Advertisement

ಮಾಯಾಂಕ್‌, ಕರುಣ್‌ ಶ್ರೇಷ್ಠ  ಆಟಗಾರರು

06:00 AM Mar 31, 2018 | Team Udayavani |

ಬೆಂಗಳೂರು: ಕರ್ನಾಟಕ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಮಾಯಾಂಕ್‌ ಅಗರ್ವಾಲ್‌ ಮತ್ತು ಕರುಣ್‌ ನಾಯರ್‌ ಸಹಿತ ಅನೇಕರಿಗೆ ಪ್ರಸಕ್ತ ಸಾಲಿನ ಕೆಎಸ್‌ಸಿಎ ವಾರ್ಷಿಕ ಪ್ರಶಸ್ತಿ ವಿತರಿಸಲಾಗಿದೆ. ಇದೇ ಸಂದರ್ಭದಲ್ಲಿ ವಿಜಯ್‌ ಹಜಾರೆ ಟ್ರೋಫಿ ವಿಜೇತ ಕರುಣ್‌ ನಾಯರ್‌ ನೇತೃತ್ವದ ರಾಜ್ಯ ತಂಡವನ್ನು ಸಮ್ಮಾನಿಸಲಾಗಿದೆ.

Advertisement

ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಣಜಿ ಟ್ರೋಫಿ ಮತ್ತು ವಿಜಯ್‌ ಹಜಾರೆ ಏಕದಿನ ಟ್ರೋಫಿಯ ಶ್ರೇಷ್ಠ ಬ್ಯಾಟ್ಸ್‌ ಮನ್‌ ಪ್ರಶಸ್ತಿಯನ್ನು ಮಾಯಾಂಕ್‌ ಅಗರ್ವಾಲ್‌ ಅವರಿಗೆ ವಿತರಿಸಲಾಯಿತು. ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಯ ಶ್ರೇಷ್ಠ ಬ್ಯಾಟ್ಸ್‌ಮನ್‌ ಪ್ರಶಸ್ತಿಯನ್ನು ಕರುಣ್‌ ನಾಯರ್‌ಗೆ ವಿತರಿಸಲಾಯಿತು. ಕೆ.ಗೌತಮ್‌ ರಣಜಿ ಟ್ರೋಫಿ, ಪ್ರಸಿದ್ಧ್ ಕೃಷ್ಣ ವಿಜಯ್‌ ಹಜಾರೆ, ಎಸ್‌.ಅರವಿಂದ್‌ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಯ ಶ್ರೇಷ್ಠ ಬೌಲರ್‌ ಪ್ರಶಸ್ತಿ ಪಡೆದರು. ಇದೇ ಸಂದರ್ಭದಲ್ಲಿ ವಿವಿಧ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೂ ಪ್ರಶಸ್ತಿ ವಿತರಿಸಲಾಯಿತು.

ನಿವೃತ್ತರಾದ ಎಸ್‌.ಅರವಿಂದ್‌ಗೆ ಸಮ್ಮಾನ
ಇತ್ತೀಚೆಗೆ ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ರಾಜ್ಯದ ವೇಗದ ಬೌಲರ್‌ ಶ್ರೀನಾಥ್‌ ಅರವಿಂದ್‌ ಅವರನ್ನು ಕೆಎಸ್‌ಸಿಎ ಆಡಳಿತಾಧಿಕಾರಿಗಳು ಸಮ್ಮಾನಿಸಿದರು. ಎಸ್‌.ಅರವಿಂದ್‌ 56 ಪ್ರಥಮ ದರ್ಜೆಯ ಪಂದ್ಯಗಳನ್ನು ಆಡಿದ್ದರು. ರಾಜ್ಯ ಪರ ಆಡಿ ಹಲವು ಪಂದ್ಯಗಳನ್ನು ತಮ್ಮ ಅಮೂಲ್ಯ ಬೌಲಿಂಗ್‌ ಮೂಲಕ ಅವರು ಗೆಲ್ಲಿಸಿಕೊಟ್ಟಿದ್ದಾರೆ.

ಏಕೈಕ ಅಂತಾರಾಷ್ಟ್ರೀಯ ಟಿ20
2005ರಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಧರ್ಮಶಾಲಾದಲ್ಲಿ ನಡೆದ 1ನೇ ಟಿ20 ಪಂದ್ಯದಲ್ಲಿ ಶ್ರೀನಾಥ್‌ ಅರವಿಂದ್‌ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 3.4 ಓವರ್‌ ಎಸೆದ ಎಸ್‌.ಅರವಿಂದ್‌ 44 ರನ್‌ಗೆ 1 ವಿಕೆಟ್‌ ಪಡೆದಿದ್ದರು. ಆನಂತರ ಅವರಿಗೆ ಭಾರತ ತಂಡದ ಕದ ತೆರೆಯಲಿಲ್ಲ.

ಪ್ರತಿನಿಧಿಸಿದ ತಂಡಗಳು
ಏಕೈಕ ಟಿ20ಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ರಣಜಿ, ಇರಾನಿ ಟ್ರೋಫಿ, ವಿಜಯ್‌ ಹಜಾರೆ ಸೇರಿದಂತೆ ವಿವಿಧ ಕೂಟಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಅನೇಕ ಪಂದ್ಯಗಳ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿ ತಕ್ಕ ಮಟ್ಟಿಗೆ ಯಶಸ್ವಿಯಾಗಿದ್ದರು. ಕೆಪಿಎಲ್‌ನಲ್ಲಿ ಮಂಗಳೂರು ಯುನೈಟೆಡ್‌ ತಂಡವನ್ನು ಪ್ರತಿನಿಧಿಸಿದ್ದರು.

Advertisement

56 ಪ್ರಥಮ ದರ್ಜೆ ಪಂದ್ಯ
ಶ್ರೀನಾಥ್‌ ಅರವಿಂದ್‌ 56 ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದು, ಅದರಲ್ಲಿ 186 ವಿಕೆಟ್‌ ಪಡೆದಿದ್ದಾರೆ. 49ಕ್ಕೆ 5 ವಿಕೆಟ್‌ ಪಡೆದಿರುವುದು ಇನಿಂಗ್ಸ್‌ ವೊಂದರ ಶ್ರೇಷ್ಠ ಸಾಧನೆಯಾಗಿದೆ. ಅದೇ ರೀತಿ 61ಕ್ಕೆ 8 ವಿಕೆಟ್‌ ಪಡೆದಿರುವುದು ಪಂದ್ಯವೊಂದರ ಶ್ರೇಷ್ಠ ಸಾಧನೆಯಾಗಿದೆ. ಬ್ಯಾಟಿಂಗ್‌ನಲ್ಲಿ 2 ಅರ್ಧ ಶತಕ ಸೇರಿದಂತೆ 455 ರನ್‌ ಬಾರಿಸಿದ್ದಾರೆ.

ವಿಜಯ್‌ ಹಜಾರೆ  ಗೆದ್ದ ತಂಡಕ್ಕೆ ಸಮ್ಮಾನ
ಇದೇ ಸಂದರ್ಭದಲ್ಲಿ ಪ್ರಸಕ್ತಿ ವಿಜಯ್‌ ಹಾಜಾರೆ ಏಕದಿನ ಟ್ರೋಫಿಯಲ್ಲಿ ಗೆಲುವು ಸಾಧಿಸಿದ ಕರುಣ್‌ ನಾಯರ್‌ ನೇತೃತ್ವದ ತಂಡವನ್ನು ಸನ್ಮಾನಿಸಲಾಯಿತು. ವಿಜಯ್‌ ಹಜಾರೆ ಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡ 41 ರನ್‌ಗಳಿಂದ ವಿದರ್ಭ ತಂಡವನ್ನು ಸೋಲಿಸಿ ಪ್ರಶಸ್ತಿ ಪಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next