ತಾಳಮದ್ದಳೆಯಲ್ಲಿ “ಅರ್ಥ ಹೇಳುವುದು’ ಎಂದ ಒಡನೆಯೇ ಯಾರಿಗಾದರೂ ಭಾಗವತರು ಹಾಡಿದ ಪ್ರಸಂಗದ ಪದಗಳಿಗೆ ವಿವರವಾಗಿ ಅರ್ಥ ನೀಡುವುದು ಎಂದು ತೋರಬಹುದು. ಆದರೆ ಬಯಲಾಟಗಳಲ್ಲಿ, ತಾಳಮದ್ದಳೆಗಳಲ್ಲಿ ಬರುವ ಅರ್ಥಗಾರಿಕೆ ಇದಲ್ಲ. ಯಕ್ಷಗಾನದಲ್ಲಿ ಅರ್ಥಗಾರಿಕೆ ಎಂದರೆ ಪಾತ್ರಗಳ ನಡುವೆ ಬರುವ ಸಂಭಾಷಣೆ. ಈ ಸಂಭಾಷಣೆಯ ಪೂರ್ವಭಾವಿಯಾಗಿ ಲಿಖೀತ ರೂಪದಲ್ಲಿ ಸಿದ್ಧವಾಗುವುದಿಲ್ಲ. ತಾನು ವಹಿಸಿದ ಪಾತ್ರಕ್ಕೆ ಸಂಬಂಧಿಸಿದ ಪದ್ಯವನ್ನು ಭಾಗವತರು ಹಾಡಿದಾಗ ಪಾತ್ರಧಾರಿಯು ಆ ಪದ್ಯದ ಚೌಕಟ್ಟಿನಲ್ಲಿ, ಇದಿರು ಅರ್ಥಧಾರಿಯ ಮುಂದಿನ ಪದ್ಯಕ್ಕೆ ಅರ್ಥ ಹೇಳಲು ಸಹಕಾರಿಯಾಗುವಂತೆ ಸ್ವಯಂ ಕಲ್ಪನೆಯಿಂದ ಹೊಸೆಯುವ ಸಂಭಾಷಣೆಯೇ ಅರ್ಥಗಾರಿಕೆ.
ಅರ್ಥಧಾರಿಯಾಗುವವನಲ್ಲಿ ಯಕ್ಷಗಾನದ ಸಮಗ್ರ ಸ್ವರೂಪ ಜ್ಞಾನ, ಪೌರಾಣಿಕ ಕಥಾನಕಗಳ ವಿಸ್ತೃತ ಅನುಭವ, ಭಾಷೆಯ ಮೇಲೆ ಪ್ರಭುತ್ವ ,ವಾಕ್ ಸಾಮರ್ಥ್ಯ, ಪ್ರತಿಭೆ ,ಮಧುರ ಗಂಭೀರ ಸ್ವರ, ಅಭಿನಯ , ಸಾಧನೆ ಈ ಎಂಟು ವಿಶಿಷ್ಟ ಸ್ವಭಾವಗಳು ಇರಲೇಬೇಕು. ಈ ವಿಷಯಗಳನ್ನು ಮುಂದಿಟ್ಟು ದುಬಾಯಿಯಲ್ಲಿ ಯಕ್ಷಗುರು ಶೇಖರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಯಕ್ಷಗಾನ ಅಭ್ಯಾಸಿಗಳಿಗೆ ತರಬೇತಿ ನೀಡಿ ಉತ್ತಮ ತಾಳಮದ್ದಳೆ ತಂಡವನ್ನು ತಯಾರು ಮಾಡಿದ್ದಾರೆ. ಈ ತಂಡದ ಕಲಾವಿದರು ಇತ್ತೀಚೆಗೆ ಗಣೇಶೋತ್ಸವದ ಪ್ರಯುಕ್ತ ಕಲಾಪೋಷಕ ವಾಸುದೇವ ಭಟ್ ಅವರ ಮನೆಯಲ್ಲಿ
ದಿನೇಶ್ ಶೆಟ್ಟಿ ಕೊಟ್ಟಿಂಜ ಇವರ ಸಂಯೋಜನೆಯಲ್ಲಿ ಕವಿ, ಸಂಕಯ್ಯ ಭಾಗವತರ “ಕೃಷ್ಣಾರ್ಜುನರ ಕಾಳಗ’ ತಾಳಮದ್ದಳೆ ಆಯೋಜಿಸಿದ್ದರು.
ಸುಮಾರು ಮೂರು ತಾಸಿನ ತಾಳಮದ್ದಳೆ ಮುಕ್ತ ಕಂಠದ ಪ್ರಶಂಸೆಗೆ ಪಾತ್ರವಾಯಿತು. ಶುದ್ಧ ಕನ್ನಡ ಭಾಷೆಯ ಸೊಗಡು ಜೊತೆಗೆ ಹವ್ಯಕ ಭಾಷೆಯ ಕೆಲವು ಸಂಭಾಷಣೆಗಳು ವಿಶೇಷತೆಗಳು ಒಳಗೊಂಡಿತ್ತು. ಅರ್ಥಗಾರಿಕೆಯಲ್ಲಿ ಕಿಶೋರ್ ಗಟ್ಟಿ ಉಚ್ಚಿಲ ಮತ್ತು ಶರತ್ ಕುಮಾರ್ (ಕೃಷ್ಣ 1 , ಕೃಷ್ಣ 2) ಮಾತಿನ ವೈಖರಿಯಿಂದ ಗಮನ ಸೆಳೆದರು. ಸ್ವಾತಿ ಸಂತೋಷ್ ಕಟೀಲು (ಸುಭದ್ರೆ), ಸುಮಲತಾ ಗಿರೀಶ್ (ರುಕ್ಮಿಣಿ) ಪಾತ್ರವರಿತು ವಾಕ್ ಚಾತುರ್ಯದಿಂದ ಪಾತ್ರ ನಿರ್ವಹಣೆ ಮಾಡಿದರು. ಗಿರೀಶ್ ನಾರಾಯಣ ಕಾಟಿಪಳ್ಳ (ದಾರುಕ) ಅವರ ಹಾಸ್ಯ ಶೈಲಿಯ ಸಂಭಾಷಣೆ, ವಿಡಂಬನಾತ್ಮಕ ಅರ್ಥಗಾರಿಕೆ, ರಾಜಕೀಯ ಸಮ್ಮಿಶ್ರದ ಮಾತುಗಳು ಎಲ್ಲಿಯೂ ಪ್ರಸಂಗದ ಔಚಿತ್ಯ ಮೀರಲಿಲ್ಲ. ಶೇಖರ ಡಿ. ಶೆಟ್ಟಿಗಾರ್ (ಅರ್ಜುನ1) ಸುಟವಾದ ಸಾಹಿತ್ಯ, ಭಾವನಾತ್ಮಕ ಮಾತು ದುಗುಡ ದುಮ್ಮಾನ ಮೊದಲಾದ ದೃಢಚಿತ್ತವಾದ ಪಾತ್ರ ನಿರೂಪಣೆ ಸೊಗಸಾಗಿತ್ತು. ವಾಸು ಬಾಯರ್ (ಭೀಮಸೇನ) ಬಂದಿರೇ ಭಾವಯ್ನಾ… ಪದ್ಮಾ ಹವ್ಯಕ ಭಾಷೆಯ ಸಂಭಾಷಣೆ ಸೊಗಸಾಗಿತ್ತು. ಸ್ವರ ಗಾಂಭೀರ್ಯ, ಮಾತುಗಾರಿಕೆ ಚೆನ್ನಾಗಿತ್ತು. ಸತೀಶ್ ಶೆಟ್ಟಿಗಾರ್ ವಿಟ್ಲ (ಬಲರಾಮ) ಸಂಭಾಷಣೆಯ ಶೈಲಿ, ಸಮರಸದ ಮಾತುಗಳಿಂದ ಪಾತ್ರಕ್ಕೆ ಕಳೆ ಏರಿದೆ.
ಬಾಲಕೃಷ್ಣ ಡಿ. ಶೆಟ್ಟಿಗಾರ್ (ಅರ್ಜುನ 2) ಇಡೀ ಪಾತ್ರದ ಔಚಿತ್ಯವನ್ನು ಮೀರದೆ ಭಿನ್ನವಾಗಿ ಅಷ್ಟೇ ಸೊಗಸಾಗಿ ನಿರೂಪಿಸಿದರು. ಪ್ರಭಾಕರ ಡಿ. ಸುವರ್ಣ (ಭೀಷ್ಮ ) ಭಾಷೆಯ ಸ್ಪಷ್ಟತೆ, ಮಾತಿನ ಪಕ್ವತೆ ಚೆನ್ನಾಗಿತ್ತು, ರವಿ ಕೋಟ್ಯಾನ್ (ಸಾತ್ಯಾಕಿ) ಅವಕಾಶವನ್ನು ಸದುಪಯೋಗ ಪಡಿಸಿದ್ದಾರೆ. ಲತಾ ಸುರೇಶ್ ಹೆಗ್ಡೆ (ಈಶ್ವರ) ಅಶೋಕ್ ಶೆಟ್ಟಿ (ಪಾರ್ವತಿ) ಸುಲಲಿತವಾದ ಮಾತುಗಾರಿಕೆ, ಮರ್ಮವರಿತ ಸಂಭಾಷಣೆ, ಮಂಗಲಕ್ಕೆ ನಾಂದಿ ಹಾಡಿದ ಪರಿ ಸೊಗಸಾಗಿ ಮೂಡಿ ಬಂದಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಶರತ್ ಕುಮಾರ್, ಕೃಷ್ಣ ಪ್ರಸಾದ್ ಸುರತ್ಕಲ್, ಚಂಡೆ ಮದ್ದಳೆ ಯಲ್ಲಿ ವೆಂಕಟೇಶ ಶಾಸ್ತ್ರೀ ಪುತ್ತಿಗೆ, ಭವಾನಿಶಂಕರ ಶರ್ಮ, ವಿಕ್ರಮ ಕಡಂದಲೆ, ಆದಿತ್ಯಾ ದಿನೇಶ್ ಶೆಟ್ಟಿ ರಜನಿ ಭ ಟ್‌ಸಹಕರಿಸಿದರು.