ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಗಡಿ ಭಾಗದ ನದಿಗಳು ಮೈದುಂಬಿ ಹರಿಯುತ್ತಿವೆ. ಕೆಳಹಂತದ ಮೂರು ಸೇತುವೆಗಳು ಜಲಾವೃತಗೊಂಡು ಸಂಚಾರ ಕಡಿತಗೊಂಡಿವೆ.
ಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟಪ್ರದೇಶದಲ್ಲಿ ಮೂರ್‍ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ 24 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿರುವುದರಿಂದ ಚಿಕ್ಕೋಡಿ ತಾಲೂಕಿನ ನದಿಗಳ ಹರಿವಿನ ಪ್ರಮಾಣದಲ್ಲಿ ಹೆಚ್ಚಳಗೊಂಡಿವೆ.
ದೂಧಗಂಗಾ, ವೇದಗಂಗಾ ನದಿ ಸಂಗಮದ ಬಳಿ ಇರುವ ಕಾರದಗಾ- ಭೋಜ ಸೇತುವೆ, ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬೋಜವಾಡಿ-ಕುನ್ನುರ, ದೂಧಗಂಗಾ ನದಿಗೆ ಇರುವ ಮಲಿಕವಾಡ-ದತ್ತವಾಡ ಸೇತುವೆಗಳು ಜಲಾವೃತಗೊಂಡಿವೆ.
ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಲ್ಲೋಳ-ಯಡೂರ ಸೇತುವೆ ಬಳಿ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ ಹಾಗೂ ಉಪನದಿಗಳಾದ ವೇದಗಂಗಾ ಮತ್ತು ದೂಧಗಂಗಾ ನದಿಗಳಿಂದ ಹರಿದು ಬರುತ್ತಿರುವ ನೀರಿನಲ್ಲಿ ಅಂತರಗಂಗೆ ಬಳ್ಳಿ ಕಲ್ಲೋಳ ಸೇತುವೆ ಬಳಿ ಬ್ಯಾರೇಜ್‌ಗೆ ತಡೆಹಿಡಿದಿದೆ.
ಹೀಗಾಗಿ ನೀರಿನ ಹರಿವಿನಲ್ಲಿ ವೇಗ ಕಡಿಮೆಯಾಗಿದೆ. ಕೆಳಹಂತದ ಬ್ಯಾರೇಜ್‌ಗಳು ಜಲಾವೃತಗೊಂಡಿರುವುದರಿಂದ ನದಿ ತೀರದ ರೈತರು ಸುತ್ತುವರೆದು ಪ್ರಯಾಣ ಮಾಡುತ್ತಿದ್ದಾರೆ. ಜಲಾವೃತಗೊಂಡ ಬ್ಯಾರೇಜ್‌ಗಳ ಬಳಿ ಸೂಕ್ತ ರಕ್ಷಣೆ ಒದಗಿಸಲು ಪೊಲೀಸ್ ಇಲಾಖೆ ತಿಳಿಸಿದ್ದು, ಸೇತುವೆಗಳ ಬಳಿ ಬ್ಯಾರೇಕೆಡ್ ಅಳವಡಿಸುವಂತೆ ಸೂಚನೆ ನೀಡಲಾಗಿದೆ ಎಂದು ಉಪವಿಭಾಗಾ ಧಿಕಾರಿ ರವೀಂದ್ರ ಕರಲಿಂಗನವರ ತಿಳಿಸಿದ್ದಾರೆ.