ಕಾರವಾರ: ಯುಗಾದಿ ನಂತರ ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆ ಅಂತಾ ಶಾಸಕ ಬಸವನಗೌಡ ಯತ್ನಾಳ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲ್ಲ. ಯಾರೋ ಒಬ್ಬರು ಹೇಳಿಕೆ ಕೊಟ್ಟರೆ ಅದಕ್ಕೆ ಯಾವುದೇ ಮಹತ್ವ ಇಲ್ಲ ಅಂತಾ ಸಚಿವ ಈಶ್ವರಪ್ಪ ಹೇಳಿದರು.
ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ ಸರಿಸುಮಾರು 10 ಕೋಟಿಗೂ ಅಧಿಕ ಸದಸ್ಯರುಗಳನ್ನ ಹೊಂದಿರುವ ಅತೀ ದೊಡ್ಡ ಪಕ್ಷ ಬಿಜೆಪಿಯಾಗಿದೆ. ಗ್ರಾಮ ಪಂಚಾಯತ್ ಚುನಾವಣೆ ಮುಗಿಯುತ್ತಿದ್ದಂತೆ ಸಿಎಂ ಬದಲಾಗ್ತಾರೆ ಅಂತಾ ಸಿದ್ಧರಾಮಯ್ಯ ಹೇಳಿದ್ದರು. ಈವಾಗ ಇನ್ಯಾವುದೋ ಸಮಯ ಹೇಳ್ತಾರೆ. ಹೀಗೆ ಅವರು ಹೇಳಿದಂತೆ ಒಂದೊಂದು ಹಬ್ಬಕ್ಕೆ ಒಂದೊಂದು ಮುಖ್ಯಮಂತ್ರಿಯನ್ನ ಬದಲಾಯಿಸಿದ್ದರೆ ಇಷ್ಟರವರೆಗೆ 25 ಬಾರಿ ಮುಖ್ಯಮಂತ್ರಿ ಬದಲಾವಣೆಯಾಗಬೇಕಿತ್ತು.
ಸಿದ್ಧರಾಮಯ್ಯ ಹೇಳಿಕೆ ನೀಡಿದಂತೆ ಇದೀಗ ಯತ್ನಾಳ್ ಕೂಡಾ ಹೇಳಿಕೆ ಕೊಡ್ತಿದ್ದಾರೆ. ಅದ್ಯಾವುದನ್ನೂ ನಾವು ಗಂಭೀರವಾಗಿ ತೆಗೆದುಕೊಂಡಿಲ್ಲ. ಯತ್ನಾಳ್ ನನಗೆ ಆತ್ಮೀಯ ಸ್ನೇಹಿತ, ಪ್ರಖರ ಹಿಂದುತ್ವವಾದಿ ಎನ್ನುವುದನ್ನ ನಾನು ಒಪ್ಪುತ್ತೇನೆ. ಆದ್ರೆ ಪಕ್ಷದ ಶಿಸ್ತು ಮೀರಿ ಅವರೇ ಹೇಳಿಕೆ ನೀಡುವುದನ್ನ ಪಕ್ಷ ಯಾವತ್ತೂ ಕ್ಷಮಿಸಲ್ಲ. ಈಗಾಗಲೇ ರಾಜ್ಯ ಸಮಿತಿಯಿಂದ ಕೇಂದ್ರದ ಶಿಸ್ತು ಸಮಿತಿಗೆ ದೂರು ಕಳುಹಿಸಿದ್ದು ಅವರೇ ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಯತ್ನಾಳ್, ಸಿದ್ಧರಾಮಯ್ಯ ನೀಡೋ ಹೇಳಿಕೆಗೆ ರಿಯಾಕ್ಷನ್ ನೀಡೋ ಬದಲು ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ ಎಂದರು.
ಇದನ್ನೂ ಓದಿ:ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಚಿರತೆ ದಾಳಿ: ಮಗು ಸೇರಿ ಮೂವರಿಗೆ ಗಾಯ
ಇನ್ನು ಪಂಚಮಸಾಲಿ ಪೀಠದ ಸ್ವಾಮಿಗಳು ತಮ್ಮ ಸಮುದಾಯವನ್ನ 2ಎ ಗೆ ಸೇರಿಸುವಂತೆ ಒತ್ತಾಯಿಸಿದ್ದು ವಾಲ್ಮೀಕಿ ಸಮುದಾಯ ಮೀಸಲಾತಿ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದಾರೆ. ಕುರುಬ ಸಮುದಾಯ ಎಸ್.ಟಿ ಸೇರಿಸುವಂತೆ ಬೇಡಿಕೆ ಇಟ್ಟಿದ್ದು ಪ್ರಜಾಪ್ರಭುತ್ವದಲ್ಲಿ ಅವರು ತಮ್ಮ ಸಮುದಾಯಕ್ಕೆ ಏನೇನು ಬೇಕು ಎನ್ನುವುದನ್ನ ಕೇಳುವುದು ತಪ್ಪಲ್ಲ. ಆದರೆ ಯಾವುದು ಸಿಂಧು, ಯಾವುದು ಅಸಿಂಧು ಎನ್ನುವುದನ್ನ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ಕುಳಿತು ಚರ್ಚೆ ಮಾಡುತ್ತದೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.