ಬೆಂಗಳೂರು: ಉದ್ಯಾನನಗರಿಯಲ್ಲಿ ತಿಮ್ಮಪ್ಪಯ್ಯ ಮೆಮೊರಿಯಲ್ ಕ್ರಿಕೆಟ್ ಬುಧವಾರದಿಂದ ಆರಂಭವಾಗಿದೆ. ಮೊದಲ ದಿನ ಕೇರಳ ಕ್ರಿಕೆಟ್ ಸಂಸ್ಥೆ ವಿರುದ್ಧ ಕೆಎಸ್‌ಸಿಎ ಇಲೆವೆನ್ 7 ವಿಕೆಟ್ ಗೆ 372 ರನ್‌ಗಳಿಸಿ ಭರ್ಜರಿ ಬ್ಯಾಟಿಂಗ್ ಮಾಡಿದೆ. ಕೆಎಸ್‌ಸಿಎ ಇಲೆವೆನ್ ಪರ ಅಭಿಷೇಕ್ ರೆಡ್ಡಿ (78 ರನ್), ಕೆ.ಗೌತಮ್ (64 ರನ್), ಸ್ಟುವರ್ಟ್ ಬಿನ್ನಿ (63 ರನ್), ನಿಶ್ಚಲ್.ಡಿ (55 ರನ್), ಪವನ್ ದೇಶಪಾಂಡೆ (41 ರನ್) ಹಾಗೂ ಶ್ರೇಯಸ್ ಗೋಪಾಲ್ (ಅಜೇಯ 42 ರನ್) ಸಿಡಿಸಿದರು. ಮೊದಲ ದಿನದಲ್ಲಿ ಬೃಹತ್ ಮೊತ್ತಕ್ಕೆ ಕಾರಣರಾದರು.
ಕೇರಳ ಪರ ವಿನೋಪ್ ಮನೋಹರನ್ 57ಕ್ಕೆ 2 ವಿಕೆಟ್ ಪಡೆಯಲಷ್ಟೇಶಕ್ತರಾದರು. ಕೆಎಸ್‌ಸಿಎ ಪ್ರಸಿಡೆಂಟ್ ಬೃಹತ್ ಮೊತ್ತ: ಡಾ.ಡಿ.ವೈ.ಪಾಟೀಲ್ ತಂಡದ ವಿರುದ್ಧ ಆರ್‌ಎಸ್‌ಐ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಪಂದ್ಯದಲ್ಲಿ ಕೆಎಸ್ ಸಿಎ ಇಲೆವೆನ್ ಮೊದಲ ದಿನ 90 ಓವರ್ ಗೆ 6 ವಿಕೆಟ್ 362 ರನ್‌ಗಳಿಸಿದೆ. ಕೆ.ವಿ.ಸಿದ್ದಾರ್ಥ್ (ಅಜೇಯ 198 ರನ್), ಅನಿರುದ್ಧ ಜೋಶಿ (ಅಜೇಯ 42 ರನ್) ಸಿಡಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸೆಕ್ರೆಟರಿ ಇಲೆವೆನ್ ಕುಸಿತ: ಉತ್ತರ ಪ್ರದೇಶ ಕ್ರಿಕೆಟ್ ಅಕಾಡೆಮಿ ವಿರುದ್ಧ ಕೆಎಸ್‌ಸಿಎ ಸೆಕ್ರೆಟರಿ ಇಲೆವೆನ್ ಮೊದಲ ದಿನದ ಆಟದ ಅಂತ್ಯಕ್ಕೆ 8 ವಿಕೆಟ್‌ಗೆ 289 ರನ್‌ಗಳಿಸಿದೆ. ಸೆಕ್ರೆಟರಿ ಪರ ನಿಹಾನ್ ಉಳ್ಳಾಲ್ 60 ರನ್ ಬಾರಿಸಿದರು. ನಾಗ ಭರತ್ 43 ರನ್ ಸಿಡಿಸಿದರು. ಇದಿಷ್ಟು ಬಿಟ್ಟರೆ ಉಳಿದಂತೆ ಯಾರಿಂದಲೂ ನಿರೀಕ್ಷಿತ ಬ್ಯಾಟಿಂಗ್ ಕಂಡು ಬರಲಿಲ್ಲ.
ಬೃಹತ್ ಮೊತ್ತದತ್ತ ಗುಜರಾತ್:
ಕೆಎಸ್‌ಸಿಎ ಕೋಲ್ಟ್ ತಂಡದ ವಿರುದ್ಧ ಗುಜರಾತ್ ಕ್ರಿಕೆಟ್ ಸಂಸ್ಥೆ ಮೊದಲ ದಿನದ ಆಟದಲ್ಲಿ 77 ರನ್‌ಗೆ 4 ವಿಕೆಟ್ ಕಳೆದುಕೊಂಡು ಬೃಹತ್ ಮೊತ್ತದತ್ತ ಸಾಗುವ ಸೂಚನೆ ನೀಡಿದ್ದಾರೆ.