ಹುಬ್ಬಳ್ಳಿ: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ(ಕೆಎಸ್‌ಐಸಿ)ದಿಂದ ಶೀಘ್ರದಲ್ಲೇ ಮುಂಬಯಿ, ದೆಹಲಿ ಹಾಗೂ ಹುಬ್ಬಳ್ಳಿಯಲ್ಲಿ ಮಳಿಗೆ ತೆರೆಯಲು ಯೋಜಿಸಲಾಗಿದೆ ಎಂದು ನಿಗಮದ ಮಾರುಕಟ್ಟೆ, ಮಾಹಿತಿ ತಂತ್ರಜ್ಞಾನದ ವ್ಯವಸ್ಥಾಪಕ ಭಾನುಪ್ರಕಾಶ ಹೇಳಿದರು.
ಇಲ್ಲಿನ ಜೆ.ಸಿ. ನಗರದ ಭಗಿನಿ ಮಂಡಳದಲ್ಲಿ ಕೆಎಸ್‌ಐಸಿಯಿಂದ ಮಂಗಳವಾರದಿಂದ ಆರಂಭವಾದ ಮೈಸೂರು ಸಿಲ್ಕ್ಸ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಮಾತನಾಡಿದ ಅವರು, ನಿಗಮ ವರ್ಷಕ್ಕೆ 175 ಕೋಟಿ ರೂ. ವಹಿವಾಟು ನಡೆಸುತ್ತಿದೆ. ಪ್ರತಿ ವರ್ಷ 80 ಸಾವಿರ ರೇಷ್ಮೆ ಸೀರೆ ಉತ್ಪಾದಿಸುತ್ತಿದೆ. ಮುಂದಿನ ವರ್ಷದಲ್ಲಿ 30 ಸಾವಿರ ಹೆಚ್ಚಳ ಮಾಡುವ ಗುರಿಯಿದೆ. ತನ್ಮೂಲಕ ನಿಗಮದಿಂದ ಇನ್ನಿತರೆ ನಗರಗಳಲ್ಲೂ ಮಳಿಗೆ ತೆರೆಯಲು ಚಿಂತನೆ ನಡೆದಿದೆ ಎಂದರು.
ನಿಗಮದಿಂದ ಈಗಾಗಲೇ ಚೆನ್ನೈ, ಹೈದರಾಬಾದ್ ಒಳಗೊಂಡಂತೆ ಬೆಂಗಳೂರಿನಲ್ಲಿ 8, ಮೈಸೂರಿನಲ್ಲಿ 6, ಚನ್ನಪಟ್ಟಣ ಮತ್ತು ದಾವಣಗೆರೆ ಸೇರಿ ಒಟ್ಟು 18 ಮಳಿಗೆಗಳನ್ನು ತೆರೆಯಲಾಗಿದೆ. ಇನ್ನುಳಿದೆಡೆ ಪ್ರದರ್ಶನ ಹಾಗೂ ಮಾರಾಟ ಮೇಳ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಶೀಘ್ರವೇ ಉತ್ತರ ಮುಂಬಯಿಯ ಎಂಎಸ್‌ಐಐ ಕಟ್ಟಡದಲ್ಲಿ, ದೆಹಲಿ ಮತ್ತು ಹುಬ್ಬಳ್ಳಿಯಲ್ಲಿ ಮಳಿಗೆ ತೆರೆಯಲು ಯೋಜಿಸಲಾಗಿದೆ. ನಿಗಮ 2012ರಲ್ಲಿ ಶತಮಾನೋತ್ಸವ ಪೂರೈಸಿದೆ. ಕೆಎಸ್‌ಐಸಿಯ ಮೈಸೂರು ಸಿಲ್ಕ್ಸ್ ಸೀರೆಗಳಿಗೆ ಭೌಗೋಳಿಕ ಗುರುತಿನ ನೋಂದಣಿ ಜಿಐ-11 ಪಡೆದುಕೊಂಡಿದೆ ಎಂದರು.
ನಿಗಮದಲ್ಲಿ ಅಂದಾಜು 14 ಸಾವಿರದಿಂದ 2.5 ಲಕ್ಷ ರೂ. ವರೆಗಿನ ರೇಷ್ಮೆ ಸೀರೆಗಳು ಇವೆ. ಶೇ. 0.65 ಚಿನ್ನ ಹಾಗೂ ಶೇ. 65 ಬೆಳ್ಳಿಯಿಂದ ಸೀರೆ ಜರಿ ತಯಾರಿಸಲಾಗಿದೆ. ಸೀರೆ ಕನಿಷ್ಠ 5.5 ಮೀಟರ್ ಉದ್ದವಿದೆ. ನಗರದಲ್ಲಿ ಮೈಸೂರು ಸಿಲ್ಕ್ಸ್ ಸೀರೆಗಳ ಪ್ರದರ್ಶನ ಮತ್ತು ಮಾರಾಟವು ಆ. 10ರ ವರೆಗೆ ಪ್ರತಿದಿನ ಬೆಳಗ್ಗೆ 10ರಿಂದ ರಾತ್ರಿ 8ರ ವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಶೇ. 10ರಿಂದ 25ರ ವರೆಗೆ ವಿಶೇಷ ರಿಯಾಯಿತಿ ನೀಡಲಾಗುವುದು ಎಂದರು. ಡಿಮಾನ್ಸ್‌ನ ಆಡಳಿತಾಧಿಕಾರಿ ಶಾರದಾ ಕೋಲ್ಕರ ಪ್ರದರ್ಶನ-ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಆಧುನಿಕತೆಗೆ ಎಷ್ಟೇ ಒಗ್ಗಿದರೂ ಸೀರೆ ಧರಿಸಿದಾಗಲೇ ಅವಳಿಗೆ ಶೋಭೆ ಬರುತ್ತದೆ. ಮೈಸೂರು ಸಿಲ್ಕ್ಸ್ ತನ್ನದೆಯಾದ ಹಿರಿಮೆ, ಗೌರವ ಹೊಂದಿದೆ ಎಂದರು.