Advertisement

KSRTC Bus: ನಿಲ್ಲದ ಕೆಎಸ್‌ಆರ್‌ಟಿಸಿ ಬಸ್‌: ತಪ್ಪದ ನಡಿಗೆ

03:50 PM Dec 08, 2023 | Team Udayavani |

ಚಿಕ್ಕಬಳ್ಳಾಪುರ: ಗ್ರಾಮೀಣ ಭಾಗದಲ್ಲಿ ಬಸ್‌ ಸೌಕರ್ಯದ ಕೊರತೆಯಿಂದ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಹೋಗುವುದು ಸಾಮಾನ್ಯ. ಆದರೆ ನಗರ ಭಾಗದಲ್ಲಿಯೆ ಬಸ್‌ ನಿಲುಗಡೆಗೆ ದಮ್ಮಯ್ಯ ಅಂದರೂ ಕೆಎಸ್‌ಆರ್‌ಟಿಸಿ ತಿರುಗಿ ನೋಡದ ಕಾರಣ ಮಹಿಳಾ ಪದವಿ ಕಾಲೇಜು ವಿದ್ಯಾರ್ಥಿನಿಯರು ನಿತ್ಯ ಒಂದು ಕಿ.ಮೀ ಕಾಲ್ನಡಿಗೆಯಲ್ಲಿ ಕಾಲೇಜಿಗೆ ತೆರಳಬೇಕು.

Advertisement

ಹೌದು, ನಗರದಲ್ಲಿದ್ದ ಸರ್ಕಾರಿ ಮಹಿಳಾ ಪದವಿ ಕಾಲೇಜು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಬಳಿಕ ಸಮಸ್ಯೆಗಳ ಭಾರ ಮುಂದುವರೆದಿದೆ. ನಗರದ ಹೊರ ವಲಯದಲ್ಲಿರುವ ಕಾಲೇಜಿಗೆ ನಗರದಿಂದ ತೆರಳುವ ಕೆಎಸ್‌ಆರ್‌ ಟಿಸಿ ಬಸ್‌ಗಳಲ್ಲಿ ವಿದ್ಯಾರ್ಥಿಗಳ ಪ್ರಯಾಣಕ್ಕೆ ನಿರ್ವಾಹಕರು, ಚಾಲಕರು ಅವಕಾಶ ಕೊಡದಿದ್ದಕ್ಕೆ ನಿತ್ಯ ನಡಿಗೆಯಲ್ಲಿ ಕಾಲೇಜಿಗೆ ತೆರಳಬೇಕಿದೆ.

ಆದೇಶ ಇದ್ದರೂ ಪಾಲನೆ ಇಲ್ಲ: ವಿದ್ಯಾರ್ಥಿನಿಯರ ಸುರಕ್ಷರತೆ ದೃಷ್ಠಿಯಿಂದ ಮಹಿಳಾ ಕಾಲೇಜ್‌ ಬಳಿ ಕಡ್ಡಾಯವಾಗಿ ಕೆಎಸ್‌ಆರ್‌ಟಿಸಿ ಬಸ್‌ ನಿಲುಗಡೆ ಮಾಡಬೇಕೆಂಬ ಆದೇಶ ಮಾಡಿದ್ದರೂ, ಅದನ್ನು ಬಸ್‌ ಚಾಲಕ, ನಿರ್ವಾಹಕರು ಪಾಲಿಸದ ಪರಿಣಾಮ ನಗರ ಭಾಗದಲ್ಲಿಯೆ ವಿದ್ಯಾರ್ಥಿನಿಯರು ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಸಂಚರಿಸಬೇಕಾದ ದುಸ್ಥಿತಿ ಇದೆ.

ಮೊದಲೇ ಶಿಡ್ಲಘಟ್ಟ ರಸ್ತೆ ಡೀಸಿ ಕಚೇರಿವರೆಗೂ ಅಗಲೀಕರಣ ಆಗಿಲ್ಲ. ರಸ್ತೆ ಎರಡು ಬದಿ ಸಮರ್ಪಕವಾಗಿ ಪುಟ್‌ಪಾತ್‌ ಇಲ್ಲ. ಕಿರಿದಾದ ರಸ್ತೆಗಳಲ್ಲಿ ವಾಹನಗಳ ದಟ್ಟಣೆಯು ಇದೆ. ಇದರ ನಡುವೆ ನಗರದಿಂದ ಮಹಿಳಾ ಕಾಲೇಜ್‌ ವರೆಗೂ ವಿದ್ಯಾರ್ಥಿನಿಯರು ನಡಿಗೆ ಮೂಲಕ ಕಾಲೇಜ್‌ಗೆ ತೆರಳುತ್ತಿರುವುದು ನಿಜಕ್ಕೂ ಕೆಎಸ್‌ಆರ್‌ ಟಿಸಿ ತಲೆ ತಗ್ಗಿಸುವ ವಿಚಾರ. ಸಾಕಷ್ಟು ವಿದ್ಯಾರ್ಥಿನಿಯರು ಮಾಸಿಕ ಹಾಗೂ ವಾರ್ಷಿಕ ಬಸ್‌ ಪಾಸ್‌ ಮಾಡಿಸಿದ್ದಾರೆ. ಶಕ್ತಿ ಯೋಜನೆ ಮೂಲಕ ಉಚಿತ ಪ್ರಯಾಣಕ್ಕೂ ಅವಕಾಶ ಇದೆ. ಆದರೆ ನಗರದಿಂದ ಶಿಡ್ಲಘಟ್ಟ, ಚಿಂತಾಮಣಿಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ಜಿಲ್ಲಾ ಕೇಂದ್ರದಿಂದ ಹೊರಡುವಾಗ ಆ ಕಡೆಯಿಂದ ಬರುವಾಗ ಮಹಿಳಾ ಕಾಲೇಜ್‌ ಬಳಿ ನಿಲುಗಡೆ ಕೊಡದೇ ವಿದ್ಯಾರ್ಥಿನಿಯರು ನಗರಕ್ಕೆ ನಡಿಗೆಯಲ್ಲಿ ಬರುವಂತಾಗಿದ್ದು, ಈ ಬಗ್ಗೆ ಸಂಬಂಧ ಪಟ್ಟ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕೆಂಬ ಒತ್ತಾಯ ವಿದ್ಯಾರ್ಥಿನಿಯರು, ಉಪನ್ಯಾಸಕರಿಂದ ಕೇಳಿ ಬರುತ್ತಿದೆ.

ಆದೇಶ ಮಾಡಿದರೂ ನಿಲುಗಡೆ ಮಾಡುತ್ತಿಲ್ಲ : ಮಹಿಳಾ ಪದವಿ ಕಾಲೇಜು ಮುಂದೆ ಕೆಎಸ್‌ ಆರ್‌ಟಿಸಿ ಬಸ್‌ಗಳ ನಿಲುಗಡೆ ಮಾಡುವಂತೆ ಇಲಾಖೆ ಡೀಸಿ ಆದೇಶ ಮಾಡಿದರೂ ಬಸ್‌ ಚಾಲಕರು, ನಿರ್ವಾಹಕರು ಯಾರು ಆದೇಶವನ್ನು ಪಾಲಿಸುತ್ತಿಲ್ಲ. ಇದರಿಂದ ಅರ್ಧ ಕಿ.ಮೀ ದೂರ ವಿದ್ಯಾರ್ಥಿಗಳು ನಗರದಿಂದ ಕಾಲೇಜಿಗೆ ನಡೆದುಕೊಂಡು ಬರುತ್ತಾರೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಗಮನ ಹರಿಸಬೇಕೆಂದು ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಿ.ಚಂದ್ರಯ್ಯ ತಿಳಿಸಿದರು.

Advertisement

ಮಹಿಳಾ ಕಾಲೇಜು ಬಳಿ ಕೆಎಸ್‌ಆರ್‌ ಟಿಸಿ ಬಸ್‌ಗಳ ನಿಲುಗಡೆಗೆ ಆದೇಶ ಮಾಡಲಾಗಿದೆ. ಜತೆಗೆ ಕಾಲೇಜ್‌ ಬಳಿ ಸೂಚನ ಫ‌ಲಕ ಸಹ ಕೆಎಸ್‌ಆರ್‌ಟಿಸಿ ಯಿಂದ ಅಳವಡಿಸಿದ್ದೇವೆ. ಇನ್ನೊಮ್ಮೆ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ವಹಿಸುತ್ತೇವೆ. ●ಹಿಮವರ್ಧನ ನಾಯ್ದು ಅಲ್ಲೂರಿ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next