ಬೆಂಗಳೂರು: ರಾಜ್ಯದ ಕೃಷಿ ಪಂಪ್‌ಸೆಟ್‌ಗಳಿಗೆ ರೈತರು ತಮ್ಮ ಆಧಾರ್ ಜೋಡಣೆ ಮಾಡಿಕೊಳ್ಳಲು ಸೋಮವಾರ, ಸೆ. 23 ಕೊನೆಯ ದಿನವಾಗಿದ್ದು, ಹೀಗೆ ಜೋಡಣೆ ಮಾಡಿಕೊಳ್ಳದವರಿಗೆ ಬರುವ ತಿಂಗಳ ಸಹಾಯಧನ ಬಿಡುಗಡೆಯಲ್ಲಿ ತೊಂದರೆ ಯಾಗುವ ಸಾಧ್ಯತೆ ಇದೆ.
10 ಎಚ್‌ಪಿವರೆಗಿನ ನೀರಾವರಿ ಪಂಪ್‌ಸೆಟ್ ಗಳ ಸ್ಥಾವರಗಳನ್ನು ಆಧಾರ್ ಸಂಖ್ಯೆ ಯೊಂದಿಗೆ ಜೋಡಣೆ ಮಾಡಿಸಿಕೊಳ್ಳ ದವರಿಗೆ ಇಂಥದ್ದೊಂದು ಸುಳಿವನ್ನು ಇಂಧನ ಇಲಾಖೆ ನೀಡಿದೆ. ಅದರಂತೆ ಕೃಷಿ ಪಂಪ್‌ಸೆಟ್‌ಗಳಿಗೆ ನೀಡಲಾಗುತ್ತಿರುವ ಸಹಾಯಧನವನ್ನು ಎಂದಿ ನಂತೆ ಬರುವ ಅಕ್ಟೋಬರ್‌ನಲ್ಲಿ ವ್ಯವಸ್ಥಿತ ರೂಪದಲ್ಲಿ ಪಡೆಯಲು ಆಧಾರ್ ಜೋಡಣೆ ಪ್ರಕ್ರಿಯೆಯನ್ನು ಸೆ. 23ರ ಒಳಗೆ ಪೂರ್ಣಗೊಳಿಸಿ, ಸೆ. 24ಕ್ಕೆ ಸರಕಾರಕ್ಕೆ ವರದಿ ನೀಡಬೇಕು ಎಂದು ಸೂಚನೆ ನೀಡಿದೆ. ನಿಗದಿತ ಅವಧಿಯೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು.
ಇಲ್ಲವಾದರೆ ಮುಂದೆ ಉಂಟಾಗುವ ಸಹಾಯಧನ ಬಿಡುಗಡೆಯ ವ್ಯತಿರಿಕ್ತ ಪರಿಣಾಮಗಳಿಗೆ ಆಯಾ ಎಸ್ಕಾಂಗಳನ್ನು ನೇರ ಹೊಣೆಯಾಗಿ ಮಾಡಲಾಗುವುದು ಎಂದು ಇಂಧನ ಇಲಾಖೆ ಸ್ಪಷ್ಟ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ಸಹಜವಾಗಿ ಎಸ್ಕಾಂಗಳು ಆಯಾ ವ್ಯಾಪ್ತಿಯ ಫಲಾನುಭವಿಗಳಿಗೆ ಗಡುವು ನೀಡಲಿದ್ದು, ಮುಂಬರುವ ದಿನಗಳಲ್ಲಿ ಇದರ ಬಿಸಿ ತಟ್ಟುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಸುಮಾರು 1.92 ಲಕ್ಷ ರೈತರು ಇನ್ನೂ ಆಧಾರ್ ಜೋಡಣೆ ಮಾಡಿಕೊಂಡಿಲ್ಲ. ಈ ಹಿಂದೆ ಆ. 25ರ ಒಳಗೆ ಆಧಾರ್ ಜೋಡಣೆ ಪ್ರಕ್ರಿಯೆ ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು. ಬಳಿಕ ಗಡುವನ್ನು ಸೆ. 23ಕ್ಕೆ ವಿಸ್ತರಿಸಲಾಗಿತ್ತು. ಈವರೆಗೆ 10 ಎಚ್‌ಪಿವರೆಗಿನ 33.83 ಲಕ್ಷ ಕೃಷಿ ಪಂಪ್‌ಸೆಟ್‌ಗಳ ಪೈಕಿ 31.90 ಲಕ್ಷ ಪಂಪ್‌ಸೆಟ್‌ಗಳು ಆಧಾರ್ ಜೋಡಣೆ ಆಗಿದ್ದು, ಬಾಕಿ ಉಳಿದ 1.92 ಲಕ್ಷ ಪಂಪ್‌ಸೆಟ್‌ಗಳ ಪೈಕಿ ಹಲವು ಕಾರಣಗಳಿಂದ 68,858 ಪಂಪ್‌ಸೆಟ್‌ಗಳು ತಿರಸ್ಕೃತಗೊಂಡಿವೆ. 1.17 ಲಕ್ಷ ಪಂಪ್‌ಸೆಟ್‌ಗಳ ಆಧಾರ್ ಸಂಖ್ಯೆಗಳು ಜೋಡಣೆ ಆಗಬೇಕಿದೆ.
ವರದಿ ಸಲ್ಲಿಸುವಂತೆ ಸೂಚನೆ
ಈಗಾಗಲೇ ಆಧಾರ್ ಜೋಡಣೆಯಾದ ಶೇ. 94.30ರಷ್ಟು ನೀರಾವರಿ ಪಂಪ್‌ಸೆಟ್‌ಗಳ ಮಾಲಕತ್ವ, ಭೂ ವಿಸ್ತೀರ್ಣ ಮತ್ತು ಇತರ ಅಂಶಗಳ ಬಗ್ಗೆ ವಿಶ್ಲೇಷಣೆಯ ವಿವರಗಳನ್ನೂ ಸರಕಾರಕ್ಕೆ ಸಲ್ಲಿಸುವಂತೆ ಇಂಧನ ಇಲಾಖೆ ಎಸ್ಕಾಂಗಳಿಗೆ ಸೂಚನೆ ನೀಡಿದೆ.