Advertisement

ಕೃಷ್ಣಾಪುರ ಪರ್ಯಾಯ:ಹಸುರು ಹೊರೆ ಕಾಣಿಕೆ;45 ಟನ್‌ ಅಕ್ಕಿ, 18 ಟನ್‌ ಬೆಲ್ಲ

06:24 PM Jan 14, 2022 | Team Udayavani |

ಉಡುಪಿ: ಪರ್ಯಾಯ ಮಹೋತ್ಸವಕ್ಕೆ ಕೃಷ್ಣ ನಗರಿ ಸಜ್ಜುಗೊಂಡಿದ್ದು, ಕೃಷ್ಣಾಪುರ ಮಠ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯಕ್ಕೆ ಹಸುರು ಹೊರೆ ಕಾಣಿಕೆ ಸಮರ್ಪಣೆ, ಭವ್ಯ ಶೋಭಾಯಾತ್ರೆ ಮಂಗಳವಾರ ಜರಗಿತು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಜಿಲ್ಲೆ-ಮೂಡುಬಿದಿರೆ ವಲಯ ವ್ಯಾಪ್ತಿಯಿಂದ ಹೊರೆ ಕಾಣಿಕೆ ಸಮರ್ಪಿಸಲಾಯಿತು. ಜೋಡುಕಟ್ಟೆಯಲ್ಲಿ ಪರ್ಯಾಯೋತ್ಸವ ಸಮಿತಿ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.

Advertisement

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಎಲ್‌. ಎಚ್‌. ಮಂಜುನಾಥ್‌ ಉದ್ಘಾಟಿಸಿದರು. ಶಾಸಕ ಕೆ. ರಘುಪತಿ ಭಟ್‌, ಸಮಿತಿ ಅಧ್ಯಕ್ಷ ಸೂರ್ಯನಾರಾಯಣ ಉಪಾಧ್ಯಾಯ, ಹೊರೆಕಾಣಿಕೆ ಮೆರವಣಿಗೆ ಸಂಚಾಲಕ ಬೈಕಾಡಿ ಸುಪ್ರಸಾದ್‌ ಶೆಟ್ಟಿ, ಜಿಲ್ಲಾ ಯೋಜನಾಧಿಕಾರಿ ಗಣೇಶ್‌, ಪ್ರಾದೇಶಿಕ ಅಧಿಕಾರಿ ವಸಂತ್‌ ಸಾಲ್ಯಾನ್‌, ತಾ| ಅಧಿಕಾರಿ ರಾಮ್‌ಕುಮಾರ್‌, ಪರ್ಯಾಯೋತ್ಸವ ಸಮಿತಿ ಕಾರ್ಯದರ್ಶಿ ವಿಷ್ಣು ಪ್ರಸಾದ್‌ ಪಾಡಿಗಾರು, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂನ ರಾಧಾಕೃಷ್ಣ ಮೆಂಡನ್‌, ಪ್ರಮುಖರಾದ ಉದಯ ಕುಮಾರ್‌ ಶೆಟ್ಟಿ ಕಿದಿಯೂರು, ದೇವದಾಸ್‌ ಹೆಬ್ಟಾರ್‌, ನವೀನ್‌ ಅಮೀನ್‌, ಧ.ಗ್ರಾ. ಯೋಜನೆಯ ಉಡುಪಿ ಜಿಲ್ಲಾ ವ್ಯಾಪ್ತಿಯ ಕ್ಷೇತ್ರ ಯೋಜನಾಧಿಕಾರಿಗಳು, ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಮೇಲ್ವಿಚಾರ ಕರು, ಸೇವಾ ಪ್ರತಿನಿಧಿಗಳು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು. ಹಸುರು ಹೊರೆ ಕಾಣಿಕೆ ಅಕ್ಕಿ, ಬೆಲ್ಲ, ತರಕಾರಿ, ಬಾಳೆಎಲೆ, ತೆಂಗು, ಬೇಳೆಕಾಳು ಹೊತ್ತ ಟೆಂಪೋ, ಲಾರಿ, ಟಿಪ್ಪರ್‌, ಗೂಡ್ಸ್‌ ರಿಕ್ಷಾ, ಟಾಟಾ ಏಸ್‌ಸೇರಿ ದಂತೆ 350ಕ್ಕೂ ಅಧಿಕ ವಾಹನಗಳು ಮೆರವಣಿಗೆಯಲ್ಲಿದ್ದವು.

ವಾಹನಗಳು ಬಾಳೆ ದಿಂಡು, ಮಾವಿನ ತೋರಣ, ವಿವಿಧ ಪುಷ್ಪ ಗಳಿಂದ ಅಲಂಕಾರಗೊಂಡು ಗಮನ ಸೆಳೆದವು. ಜೋಡುಕಟ್ಟೆ, ಕೋರ್ಟ್‌ ರಸ್ತೆ, ಡಯಾನ ವೃತ್ತ, ಕೆ.ಎಂ. ಮಾರ್ಗ, ಸರ್ವಿಸ್‌ ಬಸ್‌ ನಿಲ್ದಾಣ, ಕಿದಿಯೂರು ಹೊಟೇಲ್‌, ಸಿಟಿ ಬಸ್‌ ನಿಲ್ದಾಣ, ಕಲ್ಸಂಕ ಮೂಲಕ ರಾಜಾಂಗಣ ತಲುಪಿ ಉಗ್ರಾಣದಲ್ಲಿ ಸಮರ್ಪಿಸಲಾಯಿತು. ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಎನ್ನೆಸ್ಸೆಸ್‌ ವಿದ್ಯಾರ್ಥಿಗಳು, ದೈವಜ್ಞ ಬ್ರಾಹ್ಮಣ ಸಂಘ, ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತು, ಉಡುಪಿ ಶಾರದೋತ್ಸವ ಸಮಿತಿ, ಶ್ರೀ ಅಯ್ಯಪ್ಪ ಸೇವಾ ಸಮಾಜಂನ ಸ್ವಯಂಸೇವಕರು ಉಗ್ರಾಣದ ನಿರ್ವಹಣೆ ನಡೆಸಲಿದ್ದಾರೆ.

45 ಟನ್‌ ಅಕ್ಕಿ, 18 ಟನ್‌ ಬೆಲ್ಲ

Advertisement

ಉಡುಪಿ, ಬ್ರಹ್ಮಾವರ, ಕಾರ್ಕಳ, ಮೂಡಬಿದಿರೆ, ಕುಂದಾಪುರ, ಬೈಂದೂರು ಮುಂತಾದ ತಾಲೂಕು ವ್ಯಾಪ್ತಿಯ ಸುಮಾರು 70,000ಕ್ಕಿಂತಲೂ ಹೆಚ್ಚಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಘದ ಸದಸ್ಯರು ವಸ್ತು ರೂಪದಲ್ಲಿ ನೀಡಿರುವ ಹೊರೆಕಾಣಿಕೆ ಸಮರ್ಪಣೆಯಲ್ಲಿ 45 ಟನ್‌ ಅಕ್ಕಿ, 18 ಟನ್‌ ಬೆಲ್ಲ, 1.30 ಲಕ್ಷ ತೆಂಗು, 4 ಟನ್‌ ಸಕ್ಕರೆ, 27 ಸಾವಿರ ಬಾಳೆ ಎಲೆ, 350ಗೊನೆ ಬಾಳೆಕಾಯಿ, 1060 ಸಿಯಾಳ, 6.50 ಟನ್‌ ತರಕಾರಿ (ಕುಂಬಳಕಾಯಿ, ಸೌತೆ, ಮತ್ತಿತರೆ ತರಕಾರಿ), 7.5 ಟನ್‌ ಗೆಡ್ಡೆ ಗೆಣಸು, ಬೇಳೆ, ಕಾಳು, ಹಾಳೆ ತಟ್ಟೆ, ಅಕ್ಕಿಮುಡಿ, ಹಿಂಗಾರ, ಅಡಿಕೆ, ಎಣ್ಣೆ, ಅವಲಕ್ಕಿ, ತುಪ್ಪ, ಸಾಬಕ್ಕಿ, ರವೆ ಸಹಿತ ಒಂದು ಸಾವಿರ ಭತ್ತಿಕಟ್ಟು ಸಮರ್ಪಿಸಲ್ಪಟ್ಟಿವೆ. ಜ.12ರಂದು ಬೈಂದೂರು, ಕುಂದಾಪುರ, ಉಡುಪಿ ನಗರಸಭೆ ವಾರ್ಡ್‌ ಭಕ್ತರಿಂದ ಹೊರೆ ಕಾಣಿಕೆ ಸಲ್ಲಿಕೆಯಾಗಲಿದೆ ಎಂದು ಸಂಚಾಲಕ ಸುಪ್ರಸಾದ್‌ ಶೆಟ್ಟಿ ತಿಳಿಸಿದ್ದಾರೆ.

ಉಗ್ರಾಣ ಮುಹೂರ್ತಕ್ಕೆ ಚಾಲನೆ 

ಪರ್ಯಾಯೋತ್ಸವಕ್ಕೆ ಭಕ್ತರಿಂದ ಸಮರ್ಪಿಸಲ್ಪಡುವ ಹೊರೆ ಕಾಣಿಕೆ ಸಂಗ್ರಹಕ್ಕೆ “ಸುಧಾಮ’ ಉಗ್ರಾಣವನ್ನು ರಾಜಾಂಗಣದಲ್ಲಿ ನಿರ್ಮಿಸಲಾಗಿದೆ. ಮಂಗಳವಾರ ಕೃಷ್ಣಾಪುರ ಶ್ರೀಪಾದರು ಉಗ್ರಾಣ ಮುಹೂರ್ತ ನೆರವೇರಿಸಿದರು.

ಕುಚೇಲನು ಶ್ರೀಕೃಷ್ಣ ದೇವರಿಗೆ ಮೂರು ಹಿಡಿ ಅವಲಕ್ಕಿಯನ್ನು ಭಕ್ತಿ ಯಿಂದ ಅರ್ಪಿಸಿದನು. ಇದನ್ನು ದೇವರು ಸಂತೋಷದಿಂದ ಸ್ವೀಕರಿಸಿ ಅವನಿಗೆ ಸಕಲ ಐಶ್ವರ್ಯಗಳನ್ನು ನೀಡಿ ಅನುಗ್ರಹಿಸಿದನು. ಪರ್ಯಾಯಕ್ಕೆ ಭಕ್ತರು ಯಥಾನುಶಕ್ತಿ ಭಕ್ತಿಪೂರ್ವಕ ನೀಡುವ ಕಾಣಿಕೆಯನ್ನು ಸ್ವೀಕರಿಸಿ ಕೃಷ್ಣದೇವರು ಅನುಗ್ರಹಿಸುತ್ತಾನೆ. ಭಕ್ತರ ಸಮರ್ಪಣಾ ಭಾವ ಕೃಷ್ಣನ ಚಿತ್ತಕ್ಕೆ ಬರಲಿ ಎಂದು ಅನುಗ್ರಹಿಸಿದರು.

ಕಿದಿಯೂರು ಹೊಟೇಲ್‌ ಮಾಲಕ ಭುವನೇಂದ್ರ ಕಿದಿಯೂರು, ಕಲ್ಸಂಕ ಗಿರಿಜಾ ಸಿಲ್ಕ್ ಮಾಲಕ ರಾಜಾರಾಮ್‌ ಪೈ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಗಣೇಶ್‌, ಪರ್ಯಾಯೋತ್ಸವ ಸಮಿತಿ ಅಧ್ಯಕ್ಷ ಸೂರ್ಯನಾರಾಯಣ ಉಪಾಧ್ಯಾಯ, ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್‌, ಜಿಲ್ಲಾ ಯುವ ಬ್ರಾಹ್ಮಣ ಪರಿಷತ್‌ನ ಅಧ್ಯಕ್ಷ ಚೈತನ್ಯ ಉಪಸ್ಥಿತರಿದ್ದರು. ಬೆಲ್ಲ, ತುಪ್ಪ, ಅಕ್ಕಿ, ತರಕಾರಿ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next