Advertisement

ಕೃಷ್ಣ ಜನ್ಮಾಷ್ಟಮಿ: ಮಕ್ಕಳಿಗೆ ಭಗವದ್ಗೀತಾ ಪುಸ್ತಕ ವಿತರಣೆ

09:45 PM Aug 23, 2019 | Team Udayavani |

ಮೈಸೂರು: ವಿಪ್ರ ಸಹಾಯವಾಣಿ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲಾ ಮಕ್ಕಳಿಗೆ ಸಂಕ್ಷಿಪ್ತವಾಗಿ ರಚಿಸಿರುವ ಭಗವದ್ಗೀತಾ ಪುಸ್ತಕವನ್ನು ನೀಡಿ ಭಗವದ್ಗೀತೆಯ ಮಹತ್ವವನ್ನು ಮಕ್ಕಳಲ್ಲಿ ತಿಳಿಸಿಕೊಡಲಾಯಿತು.

Advertisement

ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್‌ ಮಾತನಾಡಿ, ಶ್ರೀ ಕೃಷ್ಣ ಪರಮಾತ್ಮ ಲೋಕಪ್ರಿಯ ದೇವರು. ತುಳಸಿಯ ಒಂದು ಎಲೆ ಅರ್ಪಿಸಿದರೂ ನಮ್ಮೆಲ್ಲರನ್ನು ರಕ್ಷಿಸುತ್ತಾನೆ. ಕೃಷ್ಣನ ದಿವ್ಯ ಸಂದೇಶ ಬಾಳಿನಲ್ಲಿ ಅನುಸರಿಸಿದರೆ ವಿಶ್ವವೇ ನಂದನವನವಾಗಿ ಶಾಂತಿ ನೆಲೆಸಲಿದೆ ಎಂದರು.

ಸಮಾಜದಲ್ಲಿ ಅಂತಃಕಲಹಗಳನ್ನು ತೊಡೆದುಹಾಕಲು ಕೃಷ್ಣ ಸಂದೇಶಗಳು ನೆರವಾಗುತ್ತದೆ. ಉತ್ತಮ ಸಮಾಜ ನಿರ್ಮಾಣದ ಕೆಲಸಗಳು ಕೃಷ್ಣನ ಅನುಗ್ರಹದಿಂದ ಸಾಧ್ಯವಿದೆ ಎಂದು ಹೇಳಿದರು. ಲೇಖಕ ಪ್ರಸನ್ನ ಹೆಗ್ಡೆ ಮಾತನಾಡಿ, ನೂರಾರು ದೇಶಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಆಚರಿಸುವ ಮೂಲಕ ಜಗತ್ತಿನ ನಾಯಕ ಕೃಷ್ಣ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಸ್ವಂತಕ್ಕೆ ಏನೂ ಬಯಸದೆ ಸಮಾಜಕ್ಕಾಗಿ ಬದುಕಿ, ಎಲ್ಲಾ ರೀತಿಯ ಶಕ್ತಿಯನ್ನು ನೀಡಿದವ ಶ್ರೀ ಕೃಷ್ಣ. ಗೋವಿನ ಜೀವನ ಆದರ್ಶ ಎಲ್ಲರಿಗೂ ಮಾದರಿ ಎಂದು ಹೇಳಿದರು.

ಕೊಳಲು ಸಹೋದರತ್ವ ಸಂಕೇತ: ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ ಮಾತನಾಡಿ, ಶ್ರೀ ಕೃಷ್ಣನ ಕೊಳಲು ಪ್ರೀತಿ ಸಹೋದರತ್ವದ ಸಂಕೇತವಾಗಿದೆ. ಈ ಒಳಾರ್ಥವನ್ನು ನಾವಿಂದು ಅರ್ಥಮಾಡಿಕೊಳ್ಳಬೇಕಿದೆ. ಪ್ರೀತಿ, ಸೋದರತ್ವದ ಸಂಕೇತವಾದ ಶ್ರೀ ಕೃಷ್ಣನ ಕೊಳಲನ್ನು ನಾವಿಂದು ಮರೆತು ಬಿಟ್ಟಿದ್ದೇವೆ. ಮಹಾಭಾರತ ಯುದ್ಧ ಮನುಷ್ಯನ ಜೀವನದಲ್ಲಿ ನಿತ್ಯ ನಡೆಯುವ ಘಟನೆಗಳೇ ಆಗಿವೆ. ಪ್ರೀತಿ, ವಿಶ್ವಾಸದಿಂದ ಬದುಕಿದರೆ ಎಲ್ಲರ ಮನಸ್ಸನ್ನು ಗೆಲ್ಲಬಹುದು ಎಂಬ ಸಂದೇಶವನ್ನು ಆ ಪರಮಾತ್ಮ ನೀಡಿದ್ದಾನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಇಳೈ ಆಳ್ವಾರ್‌ ಸ್ವಾಮೀಜಿ, ನಗರ ಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ, ಉದ್ಯಮಿಗಳಾದ ಅಶ್ವತ್ಥ್ ನಾರಾಯಣ್‌, ಅಪೂರ್ವ ಸುರೇಶ್‌, ಯೋಗನರಸಿಂಹ( ಮುರಳಿ), ವಿಪ್ರ ಸಹಾಯವಾಣಿಯ ಸಂಚಾಲಕರಾದ ವಿಕ್ರಂ ಅಯ್ಯಂಗಾರ್‌, ವಿನಯ್‌ ಕಣಗಾಲ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next