Advertisement

Jan 13 ರಂದು KSET ಪರೀಕ್ಷೆ: ಪ್ರವೇಶಪತ್ರ ಡೌನ್ ಲೋಡ್ ಗೆ ಸೂಚನೆ, ಕಡ್ಡಾಯ ವಸ್ತ್ರ ಸಂಹಿತೆ

04:42 PM Jan 03, 2024 | Team Udayavani |

ಬೆಂಗಳೂರು: ಜ.13ರಂದು ನಡೆಯುವ ಕೆ-ಸೆಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು //kea.kar.nic.in ಜಾಲತಾಣದಲ್ಲಿ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಬುಧವಾರ ತಿಳಿಸಿದ್ದಾರೆ.

Advertisement

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದು, ಅಭ್ಯರ್ಥಿಗಳು ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವ ಮುನ್ನ ಪ್ರವೇಶಪತ್ರ ಮತ್ತು ಸರಕಾರದಿಂದ ಮಾನ್ಯವಾಗಿರುವ ನಿಗದಿತ ಬಗೆಯ ಗುರುತಿನ ಪತ್ರವನ್ನು ತೋರಿಸುವುದು ಕಡ್ಡಾಯವಾಗಿದೆ. ಜತೆಗೆ ಪ್ರವೇಶಪತ್ರದಲ್ಲಿ ನಮೂದಿಸಿರುವ ಪರೀಕ್ಷಾ ಕೇಂದ್ರದಲ್ಲಷ್ಟೆ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಬೇಕು. ಅಲ್ಲದೆ, ಇತ್ತೀಚಿನ ಎರಡು ಭಾವಚಿತ್ರಗಳನ್ನು ತರಬೇಕು ಎಂದಿದ್ದಾರೆ.

ಪರೀಕ್ಷೆಯು ಅಂದು ಬೆಳಗ್ಗೆ 10ರಿಂದ 11 ಮತ್ತು ಮಧ್ಯಾಹ್ನ 12ರಿಂದ 2 ಗಂಟೆಯವರೆಗೆ ನಡೆಯಲಿದೆ. ಇದರ ನಡುವೆ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಿಂದ ಹೊರಹೋಗಲು ಅವಕಾಶ ಕೊಡಲಾಗುವುದಿಲ್ಲ. ಓಎಂಆರ್ ಶೀಟ್ ಮೇಲೆ ಅಭ್ಯರ್ಥಿಗಳೇನಾದರೂ ತಮ್ಮ ನೋಂದಣಿ ಸಂಖ್ಯೆ, ವಿಷಯದ ಕೋಡ್ ಮತ್ತು ಪರೀಕ್ಷಾ ಕೇಂದ್ರದ ಕೋಡ್ ಅನ್ನು ತಪ್ಪಾಗಿ ನಮೂದಿಸಿದಲ್ಲಿ ಅಂಥವರ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ವಸ್ತ್ರಸಂಹಿತೆ ಕಡ್ಡಾಯ

ಕೆ-ಸೆಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಪರೀಕ್ಷಾ ಪ್ರಾಧಿಕಾರವು ಕಟ್ಟುನಿಟ್ಟಿನ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿದೆ. ಯಾವುದೇ ಅಕ್ರಮಗಳಿಗೆ ಅವಕಾಶ ನೀಡದಿರಲು ಈ ಕ್ರಮ ಅನುಸರಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

ಇದರಂತೆ, ಪುರುಷ ಅಭ್ಯರ್ಥಿಗಳು ಅರೆತೋಳಿನ ಅಂಗಿ, ಹೆಚ್ಚಿನ ಜೇಬುಗಳಿಲ್ಲದ ಸರಳ ಪ್ಯಾಂಟ್ ಕಡ್ಡಾಯವಾಗಿದೆ. ಇದರ ಭಾಗವಾಗಿ ಜಿಪ್ ಪಾಕೆಟ್, ದೊಡ್ಡ ಬಟನ್ಸ್ ಮತ್ತು ವಿಸ್ತಾರ ಕಸೂತಿ ಇರುವ ಉಡುಪು ಮತ್ತು ಶೂಗಳನ್ನು ನಿಷೇಧಿಸಲಾಗಿದೆ. ಜತೆಗೆ, ಅಭ್ಯರ್ಥಿಗಳು ಯಾವುದೇ ಕಂಠಾಭರಣ, ಕಿವಿಯೋಲೆ, ಉಂಗುರ ಮತ್ತು ಕಡಗಗಳನ್ನು ಧರಿಸಿಕೊಂಡು ಬರಬಾರದು ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.

ಮಹಿಳಾ ಅಭ್ಯರ್ಥಿಗಳಿಗೆ ವಿಪರೀತ ಕಸೂತಿ, ಹೂಗಳು, ಬ್ರೂಚ್, ಬಟನ್, ಪೂರ್ಣ ತೋಳಿನ ರವಿಕೆ/ವಸ್ತ್ರ ಇರುವ ಉಡುಪು ಮತ್ತು ಜೀನ್ಸ್ ಪ್ಯಾಂಟ್ ಹಾಗೂ ದಪ್ಪನೆ ಅಡಿಭಾಗವಿರುವ ಚಪ್ಪಲಿ/ಶೂಗಳನ್ನು ಧರಿಸಿಕೊಂಡು ಬರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಜತೆಗೆ, ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ, ಬೇರಾವುದೇ ಆಭರಣಗಳನ್ನು ಹಾಕಿಕೊಂಡು ಪರೀಕ್ಷಾ ಕೇಂದ್ರಕ್ಕೆ ಬರುವಂತಿಲ್ಲ ಎಂದು ರಮ್ಯಾ ತಿಳಿಸಿದ್ದಾರೆ.

ನಿಷೇಧಿತ ವಸ್ತುಗಳ ಪಟ್ಟಿ

ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಪಣ ತೊಟ್ಟಿರುವ ಪರೀಕ್ಷಾ ಪ್ರಾಧಿಕಾರವು, ಯಾವುದೇ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬ್ಲೂ ಟೂತ್, ಮೊಬೈಲ್ ಫೋನ್, ಎಲೆಕ್ಟ್ರಾನಿಕ್ ವಸ್ತುಗಳು, ಪೆನ್ ಡ್ರೈವ್, ಇಯರ್ ಫೋನ್, ಕೈ ಗಡಿಯಾರ, ಮೈಕ್ರೋಫೋನ್, ಪೆನ್ಸಿಲ್, ಎರೇಸರ್, ಜಾಮಿಟ್ರಿ ಪೆಟ್ಟಿಗೆ ಮತ್ತು ಲಾಗ್ ಟೇಬಲ್ ಇತ್ಯಾದಿಗಳನ್ನು ತರುವಂತಿಲ್ಲ. ಜತೆಗೆ ಟೋಪಿ/ಮಾಸ್ಕ್ ಹಾಕಿಕೊಂಡು ಬರುವಂತಿಲ್ಲ ಎಂದು ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next