Advertisement

Another Case; ಬಿಡುಗಡೆಯಾದ ಬೆನ್ನಿಗೇ ನಾರಾಯಣ ಗೌಡ ಜೈಲಿಗೆ!

11:52 PM Jan 09, 2024 | Team Udayavani |

ಬೆಂಗಳೂರು: ನಾಮಫ‌ಲಕಗಳಲ್ಲಿ ಶೇ.60 ಕನ್ನಡ ಅಕ್ಷರಗಳ ಬಳಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಪ್ರಕರಣದಲ್ಲಿ ಜೈಲು ಸೇರಿದ್ದ ಕರ್ನಾಟಕ ರಕ್ಷಣ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಜಾಮೀನು ಪಡೆದು ಬಿಡುಗಡೆಯಾದ ಸ್ವಲ್ಪ ಹೊತ್ತಿನಲ್ಲೇ, ಅವರನ್ನು 2017ರ ಜಾಮೀನು ರಹಿತ ವಾರಂಟ್‌ ಪ್ರಕರಣದಲ್ಲಿ ಮತ್ತೆ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

Advertisement

ಕೆಲವು ದಿನಗಳ ಹಿಂದೆ ಕನ್ನಡ ನಾಮಫ‌ಲಕ ಅಳವಡಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ನಾರಾಯಣ ಗೌಡ ಸಹಿತ ಹಲವರನ್ನು ಬಂಧಿಸಲಾಗಿತ್ತು.

ಈ ಪ್ರಕರಣದಲ್ಲಿ ಜಾಮೀನು ಪಡೆದು ಪರಪ್ಪನ ಅಗ್ರಹಾರ ಜೈಲಿನಿಂದ ಮಂಗಳವಾರ ಬಿಡುಗಡೆಯಾಗಿದ್ದರು. ಆದರೆ ಸಾರ್ವಜನಿಕ ಆಸ್ತಿ ಹಾನಿ ಆರೋಪದ ಮೇಲೆ 2017ರಲ್ಲಿ ಕುಮಾರಸ್ವಾಮಿ ಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದಲ್ಲಿ ನಾರಾಯಣ ಗೌಡ, ನ್ಯಾಯಾಲಯದ ವಿಚಾರಣೆಗೆ ಗೈರಾಗಿದ್ದರು ಎಂಬ ಕಾರಣಕ್ಕೆ ಅವರ ವಿರುದ್ಧ ಜಾಮೀನು ರಹಿತ ವಾರಂಟ್‌ ಜಾರಿಯಾಗಿತ್ತು. ಜೈಲಿನಿಂದ ಬಿಡುಗಡೆಯಾಗುತ್ತಿದಂತೆ ನಾರಾಯಣ ಗೌಡ ಅವರನ್ನು ಕುಮಾರಸ್ವಾಮಿ ಲೇಔಟ್‌ ಠಾಣಾ ಪೊಲೀಸರು ವಶಕ್ಕೆ ಪಡೆದು, ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಗರದ 30ನೇ ಎಸಿಎಂಎಂಕೋರ್ಟ್‌ಗೆ ಹಾಜರುಪಡಿಸಿದ್ದರು. ಅನಂತರ ಅವರನ್ನು ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.

ಈ ಹಿನ್ನೆಲೆಯಲ್ಲಿ ನಾರಾಯಣ ಗೌಡ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಅದರ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ ಬುಧವಾರಕ್ಕೆ ತೀರ್ಪು ಕಾದಿರಿಸಿದೆ. ಅದಕ್ಕೂ ಮುನ್ನ ವಿಚಾರಣೆ ವೇಳೆ ನಾರಾಯಣ ಗೌಡ ಪರ ವಕೀಲರು, ಪೊಲೀಸರ ನಿರ್ಲಕ್ಷ್ಯದಿಂದ ವಾರಂಟ್‌ ಜಾರಿಯಾಗಿದೆ. ಅರ್ಜಿದಾರರು ಪ್ರತಿ ದಿನ ಎಲ್ಲರಿಗೂ ಸಿಗುವಂತಹ ವ್ಯಕ್ತಿ. ವಾರೆಂಟ್‌ ಜಾರಿಯಾಗಿರುವ ಬಗ್ಗೆ ಅವರಿಗೆ ಮಾಹಿತಿ ಇಲ್ಲ. ಮಾಹಿತಿ ತಿಳಿದಿದ್ದರೆ ಸ್ವತಃ ಅವರೇ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದರು. ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಜಾಮೀನು ಮಂಜೂರು ಮಾಡುವಂತೆ ಕೋರಿದರು.

Advertisement

ಅದಕ್ಕೆ ಆಕ್ಷೇಪಿಸಿದ ಸರಕಾರಿ ಅಭಿಯೋಜಕರು, ಅರ್ಜಿದಾರರಿಗೆ 2017ರಲ್ಲಿ ಜಾಮೀನು ದೊರೆತಿದೆ. ಬಳಿಕ ನಿಗದಿತ ದಿನಾಂಕಕ್ಕೆಕೋರ್ಟ್‌ಗೆ ಹಾಜರಾಗಬೇಕು ಎಂದು ಸೂಚಿಸಿತ್ತು. ಆದರೆ ಅರ್ಜಿದಾರರುಕೋರ್ಟ್‌ಗೆ ಹಾಜರಾಗದೆ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ ಜಾಮೀನು ನೀಡಬಾರದು ಎಂದು ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next