ದೇವನಹಳ್ಳಿ: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರು ಬಸ್‌ಗಳ ಸಂಚಾರ ಸ್ಥಗಿತಗೊಳಿಸಿ, ನಡೆಸುತ್ತಿರುವ ಮುಷ್ಕರದಿಂದ ಜಿಲ್ಲಾದ್ಯಂತ ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ಬಸ್ ಸಿಗದೇ ಪರದಾಡಿದರು. ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಮತ್ತಿತರರ ಸ್ಥಳಗಳಿಗೆ ಹೋಗಬೇಕಿದ್ದ ಪ್ರಯಾಣಿಕರು ಖಾಸಗಿ ಬಸ್‌ಗಾಗಿ ನಿಲ್ದಾಣ ದಲ್ಲಿಯೇ ಕಾಯುತ್ತಿದ್ದರು. ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರು ನೂಕು ನುಗ್ಗಲಿನಲ್ಲೇ ಪ್ರಯಾಣ ಬೆಳೆಸುವಂತಾಗಿತ್ತು.
ವಿಮಾನ ನಿಲ್ದಾಣಕ್ಕೆ ತಟ್ಟಿದ ಬಿಸಿ: ಸಾರಿಗೆ ನೌಕರರ ಮುಷ್ಕರ ಬಿಸಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ತಟ್ಟಿತ್ತು. ರಾತ್ರಿ ಪಾಳಿಯಲ್ಲಿ ಬಂದಿದ್ದ ವಾಯುವಜ್ರ ಬಸ್‌ಗಳು ಡಿಪೋಗಳತ್ತ ಮುಖಮಾಡಿದ್ದವು. ವಿಮಾನ ನಿಲ್ದಾಣದಲ್ಲಿ
ಬಿಎಂಟಿಸಿ ಬಸ್ ನಿಲ್ದಾಣಗಳು ಇಲ್ಲದೆ ನಿಲ್ದಾಣ ಖಾಲಿ ಆಗಿತ್ತು. ಪ್ರಯಾಣಿಕರು ಟ್ಯಾಕ್ಸಿಗಳ ಮೊರೆ ಹೋಗುವಂತೆ ಆಯಿತು. ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಇಡೀ ದಿನ ಒಂದೇ ಒಂದು ಬಸ್ ಬಂದಿಲ್ಲ. ಟ್ಯಾಕ್ಸಿಗಳಲ್ಲಿ ದುಪ್ಪಟ್ಟು ಹಣಕೊಟ್ಟು ಹೋಗಬೇಕಾದ ಪರಿಸ್ಥಿತಿ ವಿಮಾನ ಪ್ರಯಾಣಿಕರದ್ದಾಗಿತ್ತು. ವಿಮಾನ ನಿಲ್ದಾಣದಿಂದ ದಿನಕ್ಕೆ 300 ಟ್ರಿಪ್ ಹೋಗುತ್ತಿದ್ದ ಬಸ್ ಗಳು, ಮುಷ್ಕರ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಿದ್ದವು.
ಬಸ್ ನಿಲ್ದಾಣಕ್ಕೆ ಆರ್‌ಟಿಒ ಭೇಟಿ: ಸಾರಿಗೆ ನೌಕರರಮುಷ್ಕರದ ಹಿನ್ನೆಲೆಯಲ್ಲಿ ಪಟ್ಟಣದ ಬಸ್ ನಿಲ್ದಾಣದಿಂದ ಖಾಸಗಿ ಬಸ್ ಸಂಚಾರ ಮಾಡುತ್ತಿದ್ದರಿಂದ ಎಆರ್‌ಟಿಒ ಉಮೇಶ್ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ಸಾರಿಗೆ ನೌಕರರ ಮುಷ್ಕರ ಇರುವುದರಿಂದ ಖಾಸಗಿ ಬಸ್ ಗಳಲ್ಲಿ ಹೆಚ್ಚು ಹಣ ತೆಗೆದುಕೊಳ್ಳಬಾರದು. ಪ್ರಯಾಣಿಕರಿಂದ ದೂರು ಬಂದರೆ ತಕ್ಷಣ ನಿಮ್ಮ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಬಾರದು. 60ಕ್ಕೂ ಹೆಚ್ಚು ಖಾಸಗಿ ಬಸ್‌ಗಳ ಓಡಾಟಕ್ಕೆ ಅನುಮತಿ ನೀಡಲಾಗಿದೆ ಎಂದು ಹೇಳಿದರು. ಪ್ರಯಾಣಿಕರಿಗೆ ತೊಂದರೆ ಯಾಗದಂತೆ ಆರ್ ಟಿಒ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕಾಂ ಹೂಡಿದ್ದರು.
ನಮ್ಮ ಬೇಡಿಕೆ ಈಡೇರುವ ತನಕ, ರಾಜ್ಯ ಸಂಘದಿಂದ ಆದೇಶ ಬರುವ ತನಕ ಬಸ್ ಓಡಿಸುವುದಿಲ್ಲ. ಸರ್ಕಾರಿ ನೌಕರರೆಂದು ನಮ್ಮನ್ನೂ ಪರಿಗಣಿಸಬೇಕು. ನಮ್ಮ ಹಲವು ಬೇಡಿಕೆ ಸರ್ಕಾರ ಶೀಘ್ರವೇ ಈಡೇರಿಸುವಂತೆ ಆಗಬೇಕು.
- ಮಂಜುನಾಥ್, ಬಿಎಂಟಿಸಿ ಬಸ್ ಚಾಲಕ
ಬೆಂಗಳೂರಿನ ಮಾರುಕಟ್ಟೆಗೆ ತಾವು ಬೆಳೆದ ಹೂ, ತರಕಾರಿ ನಿತ್ಯ ತೆಗೆದು ಕೊಂಡು ಹೋಗುತ್ತಿದ್ದೆವು. ರಸ್ತೆ ಸಾರಿಗೆ ಸಂಸ್ಥೆ ಬಸ್ ಇಲ್ಲದೆ ಪರದಾಡುವಂತೆ ಆಗಿದೆ. ಕೃಷಿ ಉತ್ಪನ್ನ ನಿಗದಿತ ಸಮಯಕ್ಕೆ ತಲುಪಿಸಲು ಆಗುತ್ತಿಲ್ಲ.