Advertisement
ಬೇಲೂರು – ಹಳೆಬೀಡು ಶಿಲೆಯ ಅದ್ಭುತ ಕೆತ್ತನೆಯ ಮಾದರಿ ಹೊಂದಿರುವ ದಾರುಮಯ ಗರ್ಭಗುಡಿಯಲ್ಲಿ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಮಾರ್ಗದರ್ಶನದೊಂದಿಗೆ ತಂತ್ರಸಾರ ಆಗಮ ರೀತಿಯಲ್ಲಿ 1,008 ಕಲಶಾಭಿಷೇಕದೊಂದಿಗೆ ಪ್ರತಿಷ್ಠಾಪನ ಕಾರ್ಯ ನೆರವೇರಿತು. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರೂ ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದು, ಮಧ್ಯಾಹ್ನದ ಮಹಾಪೂಜೆ, ಬಳಿಕ ಮಹಾ ಅನ್ನಸಂತರ್ಪಣೆ ನಡೆಯಿತು.
1,008 ಕಳಶ ಸಹಿತ ಪೂಜೆಗೆ ಸಂಬಂಧಿಸಿದ ವಿವಿಧ ಪರಿಕರಗಳನ್ನು ಉಡುಪಿಯಿಂದ ಅಮೆರಿಕಕ್ಕೆ ಕೊಂಡೊಯ್ಯಲಾಗಿದೆ. ಪುತ್ತಿಗೆ ಮಠಕ್ಕೆ ಸಂಬಂಧಿಸಿದ 5 ಶಾಖಾ ಮಠಗಳು ಅಮೆರಿಕದಲ್ಲಿದ್ದು ಅಲ್ಲಿಂದಲೂ ವಿವಿಧ ವಸ್ತುಗಳನ್ನು ಇಲ್ಲಿಗೆ ತರಲಾಗಿದೆ. ಯೋಗೇಂದ್ರ ಭಟ್ ಉಳಿ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಅಮೆರಿಕದಲ್ಲಿರುವ ಪುತ್ತಿಗೆ ವಿದ್ಯಾಪೀಠದ ವಿದ್ಯಾರ್ಥಿಗಳು ಕೂಡ ಸಹಕರಿಸಿದರು. ಕ್ರೈಸ್ತ ದೇವಾಲಯ-ಕೃಷ್ಣ ದೇವಾಲಯ
ಕ್ರೈಸ್ತ ಧರ್ಮೀಯರೇ ನೆಲೆಸಿರುವ ಅಮೆರಿಕದಲ್ಲಿ ಹಿಂದೂ ದೇವಾಲಯಗಳ ಸಂಖ್ಯೆ ಕಡಿಮೆಯಿದ್ದು, ಇಂತಹ ಸಂದರ್ಭ ಪುತ್ತಿಗೆ ಶ್ರೀ ಅಲ್ಲಿನ ಕ್ರೈಸ್ತ ದೇವಾಲಯವೊಂದನ್ನು ಖರೀದಿಸಿ ಶ್ರೀ ಕೃಷ್ಣನ ದೇವಾಲಯವನ್ನಾಗಿ ಪರಿವರ್ತಿಸಿದ್ದಾರೆ. ಇದರೊಂದಿಗೆ ಕ್ರೈಸ್ತ ದೇವಾಲಯವೊಂದು ಶ್ರೀಕೃಷ್ಣನ ದೇವಾಲಯವಾಗಿ ಪರಿವರ್ತನೆಯಾಗಿರುವುದು ವಿಶ್ವದಲ್ಲೇ ಮೊದಲು ಎಂಬಂತಾಗಿದೆ. ಸುಮಾರು 4.50 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕೃಷ್ಣ ದೇವಾಲಯದ ಒಳಗೆ 1,000 ಜನ ಕುಳಿತುಕೊಳ್ಳಲು ಅವಕಾಶವಿದೆ.
Related Articles
ಸುಮಾರು 40 ಅಡಿ ಎತ್ತರದ ಗರ್ಭಗುಡಿಯನ್ನು ಸಂಪೂರ್ಣ ಮರದಿಂದಲೇ ನಿರ್ಮಿಸ ಲಾಗಿದೆ. ಗರ್ಭಗುಡಿಯ ಒಳಗೆ ಮತ್ತು ಸುತ್ತಲೂ ಬರ್ಮಾ ತೇಗದ ಮರದಲ್ಲಿ ಬೇಲೂರು – ಹಳೆಬೀಡಿನ ಶಿಲ್ಪಕಲೆ ಮಾದರಿಯಲ್ಲಿ ಶ್ರೀ ಕೃಷ್ಣನ ಅವತಾರ ಲೀಲೆ ಕೆತ್ತಲಾಗಿದೆ. ಮೂಡಬಿದಿರೆಯ ದಾರುಶಿಲ್ಪಿ ಹರೀಶ್ ಆಚಾರ್ಯ ನೇತೃತ್ವದಲ್ಲಿ ಕೆತ್ತನೆ ಕೆಲಸ ಮಾಡಿ ಹಡಗಿನ ಮೂಲಕ ಅಮೆರಿಕಕ್ಕೆ ಸಾಗಿಸಲಾಗಿದೆ. ಹರೀಶ್ ಆಚಾರ್ಯ ಅವರ ಸಹಾಯಕರು ಅಲ್ಲಿ ಸುಮಾರು ಒಂದು ತಿಂಗಳು ಇದ್ದು ಅದರ ಜೋಡಣೆಯನ್ನು ನಿರ್ವಹಿಸಿದ್ದಾರೆ. ಗರ್ಭಗುಡಿಯ ಮಧ್ಯದಲ್ಲಿರುವ ತಾಮ್ರದ ಹೊದಿಕೆ ಆಕರ್ಷಕವಾಗಿದ್ದು, ಉಡುಪಿಯ ಬ್ರಹ್ಮ ರಥವನ್ನು ಹೋಲುತ್ತಿದೆ. ಕಾರ್ಕಳದ ಕಪ್ಪು ಶಿಲೆಯಿಂದ ಕೃಷ್ಣನ ವಿಗ್ರಹ ಪ್ರತಿಷ್ಠಾಪನೆಗೆ ಪೀಠ ತಯಾರಿಸಲಾಗಿದೆ.
Advertisement