೆ ಈಡೇರಿಕೆ ನನ್ನ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸಂಬಂಧಪಟ್ಟವರ ಜತೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಡಿ. ವೇದವ್ಯಾಸ ಕಾಮತ್‌, ಶಾಸಕರು

Advertisement

 -ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next