ಮಂಗಳೂರು: ಜಿಲ್ಲೆಯಲ್ಲಿ ಯಾವುದೇ ವಿಪತ್ತು ನಡೆಯುವ ಮೊದಲೇ ಅಪಾಯ ಸಾಧ್ಯತೆಯ ಸೂಕ್ಷ್ಮ ಪ್ರದೇಶಗಳನ್ನು ಸ್ಥಳೀಯವಾಗಿ ಸರಕಾರಿ ವ್ಯವಸ್ಥೆಯ ಕಾರ್ಯಪಡೆ ಗುರುತಿಸಿ ಸನ್ನದ್ಧರಾಗಿರಬೇಕು. ವಿಪತ್ತು ನಡೆದ ಬಳಿಕ ಅಲ್ಲಿಗೆ ಹೋಗುವಂತಹ ಪರಿಸ್ಥಿತಿ ಇರಲೇಬಾರದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮಹಾನಗರ ಪಾಲಿಕೆ ಕಚೇರಿಯಲ್ಲಿ ಬುಧವಾರ ರಾತ್ರಿ ವಿಪತ್ತು ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಈ ಸೂಚನೆ ನೀಡಿದ್ದು, ಮುಂದೆ ವಿಪತ್ತು ನಡೆದರೆ ಒಂದೂ ಜೀವಹಾನಿ ಸಂಭವಿಸದಂತೆ ನೋಡಿಕೊಳ್ಳಬೇಕು ಎಂದರು.
ಸ್ಥಳೀಯವಾಗಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್, ಗ್ರಾಮ ಸಹಾಯಕರಿಂದ ತೊಡಗಿ ಪೊಲೀಸ್ ಇಲಾಖೆಯವರಿಗೆ ಸಂಭಾವ್ಯ ಅಪಾಯಕಾರಿ ಪ್ರದೇಶಗಳ ಮಾಹಿತಿ ಇರುತ್ತದೆ. ಸಾಧ್ಯವಾದಷ್ಟೂ ಅವಘಡ ದುರಂತ ಆಗುವ ಸಾಧ್ಯತೆ ಇದ್ದಲ್ಲಿ ಮೊದಲೇ ಅಲ್ಲಿಗೆ ತೆರಳಿ ಪರಿಶೀಲಿಸಿ ಅದನ್ನು ಎದುರಿಸಲು ಸಜ್ಜಾಗಿರುವುದು ಮುಖ್ಯ, ದುರಂತ ನಡೆದ ಬಳಿಕ ತೆರಳಿ ಪರಿಹಾರ ಕೊಡು ವುದಕ್ಕೆ ಸೀಮಿತವಾಗಬಾರದು ಎಂದರು.
ಇಂಥ ಸನ್ನಿವೇಶಗಳನ್ನು ಎದುರಿಸುವ ಬಗ್ಗೆ ಜಿಲ್ಲಾಧಿಕಾರಿ ಸ್ಥಳೀಯವಾಗಿ ವಿಕೇಂದ್ರಿತ ವ್ಯವಸ್ಥೆ ರಚಿಸಿರುವ ಬಗ್ಗೆ ಸಚಿವರಿಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ವಿಕೇಂದ್ರಿತ ವ್ಯವಸ್ಥೆ ಸರಿಯಾಗಿ ವ್ಯವಸ್ಥೆಯಾಗಬೇಕಾ ದರೆ ಮೊದಲು ವಿಕೇಂದ್ರಿತ ಇಂಟೆಲಿಜೆನ್ಸ್ ಇರಬೇಕಾದುದು ಮುಖ್ಯ. ಇದರಿಂದ ದುರಂತಗಳಿಗೆ ಸ್ಪಂದನೆ ಚುರುಕಾಗುತ್ತದೆ ಹಾಗೂ ಸುಲಭವಾಗುತ್ತದೆ ಎಂದರು.
ವಿಪತ್ತು ನಿರ್ವಹಣ ಇಲಾಖೆ ಕಾರ್ಯದರ್ಶಿ ವಿ.ರಶ್ಮಿ ಮಹೇಶ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ,ಪಂ ಸಿಇಒ ಡಾ| ಆನಂದ್, ಮನಪಾ ಆಯುಕ್ತ ಆನಂದ್ ಸಿ.ಎಲ್, ಮಂಗಳೂರು ಡಿಸಿಪಿ ಸಿದ್ದಾರ್ಥ ಗೋಯಲ್ ಉಪಸ್ಥಿತರಿದ್ದರು.
ತಹಶೀಲ್ದಾರ್ ಉತ್ತರಕ್ಕೆ ಸಚಿವರ ಆಸಮಾಧಾನ
ಜಿಲ್ಲೆಯ ಕೆಲವು ತಹಶೀಲ್ದಾರ್ ಬಳಿ ಸ್ಥಳೀಯವಾಗಿ ಸಂಭಾವ್ಯ ಸೂಕ್ಷ್ಮ ಪ್ರದೇಶಗಳ ಬಗ್ಗೆ ಮಾಹಿತಿ ಕೇಳಿದ ಸಚಿವ ಬೈರೇಗೌಡ ಅವರ ಉತ್ತರದಿಂದ ಆಕ್ರೋಶಿತರಾದರು. ಎಲ್ಲ ವಿಪತ್ತು ಎದುರಿಸಲು ಸನ್ನದ್ಧರಿದ್ದೇವೆ ಎನ್ನುವ ಗಡಿಬಿಡಿಯ ಉತ್ತರ ನೀಡಿದ ತಹಶೀಲ್ದಾರ್ ಒಬ್ಬರನ್ನು ತರಾಟೆಗೆ ತೆಗೆದುಕೊಂಡರು. ನಿಮ್ಮ ವ್ಯಾಪ್ತಿಯಲ್ಲಿ ಮುಂದೆ ಆಗುವ ಅನಾಹುತಗಳಿಗೆ ನೀವೇ ಜವಾಬ್ದಾರಿ ವಹಿಸಿಕೊಳ್ಳುತ್ತೀರಾ ಎಂದು ಚಾಟಿ ಬೀಸಿದರು. ಅಧಿಕಾರಿಗಳು ಇಂತಹ ಗಂಭೀರ ವಿಚಾರಗಳಿಗೆ ಸಂವೇದನೆ ಬೆಳೆಸಿಕೊಳ್ಳಿ ಎಂದರು.