Advertisement

ಕೃಷ್ಣ ಪಾರಿಜಾತಕ್ಕೆ ಮನಸೋತ ಅಮೆರಿಕನ್ನಡಿಗರು

12:58 PM Mar 20, 2017 | Karthik A |

ಧಾರವಾಡ: ಉತ್ತರ ಕರ್ನಾಟಕದ ರಮಣೀಯ ಕಲೆ ಶ್ರೀಕೃಷ್ಣ ಪಾರಿಜಾತ ಇದೀಗ ಅಮೆರಿಕದಲ್ಲಿ ಐತಿಹಾಸಿಕ ಪ್ರದರ್ಶನಕ್ಕೆ ಸಜ್ಜಾಗಿರುವುದು ಕನ್ನಡಿಗರಿಗೆ ಖುಷಿ ಕೊಡುವ ಸಂಗತಿ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಪ್ತಸಾಗರಗಳನ್ನು ದಾಟಿ ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಧಾರವಾಡದ ಜಾನಪದ ಸಂಶೋಧನಾ ಕೇಂದ್ರವು ಶ್ರೀಕೃಷ್ಣ ಪಾರಿಜಾತ ಬಯಲಾಟವನ್ನು ಕಲಿಸಲು ಸಜ್ಜಾಗಿದೆ. ಮಾ. 23ರಿಂದ ಏಪ್ರಿಲ್‌ 23ರವರೆಗೆ ಅಲ್ಲಿನ 50ಕ್ಕೂ ಹೆಚ್ಚು ಆಸಕ್ತರಿಗೆ ಈ ನಾಟಕದ ತರಬೇತಿ ನೀಡಿ, ಕೊನೆಗೆ ಅವರಿಂದಲೇ ಪ್ರದರ್ಶನವನ್ನೂ ನಡೆಸಲಿದೆ.

Advertisement

ಗ್ರಾಮೀಣ ಕರ್ನಾಟಕದಲ್ಲಿ ಹವ್ಯಾಸಿ ರಂಗಭೂಮಿ ಇಂದಿಗೂ ಜೀವಂತವಾಗಿದ್ದು, ಪ್ರತಿವರ್ಷ ಜಾತ್ರೆಗೋ, ಊರ ಹಬ್ಬಕ್ಕೋ ನಾಟಕಗಳನ್ನು ಕಲಿಯುತ್ತಾರೆ. ಮೇಷ್ಟ್ರನ್ನು ಪರ ಊರು ಮತ್ತು ಜಿಲ್ಲೆಗಳಿಂದ ಕರೆಯಿಸಿಕೊಂಡು, ಅವರಿಂದ ನಾಟಕ ಕಲಿತು ಪ್ರದರ್ಶಿಸುತ್ತಾರೆ. ಅಂತಹ ಪರಂಪರೆಯನ್ನು ಅಮೆರಿಕದ ಕನ್ನಡಿಗರೂ ಪಾಲಿಸಲು ಮುಂದಾಗಿದ್ದಾರೆ. ಈವರೆಗೆ ನಾಡಿನ ಕಲಾತಂಡಗಳು ಆಗಾಗ ವಿದೇಶಗಳಿಗೆ ಹೋಗಿ, ಕಲಾ ಪ್ರದರ್ಶನ ನೀಡುತ್ತಿದ್ದವು. ಈಗ ಒಂದು ಹೆಜ್ಜೆ ಮುಂದೆ ಹೋಗಿ, ನಾಟಕ ಕಲಿಸುವ ನಿರ್ದೇಶಕರನ್ನು, ಸಂಗೀತಗಾರರನ್ನು ಇಲ್ಲಿಂದ ಕರೆಯಿಸಿಕೊಂಡು, ತರಬೇತಿ ಪಡೆದು ಅಭಿನಯಿಸಲು ಅಮೆರಿಕದ ಕನ್ನಡಿಗರು ಉತ್ಸುಕರಾಗಿದ್ದಾರೆ.

ಬಯಲಾಟ ಪರಂಪರೆಯಲ್ಲಿ ಸಾಕಷ್ಟು ಕೆಲಸ ಮಾಡಿ, ನೀನಾಸಂ ಮತ್ತು ರಂಗಭೀಷ್ಮ ಬಿ.ವಿ. ಕಾರಂತರೊಂದಿಗೆ ಸಂಗೀತದಲ್ಲಿ ದಶಕಗಳ ಕಾಲ ಮಾಧುರ್ಯ ಹೊಮ್ಮಿಸಿರುವ ಧಾರವಾಡದ ಜಾನಪದ ತಜ್ಞ ಬಸವಲಿಂಗಯ್ಯ ಹಿರೇಮಠ ಮತ್ತು ವಿಶ್ವೇಶ್ವರಿ ಹಿರೇಮಠ ದಂಪತಿ ಈಗ ನಾಟಕ ನಿರ್ದೇಶಕರಾಗಿ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಥೈಲೆಂಡ್‌, ಲಂಡನ್‌, ಮಲೇಶಿಯಾ ಮುಂತಾದ ಕಡೆಗಳಲ್ಲಿ ಜಾನಪದದ ಕಂಪು ಪಸರಿಸಿರುವ ಈ ದಂಪತಿ, ಈಗ ಪೂರ್ಣ ಪ್ರಮಾಣದ ಬಯಲಾಟ ಕಲಿಸಲು ಸಾಗರೋಲ್ಲಂಘನ ಮಾಡುತ್ತಿದ್ದಾರೆ.

ಏನಿದು ಶ್ರೀಕೃಷ್ಣ ಪಾರಿಜಾತ?: ಪಾರಿಜಾತ ಎಂದರೆ ಶ್ರೀಕೃಷ್ಣ ಪರಮಾತ್ಮನ ಲೀಲೆಗಳನ್ನು ಒಳಗೊಂಡಿರುವ ಬಯಲಾಟ. ಮೊದಲು ಇದು ಶಿರಗುಪ್ಪಿ ಸದಾಶಿವ ರಾಯರು ಬರೆದ ಪುರಾಣವಾಗಿತ್ತು. ಪಾರಾಯಣ ಮಾಡುತ್ತಿದ್ದ ಇದನ್ನು ರಂಗಭೂಮಿಗೆ ಅಳವಡಿಸಿದವರು ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಕುಲಗೋಡು ತಮ್ಮಣ್ಣ. 19ನೇ ಶತಮಾನದ ಆರಂಭದಲ್ಲಿ ರಂಗಕ್ಕೆ ಬಂದ ಈ ಕೃತಿಯನ್ನು 1980ರ ದಶಕದಲ್ಲಿಯೇ ಹಿರಿಯ ಬಯಲಾಟ ಕಲಾವಿದ ಬಸವಲಿಂಗಯ್ಯ ಹಿರೇಮಠ ಮತ್ತು ವಿಶ್ವೇಶ್ವರಿ ಹಿರೇಮಠ ದಂಪತಿ ಕೇವಲ ಎರಡೂವರೆ ತಾಸಿಗೆ ಪರಿಷ್ಕರಿಸಿದರು. ಇದೊಂದು ಗೀತ ರೂಪಕ (ಓಪೇರಾ) ಆಗಿದೆ. ಉತ್ತರ ಕರ್ನಾಟಕದ ರಮ್ಯ ಕಲೆಗಳಲ್ಲಿ ಒಂದಾದ ಶ್ರೀಕೃಷ್ಣ ಪಾರಿಜಾತವನ್ನು ಬಸವಲಿಂಗಯ್ಯ ಹಿರೇಮಠರು ನಾಡಿನ ಮೂಲೆ ಮೂಲೆಗಳಲ್ಲಿ ಪ್ರದರ್ಶನ ಮಾಡಿದ್ದಾರೆ. ಸದ್ಯಕ್ಕೆ 998ನೇ ಯಶಸ್ವಿ ಪ್ರದರ್ಶನ ಕಂಡಿದೆ. ದೇಶದಲ್ಲಿಯೇ ಶ್ರೀಕೃಷ್ಣನ ಕುರಿತ ರಂಗನಾಟಕವೊಂದು ಇಷ್ಟೊಂದು ಪ್ರದರ್ಶನ ಕಾಣುತ್ತಿರುವುದು ಹೊಸ ದಾಖಲೆಯೇ ಆಗಿದೆ.

ನನ್ನ ಪತಿ ಮತ್ತು ನಾನು 40 ವರ್ಷಗಳಿಂದ ಶ್ರೀಕೃಷ್ಣ ಪಾರಿಜಾತದ ಅಧ್ಯಯನ, ಸಂಶೋಧನೆ ನಡೆಸುತ್ತಿದ್ದು, ಸಾವಿರ ಪ್ರದರ್ಶನಗಳನ್ನ ನೀಡಿದ್ದೇವೆ. ಇದೀಗ ಅಮೆರಿಕನ್ನಡಿಗರು ತಾವೇ ಕಲಿತು ಇದನ್ನು ಪ್ರದರ್ಶಿಸುವುದಕ್ಕೆ ಮುಂದಾಗಿರುವುದು ಹೆಮ್ಮೆ ವಿಚಾರ. ಅವರಿಗೆ ತುಂಬು ಮನಸ್ಸಿನಿಂದ ಈ ಕಲೆಯನ್ನು ಧಾರೆ ಎರೆದು ಬರುತ್ತೇವೆ.
– ವಿಶ್ವೇಶ್ವರಿ ಹಿರೇಮಠ, ಪಾರಿಜಾತ ನಿರ್ದೇಶಕಿ

Advertisement
Advertisement

Udayavani is now on Telegram. Click here to join our channel and stay updated with the latest news.

Next