Advertisement

Krishna Story: ಕೃಷ್ಣ-ಕುಚೇಲರ ಬಂಧುತ್ವ-ಗುರು ಸ್ಮರಣೆ

02:16 AM Aug 26, 2024 | Team Udayavani |

ಎಳೆಯ ವಯಸ್ಸಿನಲ್ಲಿ ಒಡನಾಡಿದವರು ಬಹುಕಾಲ ಕಳೆದ ಮೇಲೆ ಪುನಃ ಪರಸ್ಪರರನ್ನು ಕಾಣುವ ಸಂದರ್ಭ ಬಂದಲ್ಲಿ ಅವರಿಗೆ ಆಗುವ ಸಂತೋಷ ವಿಶೇಷವಾದುದು. ಬಾಲ್ಯದ ಒಡನಾಟದಲ್ಲಿ ಒದಗಿದ ವಿಶೇಷ ವಿಷಯಗಳು ಇಬ್ಬರಿಗೂ ನೆನಪಿಗೆ ಬಂದು ಅವರ ಮನಸ್ಸುಗಳನ್ನು ಆನಂದವಾಗಿಸುತ್ತವೆ-ಆರ್ದ್ರ ವಾಗಿಸುತ್ತವೆ.

Advertisement

ಶ್ರೀ ಕೃಷ್ಣನ ಜೀವನದಲ್ಲೂ ಹೀಗಾಯಿತು… ಭಾಗವತ ಪುರಾಣದಲ್ಲಿ ಅದನ್ನು ಬಲು ಸುಂದರವಾಗಿ ವರ್ಣಿಸಲಾಗಿದೆ.
ಶ್ರೀ ಕೃಷ್ಣ-ಕುಚೇಲರ ಗೆಳೆತನದ ಕಥೆ ನಮಗೆ ತಿಳಿದಿದೆ. ಮನೆಗೆ ಬಂದ ಗೆಳೆಯ ಕುಚೇಲನನ್ನು ಶ್ರೀ ಕೃಷ್ಣ ವಿವಿಧ ರೀತಿಯಲ್ಲಿ ಉಪಚರಿಸಿ, ಗುರುಕುಲ ವಾಸಾನಂತರದ ವಿವರಗಳನ್ನು ಕೇಳುತ್ತಾನೆ. ಮದುವೆ, ಮಡದಿ, ಮಕ್ಕಳು, ನಿತ್ಯಜೀವನದ ಪ್ರಶ್ನೆಗ ಳಾದ ಮೇಲೆ ಕೃಷ್ಣನೇ ಆ ಕಾಲದ ನೆನಪನ್ನು ಕೆದಕಿ ಹೇಳುತ್ತಾನೆ.

“ಮಿತ್ರಾ, ಅದೊಂದು ದಿನ ಗುರುಪತ್ನಿಯ ಮಾತಿನಂತೆ ಸೌದೆ ತರಲು ನಾವು ಕಾಡಿಗೆ ಹೋದೆವಷ್ಟೆ. ನಾವು ಕಾಡಿನಲ್ಲಿರುವಾಗಲೇ ಗಾಳಿ ಮಳೆ ಆರಂಭವಾಗಿ ತೊಯ್ದು ಹೋದೆವು. ದಾರಿ ಕಾಣದಾಯಿತು. ಕತ್ತಲಾಯಿತು. ಮಳೆಯ ಬಿರುಸು ಜೋರಾಗಿ ನಾವಿಬ್ಬರೂ ಕೈ ಕೈ ಹಿಡಿದುಕೊಂಡು ಏನನ್ನೂ ಕಾಣದೆ ತೊಳಲಿದೆವು.

ನೀರಿನಲ್ಲಿ ಮುಳುಗಿ ಏಳುತ್ತಾ ಕೈ ಬಿಡದೇ ದಾರಿ ತಿಳಿಯದೇ ಕಾಡಿನಲ್ಲಿಯೇ ಉಳಿದೆವು. ಆಶ್ರಮದಲ್ಲಿ$ಗುರುಗಳಿಗೆ ಚಿಂತೆಯಾಗಿ ಉದಯಕಾಲದಲ್ಲಿ ನಮ್ಮನ್ನು ಹುಡುಕಿ ಕಾಣದೆ ಬೊಬ್ಬಿ ಟ್ಟು ಕರೆದು ಕೊನೆಗೂ ಕಾಡಿನಲ್ಲಿದ್ದ ನಮ್ಮನ್ನು ಸೇರಿದರು. “ಮಕ್ಕಳೇ ಎಂದು ನಮ್ಮನ್ನು ಪ್ರೀತಿಯಿಂದ ತಬ್ಬಿಕೊಂಡು ಆಶ್ರಮಕ್ಕೆ ಕರೆದುಕೊಂಡು ಬಂದು ಉಪಚರಿಸಿದರು. ನಾವು ಕಾಡಿನಲ್ಲಿದ್ದಾಗ ಅವರಿಗಾಗಿದ್ದ ಚಿಂತೆಯೆಷ್ಟು? ನಾವು ದೊರಕಿದ ಮೇಲಾದ ಸಂತೋಷವೆಷ್ಟು! ಇಂತಹ ಗುರುಗಳೇ ಅಲ್ಲವೆ ನಿಜವಾದ ಪಾಲಕ, ಪೋಷಕ, ಮಾರ್ಗದರ್ಶಕರು?’

ಹನಿಗಣ್ಣಾಗಿ ಕೃಷ್ಣ ಹೇಳಿದ್ದನ್ನು ಅದೇ ಸ್ಥಿತಿಯಲ್ಲಿ ಕುಚೇಲನೂ ಕೇಳಿದನಂತೆ. ಬಾಲ್ಯದ ನೆನಪಿನೊಂದಿಗೆ ಗುರುವಿನ ಮಾತೃ ಹೃದಯದ ಸ್ಮರಣೆಯೂ ಶ್ರೀ ಕೃಷ್ಣನ ಈ ಕಥೆಯಲ್ಲಿದೆ. ಬಾಲ್ಯದ ಸ್ನೇಹಿತ ಕುಚೇಲನಿಂದ ಮುಷ್ಠಿ ಅವಲಕ್ಕಿ ತಿಂದು ಅವನಿಗೆ ತಿಳಿಯದಂತೆಯೇ ಶ್ರೀಮಂತನನ್ನಾಗಿ ಮಾಡಿ ಅನುಗ್ರಹಿಸಿ, ತಾನೂ ಆತನೂ ಗುರುಬಂಧುಗಳಾಗಿದ್ದುಕೊಂಡು ಕಳೆದ ದಿನಗಳನ್ನು ಮೆಲುಕು ಹಾಕಿರುವುದು ಶ್ರೀ ಕೃಷ್ಣನ ಹಿರಿಮೆ. ಶ್ರೀ ಕೃಷ್ಣನ ಮಹಿಮೆ ಜನಜೀವನದಲ್ಲಿಯೂ ಹೇಗೆ ಉಳಿದುಕೊಂಡಿದೆ ಎನ್ನುವುದಕ್ಕೆ ಗುಜರಾತಿನಲ್ಲಿ ಸುಧಾಮ(ಕುಚೇಲ)ನ ಗುಡಿಯಿದೆ. ಅಲ್ಲಿ ಅವಲಕ್ಕಿಯೇ ಪ್ರಸಾದ. ಶ್ರೀ ಕೃಷ್ಣನಿಗೆ ಕುಚೇಲ ನೀಡಿದ್ದು ಅವಲಕ್ಕಿಯೇ ಅಲ್ಲವೆ?!.

Advertisement

-ಡಾ| ಪಾದೇಕಲ್ಲು ವಿಷ್ಣು ಭಟ್ಟ ವಿದ್ವಾಂಸರು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next