Advertisement

Mangaluru: 6 ತಿಂಗಳಲ್ಲಿ 1,700 ವಿಎ ನೇಮಕ: ಕೃಷ್ಣ ಬೈರೇಗೌಡ

11:10 AM Aug 30, 2023 | Team Udayavani |

ಮಂಗಳೂರು: ತಳಮಟ್ಟ ದಲ್ಲೇ ಕಂದಾಯ ಇಲಾಖೆ ಕೆಲಸಕ್ಕೆ ಚುರುಕು ನೀಡುವ ಉದ್ದೇಶದಿಂದ ಮುಂದಿನ ಆರು ತಿಂಗಳಲ್ಲಿ 1,700ರಷ್ಟು ಗ್ರಾಮ ಆಡಳಿತಾಧಿಕಾರಿ (ವಿಎ)ಗಳನ್ನು ನೇಮಕ ಮಾಡಲಾಗುವುದು, ಅಲ್ಲದೆ ಸರ್ವೇಯರುಗಳ ನೇಮಕಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

Advertisement

ನಗರದ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ಯಲ್ಲಿ ಅವರು ಮಾತನಾಡಿದರು.

ಪಾರದರ್ಶಕ ರೀತಿಯಲ್ಲಿ ಜಿಲ್ಲಾಧಿ ಕಾರಿಗಳ ಮೂಲಕ ವಿಎಗಳನ್ನು ನೇಮಿಸಲಾಗುವುದು. ನಾಲ್ಕರಿಂದ 6 ತಿಂಗಳಲ್ಲಿ 250ರಷ್ಟು ಪರವಾನಿಗೆ ಪಡೆದ ಭೂಮಾಪಕರ ನೇಮಕ, 50ರಷ್ಟು ಸರಕಾರಿ ಭೂಮಾಪಕರು ಹಾಗೂ 27ರಷ್ಟು ಎಡಿಎಲ್‌ಆರ್‌(ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕರು)ಗಳನ್ನೂ ನೇಮಿಸಲಾಗುವುದು ಎಂದರು.

ತಕರಾರು, ಪಹಣಿ ಹಾಗೂ ನಮೂನೆ 53, 57 ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದ್ದು, ಈ ಎಲ್ಲ ಪ್ರಕರಣಗಳಿಗೆ ಕಾಲಮಿತಿಯೊಳಗೆ ಪರಿಹಾರ ನೀಡಬೇಕು. ಡಿಸಿ, ಎಸಿ ಹಾಗೂ ತಹಶೀಲ್ದಾರ್‌ ನ್ಯಾಯಾಲಯ ಗಳು ತ್ವರಿತಗತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಿರೀಕ್ಷೆ ಸಾಕಾರಗೊಳಿಸಿ
ಹೊಸ ಸರಕಾರ ಬಂದಿದೆ, ಆಡಳಿತ ದಲ್ಲೂ ಹೊಸತನ ಬರಬೇಕು ಎಂಬ ನಿರೀಕ್ಷೆ ಜನರಲ್ಲಿದೆ, ಆದರೆ ಎಲ್ಲ ಇಲಾಖೆಗಳಿಗೆ ಮಾತೃ ಇಲಾಖೆಯಾದ ಕಂದಾಯ ಇಲಾಖೆಯಲ್ಲೇ ಜನರಿಗೆ ಸಮಸ್ಯೆಯಾಗುತ್ತಿರುವ ದೂರುಗಳಿವೆ. ಇದು ಬದಲಾಗಬೇಕು, ಜನರನ್ನು ಕಚೇರಿಯಿಂದ ಕೋರ್ಟ್‌ ವರೆಗೆ ಚಕ್ರವ್ಯೂಹ ದೊಳಗೆ ಅಲೆದಾಡಿಸುವ ವ್ಯವಸ್ಥೆಗೆ ಪರಿಹಾರ ಸಿಗಬೇಕು ಎಂದರು.

Advertisement

ವಿಚಾರಣೆಯಾಗಿ ಆದೇಶಕ್ಕಾಗಿ ಕಾದಿರಿಸಲ್ಪಟ್ಟ ಪ್ರಕರಣಗಳ ಬಗ್ಗೆಯೂ ಗಮನ ಸೆಳೆದ ಸಚಿವರು, ಅಂತಹ ಪ್ರಕರಣಗಳಿಗೆ ಸಂಬಂಧಿಸಿ 15 ದಿನಗಳೊಳಗಾಗಿ ಆದೇಶ ಹೊರಡಿಸಬೇಕು ಎಂಬ ಕಾನೂನು ಇದೆ. ತುರ್ತಾಗಿ ಆದೇಶ ಹೊರಡಿಸಬೇಕು ಎಂದು ತಾಕೀತು ಮಾಡಿದರು.

ಎಸಿ ನ್ಯಾಯಾಲಯಗಳಲ್ಲಿ 3,354 ಪ್ರಕರಣಗಳು ಬಾಕಿ ಇವೆ. 164 ಪ್ರಕರಣ 5 ವರ್ಷಗಳಿಗೂ ಹೆಚ್ಚು ಬಾಕಿ ಇವೆ, 142 ಪ್ರಕರಣ 2ರಿಂದ 5 ವರ್ಷಗಳಿಂದ ಬಾಕಿ ಇವೆ. ಡಿಸಿ ನ್ಯಾಯಾಲಯದಲ್ಲಿ 495 ಪ್ರಕರಣಗಳು (5 ವರ್ಷಕ್ಕಿಂತ ಮೀರಿದ 83 ಪ್ರಕರಣ, 64 ಪ್ರಕರಣ 2 ರಿಂದ 5 ವರ್ಷದ ಬಾಕಿ) ಬಾಕಿ ಇವೆ, ಇವೆಲ್ಲವನ್ನು 3 ತಿಂಗಳ ಒಳಗೆ ವಿಲೇ ಮಾಡಬೇಕೆಂದು ಸೂಚಿಸಿದರು.

ಕಡಲ್ಕೊರೆತ, ಭೂ ಕುಸಿತ ಎಚ್ಚರಿಕೆ
ಮಂಗಳೂರು ಭಾಗದಲ್ಲಿ ಕಡಲ್ಕೊರೆತ ಸಾಮಾನ್ಯವಾದ ದೀರ್ಘಾವಧಿ ಸಮಸ್ಯೆ. ಆದರೆ ಈ ವಿಚಾರ ಕಂದಾಯ ಇಲಾಖೆಯ ಅಡಿಯಲ್ಲಿ ನೇರವಾಗಿ ಬರುವುದಿಲ್ಲ. ಆದರೂ ಕಡಲ್ಕೊರೆತ ಅಧಿಕವಾಗಿರುವ ದುರ್ಬಲ ಪ್ರದೇಶಗಳ ಬಗ್ಗೆ ಅಧಿಕಾರಿಗಳು ಎಚ್ಚರದಿಂದ ಇರಬೇಕು. ಸಮುದ್ರ ಕೊರೆತದ ಬಗ್ಗೆ ಕೇರಳ ಮಾದರಿಯ ಬಗ್ಗೆ ಅಧ್ಯಯನ-ಸಂಶೋಧನೆಯ ಅಗತ್ಯ ವಿದ್ದು ಬಂದರು ಇಲಾಖೆ ಜತೆಗೂ ಮಾತುಕತೆ ನಡೆಸಲಾಗುವುದು ಎಂದರು.

ಬಾಕಿ ಕಾಮಗಾರಿಗಳಿಗೆ ಗಡುವು!
ಮಳೆಯಿಂದಾಗಿ ಹಾನಿಗೀಡಾರುವ ಸಾರ್ವಜನಿಕ ಆಸ್ತಿ ದುರಸ್ತಿಗೆ 2019 ರಿಂದ 2022ರಲ್ಲಿ ಮಂಜೂರಾಗಿ ಇನ್ನೂ
ಪೂರ್ಣಗೊಳ್ಳದ ಕಾಮಗಾರಿಗಳನ್ನು (ಕೊರೋನಾ ಅವಧಿ ಸೇರಿದಂತೆ) 15 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಶಾಸಕರಾದ ಅಶೋಕ್‌ ಕುಮಾರ್‌ ರೈ, ವೇದವ್ಯಾಸ ಕಾಮತ್‌, ಹರೀಶ್‌ ಕುಮಾರ್‌, ಮಂಜುನಾಥ ಭಂಡಾರಿ, ಕಂದಾಯ ಇಲಾಖೆ ಪ್ರ. ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಕಟಾರಿಯಾ, ಕಂದಾಯ ಇಲಾಖೆಯ ಆಯುಕ್ತ ಸುನಿಲ್‌ ಕುಮಾರ್‌, ಜಿಲ್ಲಾಧಿಕಾರಿ ಮುಲ್ಲೆಮುಗಿಲನ್‌, ಜಿ.ಪಂ. ಸಿಇಒ ಡಾ| ಆನಂದ್‌ ಕೆ. ಉಪಸ್ಥಿತರಿದ್ದರು.

ಇ-ಆಫೀಸ್‌ ಬಳಕೆ ಮಾಡಿ
ಹಳೇ ಕಾಲದ ಪತ್ರ ವ್ಯವಹಾರವನ್ನು ಕೈಬಿಟ್ಟು ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವ ಹಾಗೂ ಕಡತಗಳ ಶೀಘ್ರ ವಿಲೇವಾರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಗಸ್ಟ್‌ 15ರಿಂದ ಇ-ಆಫೀಸ್‌ ಅನುಷ್ಠಾನಗೊಳಿಸಲಾಗಿದೆ. ಎಲ್ಲ ಜಿಲ್ಲಾಧಿಕಾರಿಗಳೂ ಈಗಾಗಲೇ ಇ-ಆಫೀಸ್‌ ಮೂಲಕವೇ ಕಡತ ವಿಲೇವಾರಿ ಮಾಡುತ್ತಿದ್ದು, ತಹಶೀಲ್ದಾರ್‌ ಹಾಗೂ ವಿಭಾಗಾಧಿಕಾರಿಗಳು ಸೆಪ್ಟೆಂಬರ್‌ 1ರ ಒಳಗಾಗಿ ಇ-ಆಫೀಸ್‌ ಬಳಸಬೇಕು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಸ್ವತಃ ನಾನು ಇ-ಆಫೀಸ್‌ ಮೂಲಕ ಕಡತ ವಿಲೇವಾರಿ ಮಾಡುತ್ತಿದ್ದೇನೆ. ಕಡತಗಳು ಇ-ಆಫೀಸ್‌ನಲ್ಲಿ ನನ್ನ ಲಾಗಿನ್‌ಗೆ ಬಂದರೆ 2 ದಿನದಲ್ಲಿ ವಿಲೇವಾರಿ ಮಾಡಿದ್ದೇನೆ. ಇ-ಆಫೀಸ್‌ ಸಹಜವಾಗಿ ಕಾರ್ಯ ದಕ್ಷತೆ ಹೆಚ್ಚಿಸಲಿದೆ. ಯಾವುದೇ ಸ್ಥಳದಿಂದಲೂ ಕಡತ ವಿಲೇವಾರಿ ಮಾಡಬಹುದಾಗಿದೆ. ಶಾಲೆ, ಗ್ರಾಮ ಪಂಚಾಯತ್‌ಗೆ ಜಮೀನು ನೀಡಲು ಆಗುತ್ತಿರುವ ವಿಳಂಬಕ್ಕೆ ಇ-ಆಫೀಸ್‌ ಮೂಲಕ ಪರಿಹಾರ ನೀಡಬಹುದು ಎಂದರು.

ಉತ್ತಮ ಕೆಲಸ ಮಾಡುವ ಅಧಿಕಾರಿಗಳಿಗೆ ಸರಕಾರದಿಂದಲೇ ವರ್ಷಕ್ಕೊಮ್ಮೆ ಪ್ರಶಸ್ತಿ ನೀಡಿ ಅವರ ಸೇವೆ ಗುರುತಿಸಲಾಗುವುದು, ಅದೇ ರೀತಿ ಏನು ಮಾಡಿದರೂ ಬದಲಾಗದಂತಹವರ ವಿರುದ್ಧ ಸೂಕ್ತ ಕ್ರಮವನ್ನೂ ಕೈಗೊಳ್ಳಲಾಗುವುದು ಎಂದರು.

ರೆಕಾರ್ಡ್‌ ರೂಂಗಳ ಡಿಜಿಟಲೀಕರಣ
ಮಂಗಳೂರು: ಕಂದಾಯ ಇಲಾಖೆ ಜನಪರವಾಗಿ ಕೆಲಸ ಮಾಡಬೇಕು ಎನ್ನುವುದು ಸರಕಾರ, ಮುಖ್ಯಮಂತ್ರಿಗಳ ಆಶಯ. ಅದಕ್ಕಾಗಿ ಆ ಮೂಲಕ ಇಲಾಖೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದು ಆಡಳಿತ ಸುಧಾರಣೆ ಮಾಡಬೇಕು ಎನ್ನುವ ಉದ್ದೇಶ ಹೊಂದಲಾಗಿದೆ. ಮುಖ್ಯವಾಗಿ ಜನರಿಗೆ ತ್ವರಿತವಾಗಿ ದಾಖಲೆಗಳು ಸಿಗುವಂತಾಗಲು ರೆಕಾರ್ಡ್‌ ರೂಂಗಳನ್ನು ಸಂಪೂರ್ಣವಾಗಿ ಡಿಜಿಟಲೈಸ್‌ ಮಾಡುವ ಪೈಲಟ್‌ ಯೋಜನೆಗೆ ಚಾಲನೆ ನೀಡುವ ಯೋಚನೆಯಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಮಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರೆಕಾರ್ಡ್‌ ರೂಂನಲ್ಲಿ ಹಲವು ವರ್ಷಗಳಿಂದ ದಾಖಲೆಗಳನ್ನು ಸಂಗ್ರಹಿಸಿ ಇಡಲಾಗುತ್ತಿದ್ದು, ಅವುಗಳು ವರ್ಷಗಳು ಕಳೆದಂತೆ ಶಿಥಿಲವಾಗುತ್ತವೆ. ಈಗಾಗಲೇ ಇರುವ ದಾಖಲೆಗಳು ಶಿಥಿಲವಾಗಿವೆ.

ಇನ್ನೊಂದೆಡೆ ದಾಖಲೆ
ಗಳನ್ನು ಪಡೆಯಬೇಕು ಎಂದಾದರೆ ಸಾರ್ವಜನಿಕರು ಸಾಕಷ್ಟು ಅಲೆಯಬೇಕಾಗುತ್ತದೆ. ಸ್ಕಾ Âನಿಂಗ್‌ ಮಾಡಿ ಇಟ್ಟುಕೊಳ್ಳುವುದರಿಂದ ಇದನ್ನು ತಪ್ಪಿಸಬಹುದು. ರಾಜ್ಯದ ಕೆಲವು ಭಾಗಗಳಲ್ಲಿ ಹಳೆಯ ದಾಖಲೆಗಳನ್ನು ತಿದ್ದಿ ಬೋಗಸ್‌ ದಾಖಲೆ ಸೃಷ್ಟಿಸಿರುವ ಉದಾಹರಣೆಯೂ ಇದೆ. ಇದನ್ನು ತಡೆಗಟ್ಟಬೇಕಾದರೆ ಇರುವ ದಾಖಲೆಗಳನ್ನು ಒಂದು ಬಾರಿ ಸ್ಕಾನಿಂಗ್‌ ಮಾಡಿದರೆ ತಿದ್ದುಪಡಿಗೆ ಅವಕಾಶವಿಲ್ಲ. ಮನೆಯಿಂದಲೇ ಆನ್‌ಲೈನ್‌ನಲ್ಲಿ ದಾಖಲೆಗಳನ್ನು ನೋಡುವ ಅವಕಾಶವೂ ದೊರೆಯುತ್ತದೆ ಎಂದರು.

ದ.ಕ.ದಲ್ಲಿ ಸ್ಥಳೀಯವಾದ ಹಲವು ಸಮಸ್ಯೆಗಳಿವೆ. ಅವುಗಳಿಗೆ ಪರಿಹಾರ ಹುಡುಕಬೇಕು. ಸರ್ವೇ ನಂಬರ್‌ನಲ್ಲಿರುವ ವಿಸ್ತೀರ್ಣ ಅಥವಾ ಆರ್‌ಟಿಸಿಯಲ್ಲಿರುವ ವಿಸ್ತೀರ್ಣ ಮೂಲ ವಿಸ್ತೀರ್ಣಕ್ಕಿಂತ ಹೆಚ್ಚಿಲ್ಲದಿದ್ದರೆ, ಅಂತಹ ಕಡೆ ಅಭಿಯಾನ ಮಾದರಿಯಲ್ಲಿ ಪೋಡಿಗಳನ್ನು ಮಾಡಿಕೊಡಬೇಕು ಎಂದು ಪ್ರಧಾನ ಕಾರ್ಯದರ್ಶಿ, ಡಿಸಿಗಳ ಜತೆ ಚರ್ಚೆ ಮಾಡಲಾಗಿದೆ ಎಂದರು.

ಇದನ್ನೂ ಓದಿ: Protest: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಹೆಸ್ಕಾಂ ವಿರುದ್ಧ ರೈತರ ಆಹೋರಾತ್ರಿ ಧರಣಿ

Advertisement

Udayavani is now on Telegram. Click here to join our channel and stay updated with the latest news.

Next