Advertisement

ದೇವಸ್ಥಾನ, ಶಾಲೆಗಳ ಕಾಣಿಕೆ ವಾಪಸು

02:12 AM Jan 16, 2022 | Team Udayavani |

ಉಡುಪಿ: ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಜ. 10ರ ಬಳಿಕ ಕಾರ್ಯಬಾಹುಳ್ಯದಿಂದ ಕೂಡಿದ್ದಾರೆ. ಪರ್ಯಾಯ ಪೀಠವೇರುವ ಸ್ವಾಮೀಜಿಯವರನ್ನು ವಿವಿಧೆಡೆ ಆಹ್ವಾನಿಸಿ ಸತ್ಕರಿಸುವ ಸಂಪ್ರದಾಯ ವಿದೆ. ಹೀಗೆ ಸ್ವಾಮೀಜಿಯವರನ್ನು ವಿವಿಧ ದೇವಸ್ಥಾನಗಳವರು, ವಿದ್ಯಾಲಯಗಳವರು ಕರೆಯುತ್ತಿದ್ದಾರೆ. ಸ್ವಾಮೀಜಿಯವರನ್ನು ಆಹ್ವಾನಿಸಿದಾಗ ಕಾಣಿಕೆ ಸಮರ್ಪಿಸುವುದು ವಾಡಿಕೆ. ಆದರೆ ಕೃಷ್ಣಾಪುರ ಶ್ರೀಗಳು ದೇವಸ್ಥಾನಗಳು, ವಿದ್ಯಾ ಸಂಸ್ಥೆಗಳಿಗೆ ಹೋದಾಗ ಕೊಡುವ ಕಾಣಿಕೆಗಳನ್ನು ಅಲ್ಲಿಯೇ ವಿನಿಯೋಗಿಸಲು ಕೊಟ್ಟು ಬರುತ್ತಿದ್ದಾರೆ. ಸಂಸ್ಥೆಗಳ ಮುಖ್ಯಸ್ಥರು ಇದನ್ನು ಘೋಷಿಸುವಾಗ ಏನೂ ಆಗಿಯೇ ಇಲ್ಲವೆಂಬಂತೆ ಸ್ವಾಮೀಜಿಯವರು ಇನ್ನೊಂದು ಕಡೆಗೆ ತೆರಳುವ ತರಾತುರಿಯಲ್ಲಿ ಹೊರಟಿರುತ್ತಾರೆ.

Advertisement

“ನಾನು ಮಠಕ್ಕೆ ಸೇರಿ ಎರಡು ಮೂರು ವರ್ಷಗಳಾಗಿವೆ. ಎರಡು ಮೂರು ವರ್ಷಗಳಿಂದಲೂ ದೇವಸ್ಥಾನಗಳು, ಶಾಲೆಗಳಿಗೆ ಹೋದರೆ ಅಲ್ಲಿ ಕೊಡುವ ಕಾಣಿಕೆಯನ್ನು ಅಲ್ಲಿಯೇ ವಿನಿಯೋಗಿಸಲು ಬಿಟ್ಟು ಬರುತ್ತಿದ್ದಾರೆ’ ಎಂದು ಸ್ವಾಮೀಜಿಯವರ ಆಪ್ತ ಸಿಬಂದಿ ಮಂಜುನಾಥ್‌ ಹೇಳುತ್ತಾರೆ.

ಇದನ್ನೂ ಓದಿ:ಪರ್ಯಾಯೋತ್ಸವ: ಕಂಗೊಳಿಸುತ್ತಿರುವ ಉಡುಪಿ

ಆನೆ ಲಾಯದ ಗುರುತು
ಹಿಂದೆ ಎಲ್ಲ ಮಠಗಳಲ್ಲಿಯೂ ಆನೆಗಳನ್ನು ಸಾಕುತ್ತಿದ್ದರು. ಕೆಲವು ಮಠಗಳಲ್ಲಿ ಎರಡೆರಡು ಆನೆಗಳು ಇದ್ದವು. ಆಗಿನ ವಾತಾವರಣವೇ ಬೇರೆ, ಈಗಿನ ವಾತಾವರಣವೇ ಬೇರೆ. ಆಗ ರಥಬೀದಿ ಸುತ್ತ ಗದ್ದೆಗಳು ಇದ್ದರೆ, ಈಗ ಕಾಂಕ್ರೀಟ್‌ ಕಟ್ಟಡಗಳು ಇವೆ. ಈಗ ಆನೆಗಳನ್ನು ಸಾಕಿದರೆ ಅವುಗಳ ಆರೋಗ್ಯ ಸುಸ್ಥಿತಿಯಲ್ಲಿರಿಸಿಕೊಳ್ಳುವುದು ಕಷ್ಟಸಾಧ್ಯ. ಅವುಗಳಿಗೆ ಬೇಕಾದ ಹಸುರು ಆಹಾರದ ಪೂರೈಕೆಯೂ ಸಾಧ್ಯವಿಲ್ಲ. ಕೃಷ್ಣಾಪುರ ಮಠದಲ್ಲಿ ಆನೆ ಕಟ್ಟುತ್ತಿದ್ದ ಆನೆ ಲಾಯ ಮಾತ್ರ ಹಾಗೆಯೇ ಇದೆ. ಇದನ್ನು ಆನೆ ಲಾಯದ ಪಳೆಯುಳಿಕೆ ಎನ್ನಬಹುದು.

ಎರಡು ಪಟ್ಟದ ದೇವರು
ಆಚಾರ್ಯ ಮಧ್ವರು ತಮ್ಮ ಶಿಷ್ಯರಿಗೆ ಉಪಾಸನೆಗೋಸ್ಕರ ಒಂದೊಂದು ದೇವತಾ ವಿಗ್ರಹವನ್ನು ನೀಡಿದ್ದರು. ಅದರಂತೆ ಮುಂದೆ ಕೃಷ್ಣಾಪುರ ಮಠದ ಆದ್ಯಯತಿ ಶ್ರೀಜನಾರ್ದನತೀರ್ಥರಿಗೆ ಮಧ್ವರು ಕೊಟ್ಟದ್ದು ದ್ವಿಭುಜ ಕಾಲಿಂಗ ಮರ್ದನ ಕೃಷ್ಣ. ಇದರ ಜತೆ ಜನಾರ್ದನ ತೀರ್ಥರು ಇಷ್ಟಪಟ್ಟು ಉಪಾಸನೆಗೋಸ್ಕರ ನರಸಿಂಹ ದೇವರ ವಿಗ್ರಹವನ್ನೂ ಬಯಸಿ ಪಡೆದಿದ್ದಾರೆ. ಹೀಗೆ ಎರಡು ಪಟ್ಟದ ದೇವರನ್ನು ಕೃಷ್ಣಾಪುರ ಮಠ ಹೊಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next