ಮಂಡ್ಯ: ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರದ ನೀರಿನ ಮಟ್ಟ ಕಳೆದ 15 ದಿನದಲ್ಲಿ 3 ಅಡಿಗಳಷ್ಟು ಏರಿಕೆಯಾಗಿದೆ. ಮುಂಗಾರು ಚುರುಕುಗೊಳ್ಳುವ ಮುನ್ನವೇ ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗಿರುವುದು ರೈತ ಸಮುದಾಯದಲ್ಲಿ ಸಂತಸ ಮೂಡಿಸಿದೆ. ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದ್ದು, ಭಾನುವಾರ ಅಣೆಕಟ್ಟೆಯಲ್ಲಿ 94.85 ಅಡಿ ನೀರು ದಾಖಲಾಗಿತ್ತು.
ಜಲಾಶಯಕ್ಕೆ 5,406 ಕ್ಯೂಸೆಕ್ ನೀರು ಹರಿದುಬರುತ್ತಿ ದ್ದರೆ, ಅಣೆಕಟ್ಟೆಯಿಂದ ನದಿಗೆ 427 ಕ್ಯೂಸೆಕ್ ನೀರನ್ನು ಹರಿಯಬಿಡಲಾಗುತ್ತಿದೆ. ಜಲಾಶಯದಲ್ಲಿ ಒಟ್ಟು 19.037 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿದೆ. ಜೂ. 7ರಂದು ಜಲಾಶಯದ ನೀರಿನ ಮಟ್ಟ 92.20 ಅಡಿಗೆ ಕುಸಿದಿತ್ತು. ಅಂದು ಜಲಾಶಯಕ್ಕೆ 837 ಕ್ಯೂಸೆಕ್ ನೀರು ಹರಿದುಬ ರುತ್ತಿದ್ದು, 415 ಕ್ಯೂಸೆಕ್ ನೀರು ಹೊರಬಿ ಡಲಾಗಿತ್ತು. ಜಲಾಶಯದಲ್ಲಿ 17.291 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.
ಕೊಡಗಲ್ಲಿ ಉತ್ತಮ ಮಳೆ: ಕೇರಳದಲ್ಲಿ ಈಗ ಮುಂಗಾರು ಚುರುಕುಗೊಂಡಿರುವು ದರಿಂದ ಹಾಗೂ ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜಲಾಶಯಕ್ಕೆ ಹರಿದುಬರುತ್ತಿರುವ ಒಳ ಹರಿವಿನ ಪ್ರಮಾಣದಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ಜೂ.8ರಂದು 1,282 ಕ್ಯೂಸೆಕ್, ಜೂ.9ರಂದು 1,571 ಕ್ಯೂಸೆಕ್, ಜೂ.12ರಂದು 1,799 ಕ್ಯೂಸೆಕ್, ಜೂ.13ರಂದು 1,283 ಕ್ಯೂಸೆಕ್, ಜೂ.15ರಂದು 1,358 ಕ್ಯೂಸೆಕ್, ಜೂ.16ಕ್ಕೆ 1,284 ಕ್ಯೂಸೆಕ್, ಜೂ.17ರಂದು 1,877 ಕ್ಯೂಸೆಕ್, ಜೂ.18ರಂದು 3,036 ಕ್ಯೂಸೆಕ್, ಜೂ.19ರಂದು 2,980 ಕ್ಯೂಸೆಕ್, ಜೂ.20ರಂದು 6,005 ಕ್ಯೂಸೆಕ್ ಹಾಗೂ ಜೂ.21ರಂದು 5,406 ಕ್ಯೂಸೆಕ್ ಹರಿದುಬರು ವುದರೊಂದಿಗೆ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ತೃಪ್ತಿದಾಯಕವಾಗಿದೆ.
ಕೃಷಿ ಕಾರ್ಯ ಆರಂಭ:ಮುಂಗಾರು ಶುಭಾರಂಭ ಮಾಡಿರುವುದರಿಂದ ಜಿಲ್ಲಾದ್ಯಂತ ಕೃಷಿ ಚಟುವಟಿಕೆಗಳು ಚುರುಕುಗೊಳ್ಳಲಾರಂಭಿಸಿವೆ. ರೈತರು ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಸಂಗ್ರಹಿಸಿಟ್ಟುಕೊಂಡಿದ್ದು, ಭೂಮಿಯ ಉಳುಮೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಕಳೆದೆರಡು ವರ್ಷಗಳಿಂದಲೂ ಉತ್ತಮ ಮುಂಗಾರು ಮಳೆ ಕಂಡಿರುವ ಜಿಲ್ಲೆಯ ರೈತರು ಈ ವರ್ಷವೂ ಉತ್ತಮ ವರ್ಷಧಾರೆ ಯ ನಿರೀಕ್ಷೆಯಲ್ಲಿದ್ದಾರೆ.
ಕಳೆದ ವರ್ಷ ಪೂರ್ವ ಮುಂಗಾರು ಕೈಕೊಟ್ಟಿತ್ತು. ಅಲ್ಲದೇ ಮುಂಗಾರು ಆಗಮನವೂ ವಿಳಂಬವಾ ಗಿತ್ತು. ಜುಲೈ ಅಂತ್ಯದವರೆಗೂ ವರುಣನ ದರ್ಶನವಾಗದೆ ಬರ ಎದುರಾಗುವ ಭೀತಿ ಮನೆ ಮಾಡಿತ್ತು. ಆಗಸ್ಟ್ ಮೊದಲ ವಾರ ದಿಂದ ಬಿರುಸಿನ ವರ್ಷಧಾರೆಯಾದ ಪರಿ ಣಾಮ ಕೇವಲ 12ರಿಂದ 15 ದಿನಗಳ ಅಂತರ ದಲ್ಲಿ ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗುವುದರೊಂದಿಗೆ ರೈತರ ಮೊಗ ದಲ್ಲಿ ಮಂದಹಾಸ ಮೂಡಿಸಿತ್ತು. ಕಳೆದ ವರ್ಷ ಆಗಸ್ಟ್ 29ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೃಷ್ಣರಾಜ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದರು.
14 ಅಡಿ ಹೆಚ್ಚುವರಿ ನೀರು: ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 78.95 ಅಡಿ ನೀರು ಸಂಗ್ರಹವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯದಲ್ಲಿ 14 ಅಡಿ ಹೆಚ್ಚುವರಿ ನೀರು ದಾಖಲಾಗಿದೆ. ಮುಂಗಾರು ಆಶಾದಾಯಕವಾಗಿ ಬೀಳುವ ನಿರೀಕ್ಷೆಯಿಂದ ರೈತರು ಕೃಷಿ ಚಟುವಟಿಕೆಗೆ ಉತ್ಸಾಹದಿಂದ ತೊಡಗಿಸಿಕೊಂಡಿದ್ದಾರೆ.