Advertisement

ಬಸ್‌ ಗೆ ಕಲ್ಲು ಎಸೆದ ಕಿಡಿಗೇಡಿಗಳು: ಸಾರಿಗೆ ನೌಕರರ ಮುಷ್ಕರಕ್ಕೆ ಚಾಲಕ ಬಲಿ

06:11 PM Apr 16, 2021 | Team Udayavani |

ಬಾಗಲಕೋಟೆ: 6ನೇ ವೇತನ ಆಯೋಗ ಜಾರಿಗೊಳಿಸುವಂತೆ ಒತ್ತಾಯಿಸಿ ರಾಜ್ಯದಲ್ಲಿ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರ ಹೋರಾಟ ತೀವ್ರಗೊಂಡಿದ್ದು, ಮುಷ್ಕರದ ವೇಳೆಯೂ ಸೇವಾನಿರತವಾಗಿದ್ದ ಸಾರಿಗೆ ಸಂಸ್ಥೆಯ ಚಾಲಕನೊಬ್ಬ ಬಲಿಯಾಗಿದ್ದಾನೆ.

Advertisement

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟೆ ವಿಭಾಗೀಯ ಜಮಖಂಡಿ ಘಟಕದ ಚಾಲಕ ನಭಿರಸೂಲ ಅವಟಿ (59) ಶುಕ್ರವಾರ ಮೃತಪಟ್ಟಿದ್ದಾರೆ. ಚಾಲಕ ನಭಿರಸೂಲ ಅವರು ಬೆಳಗ್ಗೆ ಸೇವೆಗೆ ಹಾಜರಾಗಿದ್ದರು. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗಿಯಿಂದ ಜಮಖಂಡಿಗೆ ಮರಳುತ್ತಿದ್ದ ವೇಳೆ ಜಮಖಂಡಿ ತಾಲೂಕು ಚಿಕ್ಕಪಡಸಲಗಿ ಬಳಿ ಬಸ್‌ಗೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಈ ವೇಳೆ ಚಾಲಕನ ಕುತ್ತಿಗೆಗೆ ನೇರವಾಗಿ ಕಲ್ಲು ಬಡಿದಿದ್ದರಿಂದ ತೀವ್ರವಾಗಿ ಗಾಯಗೊಂಡ ಚಾಲಕ ರಸೂಲ ಅವರನ್ನು ಜಮಖಂಡಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಗಾಯಗೊಂಡರೂ 39 ಜನರ ಪ್ರಾಣ ಕಾಪಾಡಿದ:

ನಭಿರಸೂಲ ಅವರು ಬಸ್ ಚಾಲನೆ ಮಾಡುತ್ತಿದ್ದ ವೇಳೆಯೇ ವೇಗವಾಗಿ ಬಂದ ಕಲ್ಲು ಗಂಟಲು ಭಾಗಕ್ಕೆ ಬಡಿದಿತ್ತು. ಬಸ್‌ನಲ್ಲಿ ಒಟ್ಟು 39 ಜನ ಪ್ರಯಾಣಿಕರಿದ್ದರು. ಈ ವೇಳೆ ತಕ್ಷಣ ಬ್ರೇಕ್ ಹಾಕಿದ ಬಸ್ ನಿಲ್ಲಿಸಿದ ಚಾಲಕ ರಸೂಲ್, ಮುಂದಾಗುವ ಅನಾಹುತ ತಪ್ಪಿಸಿದ್ದರು. ಆದರೆ, ಕೆಲವೇ ಗಂಟೆಗಳಲ್ಲಿ ಅವರ ಪ್ರಾಣವೇ ಹಾರಿ ಹೋಗಿತ್ತು.

ಕಳೆದ ಆಗಸ್ಟ 15ರಂದು ರಾಜ್ಯ ಮಟ್ಟದಲ್ಲಿ ಅಪಘಾತರಹಿತ ಚಾಲನೆ ಮಾಡಿದ್ದಕ್ಕಾಗಿ ರಸೂಲ್ ಅವರಿಗೆ ಪ್ರಶಸ್ತಿ ಕೂಡ ಬಂದಿತ್ತು. 59 ವರ್ಷದ ಚಾಲಕ ರಸೂಲ್ ಅವರಿಗೆ ಪತ್ನಿ, ನಾಲ್ವರು ಮಕ್ಕಳಿದ್ದು, ಇನ್ನೊಂದು ವರ್ಷದಲ್ಲಿ ಸೇವಾ ನಿವೃತ್ತಿ ಹೊಂದಲಿದ್ದರು.

Advertisement

ಕುಟುಂಬದ ಆಕ್ರಂದನ:

ಮುಷ್ಕರದ ಮಧ್ಯೆಯೂ ಘಟಕದ ಅಧಿಕಾರಿಗಳ ಮನವಿ ಮೇರೆಗೆ ಸೇವೆಗೆ ಬಂದಿದ್ದ ನಭಿರಸೂಲ್, ಸಂಜೆಯ ಹೊತ್ತಿಗೆ ಹೆಣವಾಗಿದ್ದನ್ನು ಕಂಡು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಬಸ್‌ಗೆ ಕಲ್ಲು ಎಸೆದವರ ಪತ್ತೆಗಾಗಿ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಸೂಚನೆ ನೀಡಿದ್ದು, ಈ ಕುರಿತು ಜಮಖಂಡಿ ತಾಲೂಕಿನ ಸಾವಳಗಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ನಾಲ್ವರ ಬಂಧನ:

ಬಸ್ ಗೆ ಕಲ್ಲು ಎಸೆದಿದ್ದಲ್ಲದೇ, ಓರ್ವ ಚಾಲಕನ ಸಾವಿಗೆ ಕಾರಣವಾಗಿದ್ದಾರೆ ಎನ್ನಲಾದ ನಾಲ್ವರನ್ನು ಸಂಶಯಾಸ್ಪದವಾಗಿ ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೇ ವಿಜಯಪುರ-ಜಮಖಂಡಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಜಮಖಂಡಿಯ ಘಟಕದ ಮತ್ತೊಂದು ಬಸ್ ಗೂ ಆಲಗೂರ ಬಳಿ ಕಲ್ಲು ಎಸೆಯಲಾಗಿದೆ. ಆದರೆ, ಯಾವುದೇ ರೀತಿಯ ಪ್ರಾಣಹಾನಿಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next