Advertisement
ನಿಸರ್ಗ ವಿರೋಧಿ ನಡೆಯಿಂದ ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಪ್ರಕೃತಿ ಭೀಕರ ಪಾಠ ಕಲಿಸಿದೆ. ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಅಣೆಕಟ್ಟೆಗೆ ಎದುರಾಗಬಹುದಾದ ಅಪಾಯದ ಮುನ್ಸೂಚನೆ ಅರಿಯದಿದ್ದರೆ ಜಿಲ್ಲೆಯ ಜೀವನಾಡಿ ಕೆಆರ್‌ಎಸ್ ಜಲಾಶಯ ಬಲಿಯಾಗುವುದರಲ್ಲಿ ಆಶ್ಚರ್ಯವಿಲ್ಲ.ಶ್ರೀರಂಗಪಟ್ಟಣ ಡಿವೈಎಸ್ಪಿ ವಿಶ್ವನಾಥ್ ಜಿಲ್ಲಾ ಆರಕ್ಷಕ ಅಧೀಕ್ಷಕರಿಗೆ ಸಲ್ಲಿಸಿರುವ ಆರು ಪುಟಗಳ ತನಿಖಾ ವರದಿಯಲ್ಲಿ ಜಿಲ್ಲೆಯ ಜನರು ಬೆಚ್ಚಿಬೀಳಿಸುವ ಅಂಶವೊಂದನ್ನು ಬಹಿರಂಗಪಡಿಸಿದ್ದಾರೆ. ಈ ವರದಿಯನ್ನು ಆರ್‌ಟಿಐ ಕಾರ್ಯಕರ್ತ ಕೆ.ಆರ್.ರವೀಂದ್ರ ಪತ್ರಿಕೆಗಳಿಗೆ ಬಿಡುಗಡೆ ಮಾಡಿದ್ದಾರೆ.
ಪಾಂಡವಪುರ ತಾಲೂಕಿನ ಚಿನಕುರಳಿ, ಬೇಬಿ ಬೆಟ್ಟದ ಕಾವಲು, ಹೊನಗಾನಹಳ್ಳಿ, ಬನ್ನಂಗಾಡಿ ಗ್ರಾಮಗಳ ಬೇಬಿ ಬೆಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಹಲವು ಕಲ್ಲು ಕ್ವಾರೆಗಳು ಅಕ್ರಮವಾಗಿ ನಡೆಯುತ್ತಿದ್ದು, ಇದರಿಂದ ಪರಿಸರಕ್ಕೆ ಹಾನಿ ಉಂಟಾಗುತ್ತಿದೆ. ವ್ಯವಸಾಯಕ್ಕೆ ತೊಂದರೆಯಾಗಿ, ಕಲ್ಲು ಸಿಡಿತಕ್ಕೆ ಬಳಸುವ ಸ್ಫೋಟಕಗಳಿಂದ ಮನೆಗಳು ಜಖಂಗೊಂಡಿವೆ. ಭಾರೀ ಸ್ಫೋಟಕ ಬಳಕೆಯಿಂದ ಕೃಷ್ಣರಾಜಸಾಗರ ಜಲಾಶಯಕ್ಕೂ ಗಂಡಾಂತರವಿದೆ ಎಂಬ ಆತಂಕ ವ್ಯಕ್ತವಾಗಿದೆ. ಸಾಮಾನ್ಯವಾಗಿ ಯಾವುದೇ ಅಣೆ ಕಟ್ಟೆ ಭಾಗದ 8 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸುವ ಹಾಗಿಲ್ಲ. ಆದರೆ, ಕೃಷ್ಣರಾಜಸಾಗರ ಜಲಾಶಯದಿಂದ ಕಲ್ಲುಗಣಿಗಾರಿಕೆ ಪ್ರದೇಶಗಳಿಗೆ ರಸ್ತೆ ಮಾರ್ಗವಾಗಿ ತೆರಳಿದರೆ 8 ಕಿ.ಮೀ. ವ್ಯಾಪ್ತಿಯೊಳಗೆ ಬರುತ್ತವೆ. ಆದರೆ, ರೇಡಿಯಲ್ ಡಿಸ್ಟೆನ್ಸ್ ಪ್ರಕಾರ, ಈ ಪ್ರದೇಶಗಳ ನಡುವಿನ ಅಂತರ ಇನ್ನೂ ಕಡಿಮೆ. ಹೀಗಾಗಿ, ಕಲ್ಲುಗಣಿಗಾರಿಕೆ ನಡೆದರೆ ಜಲಾಶಯಕ್ಕೆ ಧಕ್ಕೆ ಆಗಬಹುದು ಎನ್ನುವ ಆತಂಕ ಸೃಷ್ಟಿಸಿದೆ.
Related Articles
ಕಲ್ಲುಕ್ವಾರೆಗಳಲ್ಲಿ ಸಿಡಿಮದ್ದು, ಸೀಮೆಎಣ್ಣೆ ಮಿಶ್ರಿತ ಉಪ್ಪು, ಎಲೆಕ್ಟ್ರಿಕಲ್ ಡೆಟೋನೆಂಟರ್ ಒಳಗೊಂಡಿರುವ ಕೈ ಕೇಪ್ ಹಾಗೂ ಮೆಗ್ಗರ್ ಕೇಪ್ ಅನ್ನು ಬಳಸಿ ಬಂಡೆ ಸ್ಫೋಟಿಸಲಾಗುತ್ತಿದೆ. ಆದರೆ, ಇವರೆಡು ಸ್ಫೋಟಕಗಳಿಗೆ ಹೋಲಿಸಿದರೆ ಬೋರ್ ಬ್ಲಾಸ್ಟಿಂಗ್‌ನ ತೀವ್ರತೆ ಹೆಚ್ಚಿನ ಪ್ರಮಾಣದ್ದಾಗಿದೆ. ಮೆಗ್ಗರ್ ಕೇಪ್‌ನಿಂದ ಕಲ್ಲುಬಂಡೆ ಸ್ಫೋಟಿಸಿದರೆ, ಸುಮಾರು ಎರಡರಿಂದ ಎರಡೂವರೆ ಕಿ.ಮೀ.ವರೆಗೆ ಭೂಮಿ ಕಂಪಿಸಿದ ಅನುಭವ ಆಗುತ್ತದೆ. ಭಾರೀ ಪ್ರಮಾಣದ ಸ್ಫೋಟಕವಾದ ಬೋರ್ ಬ್ಲಾಸ್ಟಿಂಗ್‌ನಿಂದ ಅಂದಾಜು 6 ರಿಂದ 7 ಕಿ.ಮೀ.ವರೆಗೆ ಭೂಮಿ (ಬಂಡೆಯ ಸೆಲೆ) ಕಂಪಿಸುವ ಸಾಧ್ಯತೆ ಇರುತ್ತದೆ ಎಂಬುದು ತಜ್ಞರ ಅಭಿಪ್ರಾಯ.
Advertisement
ಕಂಟ್ರೋಲ್ ಬ್ಲಾಸ್ಟಿಂಗ್‌ನಿಂದ ಹೆಚ್ಚಿನ ಪ್ರಮಾಣದ ಹಾನಿ ಉಂಟಾಗಲ್ಲ. ಅನ್ ಕಂಟ್ರೋಲ್ ಬ್ಲಾಸ್ಟಿಂಗ್‌ನಲ್ಲಿ ಜಿಲೆಟಿನ್ ಸ್ಟಿಕ್‌ಗಳ ಬಳಕೆ ಮೇಲೆ ತೀವ್ರತೆ ಅವಲಂಬಿಸಿರುತ್ತದೆ. ಬಂಡೆಗಳು ಒಡಕು – ಬಿರುಕು ಇಲ್ಲದೆ, ಸುಮಾರು 25 ರಿಂದ 30 ಸ್ಕ್ವೇರ್ ಕಿ.ಮೀ.ವರೆಗೆ ಹರಡಿದ್ದರೆ ಕಂಪನದ ಸಾಧ್ಯತೆಗಳಿರುತ್ತವೆ ಎನ್ನುತ್ತಾರೆ ತಜ್ಞರು.
ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶದ ಸಮೀಪದಲ್ಲೇ ಕೆಆರ್‌ಎಸ್ ಅಣೆಕಟ್ಟೆ ಇದೆ. ಅಣೆಕಟ್ಟೆ ಸುರಕ್ಷತೆ ದೃಷ್ಟಿಯಿಂದ ಕಲ್ಲು ಗಣಿಗಾರಿಕೆ, ಜಲ್ಲಿ ಕ್ರಷರ್ ಘಟಕ, ಕಲ್ಲು ಪುಡಿ, ಜಲ್ಲಿ, ಸೈಜುಗಲ್ಲು, ದಿಂಡುಕಲ್ಲುಗಳ ಸಾಗಣೆ ನಿರ್ಬಂಧಿಸಿ, ನಿಷೇಧಿಸುವುದು ಸೂಕ್ತ ಎಂಬ ನಿಲುವನ್ನು ಪರೋಕ್ಷವಾಗಿ ಉಲ್ಲೇಖೀಸಲಾಗಿದೆ.
ಕೆ.ಆರ್.ಎಸ್. ಸುತ್ತಾ 5 ಕಿ.ಮೀ. ಗಣಿಗಾರಿಕೆ ನಿಷೇಧಕ್ಕೆ ಪ್ರಸ್ತಾವನೆಪಾಂಡವಪುರ ತಾಲೂಕಿನಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಕೃಷ್ಣ ರಾಜಸಾಗರ ಜಲಾಶಯಕ್ಕೆ ಅಪಾಯವಿದೆ ಎನ್ನುವ ಡಿವೈಎಸ್ಪಿ ವರದಿ ಇದುವರೆಗೂ ನನ್ನ ಗಮನಕ್ಕೆ ಬಂದಿಲ್ಲ. ಹಿಂದಿನ ಎಸ್ಪಿಯವರು ಆ ಬಗ್ಗೆ ನನಗೆ ಯಾವುದೇ ಮಾಹಿತಿ ನೀಡಿರುವುದಿಲ್ಲ. ಆದರೂ ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಕೆ.ಆರ್.ಎಸ್. ಜಲಾಶಯದ 5 ಕಿ.ಮೀ. ಸುತ್ತ ಯಾವುದೇ ರೀತಿಯ ಗಣಿಗಾರಿಕೆಗೂ ಅವಕಾಶ ನೀಡದಂತೆ ರಾಜ್ಯ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಕಳುಹಿಸಿ ಕೊ ಟ್ಟಿದ್ದೇನೆ. ಈ ಹಿಂದೆ ಜಿಲ್ಲಾಡಳಿತ ಇಂತಹ ನಿರ್ಧಾರ ಕೈಗೊಂಡಿದ್ದರೂ, ರಾಜ್ಯ ಸರ್ಕಾರದಿಂದ ಅಧೀಕೃತ ಆದೇಶ ಹೊರ ಬಿದ್ದಿರಲಿಲ್ಲ. ಸರ್ಕಾರದ ಆದೇಶದನ್ವಯ ಅಣೆಕಟ್ಟೆ ಸುರಕ್ಷತೆಗೆ ಪೂರಕವಾದ ಕ್ರಮ ವಹಿಸಲಾಗುವುದು ಎಂದು ಮಂಡ್ಯ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಹೇಳಿದ್ದಾರೆ. ಕೆಆರ್‌ಎಸ್ ಜಲಾಶಯಕ್ಕೆ ಅಪಾಯವಿರುವ ಬಗ್ಗೆ ಶ್ರೀರಂಗಪಟ್ಟಣ ಡಿವೈಎಸ್ಪಿಯವರು ನಾನು ಬರುವ ಮುಂಚೆಯೇ ವರದಿ ನೀಡಿದ್ದಾರೆ. ಅದರ ಬಗ್ಗೆ ಹಿಂದಿನ ಎಸ್ಪಿ ವರದಿ ಸಲ್ಲಿಸಿದ್ದಾರೋ, ಇಲ್ಲವೋ ಎಂಬುದು ಗೊತ್ತಿಲ್ಲ. ನಾನು ಅದನ್ನು ಪರಿಶೀಲಿಸಿ ವರದಿ ಸಲ್ಲಿಸದಿದ್ದಲ್ಲಿ ನಾನು ಸಂಬಂಧಿಸಿದ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ. ಆ ಸಂಬಂಧ ಜಿಲ್ಲಾಧಿಕಾರಿಗಳ ನೇತೃತ್ವದ ಟಾಸ್ಕ್ಫೋರ್ಸ್ ಸಮಿತಿ ಸೂಕ್ತ ನಿರ್ಣಯ ಕೈಗೊಳ್ಳಲಿದೆ.
– ಡಿ.ಶಿವಪ್ರಕಾಶ್, ಜಿಲ್ಲಾ ಆರಕ್ಷಕ ಅಧೀಕ್ಷಕರು, ಮಂಡ್ಯ ಜಿಲ್ಲೆ – ಮಂಡ್ಯ ಮಂಜುನಾಥ್