ಗಂಗಾವತಿ : ಕೆಎಸ್ ಆರ್ ಟಿಸಿ ಗಂಗಾವತಿ ಮತ್ತು ಕೊಪ್ಪಳ ವಿಭಾಗದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಆನೆಗೊಂದಿ ಸಣಾಪುರ ಭಾಗದ ವಿದ್ಯಾರ್ಥಿಗಳು ಮನೆ ಸೇರಲು 4-5 ತಾಸು ಹರ್ಲಾಪುರ ಬಸ್ ನಿಲ್ದಾಣದಲ್ಲಿ ಕಾಯುವಂತ ಸ್ಥಿತಿ ಉಂಟಾಗಿದೆ .
ಪ್ರತಿ ನಿತ್ಯವೂ ಬೆಳಿಗ್ಗೆ ಮತ್ತು ಸಂಜೆ ಶಾಲೆಗೆ ಹೋಗಲು ವಾಪಾಸ್ಸು ಮನೆಗೆ ಬರಲು ಕೆಎಸ್ಆರ್ಟಿಸಿ ಬಸ್ಗಳು ವಿದ್ಯಾರ್ಥಿಗಳಿಗೆ ಅಗತ್ಯವಾಗಿದ್ದು ನಿಯಮಿತ ಸಮಯಕ್ಕೆ ಕೆಎಸ್ ಆರ್ ಟಿಸಿ ಬಸ್ ಗಳು ಬಾರದೇ ಇರುವುದರಿಂದ ವಿದ್ಯಾರ್ಥಿಗಳು 8 ಕಿಲೋಮೀಟರ್ ಮನೆಗೆ ಹೋಗಲು ಸುಮಾರು 4 ತಾಸುಗಳ ಪರದಾಟ ಬಸ್ ನಿಲ್ದಾಣದಲ್ಲಿಯೇ ಕಾಯುವಂತ ಸ್ಥಿತಿ ಉಂಟಾಗಿದೆ .
ಆನೆಗೊಂದಿ, ಹನುಮನಹಳ್ಳಿ, ವಿರುಪಾಪುರ ಗಡ್ಡೆ ,ಸಣಾಪೂರ, ತಿರುಮಲಾಪುರ ಮತ್ತು ಬಸಾಪುರ ಈ ಭಾಗದ ವಿದ್ಯಾರ್ಥಿಗಳು ಹರ್ಲಾಪುರದಲ್ಲಿರುವ ಶಾಲೆ, ಜೂನಿಯರ್ ಕಾಲೇಜ್ ಮತ್ತು ಪದವಿ ಕಾಲೇಜುಗಳಿಗೆ ತೆರಳಲು ಕೆಎಸ್ ಆರ್ ಟಿಸಿ ಬಸ್ ಗಳನ್ನು ಅವಲಂಬಿಸಿದ್ದಾರೆ.
ಕಳೆದ 6 ತಿಂಗಳಿಂದ ನಿಗದಿತ ಸಮಯಕ್ಕೆ ಬಸ್ ಗಳು ಬರುವುದಿಲ್ಲ ಪ್ರತ್ಯೇಕವಾಗಿ ಶುಕ್ರವಾರ ಮಂಗಳವಾರ ಹುಣ್ಣಿಮೆ ಮತ್ತು ಶನಿವಾರದಂದು ಬಸ್ ಗಳು ನಿಗದಿತ ಸಮಯಕ್ಕೆ ಬಾರದೇ ಇರುವುದರಿಂದ ವಿದ್ಯಾರ್ಥಿಗಳು ಚಿಕ್ಕ ಮಕ್ಕಳು ಬಸ್ ನಿಲ್ದಾಣದಲ್ಲೇ ಕಾಲ ಕಳೆಯುವಂತಾಗಿದೆ ಇದರಿಂದ ವಿದ್ಯಾರ್ಥಿಗಳ ಮಕ್ಕಳ ಆರೋಗ್ಯದ ಮೇಲೆ ಪರಿಣಾಮವಾಗುತ್ತಿದ್ದು ಕೆಎಸ್ ಆರ್ ಟಿಸಿ ಅಧಿಕಾರಿಗಳು ಸೂಕ್ತ ಸಮಯಕ್ಕೆ ಬಸ್ಸುಗಳನ್ನು ಬಿಡುವಂತೆ ಸ್ಥಳೀಯರು ಶಾಸಕರಾದ ಪರಣ್ಣ ಮುನವಳ್ಳಿ ಮತ್ತು ಕೆ.ರಾಘವೇಂದ್ರ ಹಿಟ್ನಾಳ್ ಮೂಲಕ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರ ಗಮನಕ್ಕೆ ತಂದ ನಂತರ ಕೆಲವು ತಿಂಗಳು ಕಾಲ ನಿಗದಿತ ಸಮಯಕ್ಕೆ ಬಸ್ ಓಡಿಸಿ ನಂತರ ಮೊದಲಿನಂತೆಯೇ ಬಸ್ಸುಗಳು ತಡವಾಗಿ ಬರುತ್ತಿದೆ .ಶನಿವಾರ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಕಾರ್ಯ ನಿರ್ವಹಿಸುತ್ತಿದ್ದು ಈ ಸಮಯದಲ್ಲಿ ಬಸ್ ಗಳು ಈ ಹರ್ಲಾಪುರ್ ಆನೆಗುಂದಿ ಮಾರ್ಗದಲ್ಲಿ ಸಂಚಾರ ಮಾಡಬೇಕಿದೆ.
ಇದನ್ನೂ ಓದಿ : ಫೇಸ್‌ಬುಕ್‌ನಲ್ಲಿ ಯುವತಿ ಹೆಸರಿನಲ್ಲಿ ನಕಲಿ ಖಾತೆ: 19 ಲಕ್ಷ ಬಾಚಿದ್ದ ಖದೀಮ ಅಂದರ್!
ಈ ಭಾಗದ ಜನರು ಮತ್ತು ವಿದ್ಯಾರ್ಥಿಗಳ ಪಾಲಕರು ಹಲವು ಬಾರಿ ಮನವಿ ಮಾಡಿದರೂ ಕೆಎಸ್ಆರ್ಟಿಸಿ ಗಂಗಾವತಿ ಕೊಪ್ಪಳ ಡಿಪೋದ ಮ್ಯಾನೇಜರ್ ಗಳು ಮತ್ತು ಕೆಎಸ್ಆರ್ಟಿಸಿ ಜಿಲ್ಲಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಬಸ್ಸುಗಳು ತಡವಾಗಿ ಬರುವುದರಿಂದ ವಿದ್ಯಾರ್ಥಿಗಳು ತಡವಾಗಿ ಮನೆಗೆ ಬರುತ್ತಾರೆ ಇದರಿಂದ ಮನೆಯಲ್ಲಿ ಅವರು ಆಟವಾಡಲು ಮಲಗಲು ಮತ್ತು ಶಾಲಾ ಹೋಮ್ ವರ್ಕ್ ಮಾಡಲು ಸಮಯ ಸಾಕಾಗದೆ ಆರೋಗ್ಯದ ಮೇಲೆ ಪರಿಣಾಮವಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ನಿತ್ಯವೂ ಊಟ ನಿದ್ದೆ ಸರಿಯಾಗಿ ಮಾಡುತ್ತಿಲ್ಲ ಎಂದು ವಿದ್ಯಾರ್ಥಿಗಳ ಪಾಲಕರಾದ ನಾಣಾಪುರದ ರಾಮಾಂಜಿನೇಯ ನಾಯಕ್ ಉದಯವಾಣಿಯೊಂದಿಗೆ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.