ಮೂಲ್ಕಿ: ನಮ್ಮ ಸಂಸ್ಕೃತಿ ಕೃಷಿಯಲ್ಲಿದೆ. ದೇಶ ಐಟಿ ಕ್ಷೇತ್ರದಲ್ಲಿ ಬಹಳಷ್ಟು ಮುಂದಿದ್ದು, ಕಂಪ್ಯೂಟರ್ ಮೂಲಕ ಎಲ್ಲವೂ ಸಾಧ್ಯವಾಗುತ್ತದೆ. ಆದರೆ ಹೊಟ್ಟೆ ತುಂಬಿಸಲಾಗದು. ತಿನ್ನುವ ಅನ್ನವನ್ನು ಡೌನ್‌ಲೋಡ್ ಮಾಡಲಾಗದು. ದೇಶದ ನೈಜ ಹೀರೋ ರೈತ. ಆತ ಬೆಳೆದ ಭತ್ತದಿಂದ ಮಾತ್ರ ಉಣ್ಣುವ ಅನ್ನ ಸಿಗುವುದು ಸಾಧ್ಯ ಎಂದು ಕೇಮಾರು ಸಾಂದೀಪನಿ ಆಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಅವರು ಮೂಲ್ಕಿಯಲ್ಲಿ ನಡೆಯುತ್ತಿರುವ ಕೃಷಿ ಮೇಳ “ಕೃಷಿ ಸಿರಿ 20-22’ರ 2ನೇ ದಿನದ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದರು. ಮಂಗಳೂರು ಇಸ್ಕಾನ್‌ನ ಸ್ವಾಮಿ ಶ್ರೀ ಸನಂದನದಾಸ್ ಆಶೀರ್ವಚನ ನೀಡಿದರು.
ರೈತನನ್ನು ದೇಶದ ಬೆನ್ನೆಲುಬು ಎಂದು ಹೇಳಲಾಗುತ್ತಿತ್ತು. ಈಗ ರೈತನ ಬೆನ್ನು ಮುರಿದಿದೆ. ಸರಕಾರ ಬೆಂಬಲ ಬೆಲೆ ಮತ್ತಿತರ ಸವಲತ್ತುಗಳನ್ನು ಸರಿಯಾದ ಸಮಯದಲ್ಲಿ ಕೊಟ್ಟು ಸಹಾಯ ಮಾಡಬೇಕು. ಕೃಷಿಕರ ಬೆಳೆಗೆ ಸೂಕ್ತ ಬೆಲೆ ಸಿಗಬೇಕು. ಆಗ ಮಾತ್ರ ರೈತನ ಅಭಿವೃದ್ಧಿ ಸಾಧ್ಯ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಕೃಷಿ ಮೇಳದ ಅಧ್ಯಕ್ಷ ವಿಜಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ನಿಟ್ಟೆ ಡೆಂಟಲ್ ಕಾಲೇಜಿನ ಅಸೋಸಿಯೇಟ್ ಡೀನ್ ಡಾ| ಅಮರಶ್ರೀ ಅಮರನಾಥ್ ಶೆಟ್ಟಿ, ಬೆಳಪು ದೇವಿಪ್ರಸಾದ್ ಶೆಟ್ಟಿ, ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ, ಉದ್ಯಮಿ ಜೀವನ್ ಶೆಟ್ಟಿ ಮೂಲ್ಕಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ ಕೆ.ಆರ್., ಉದ್ಯಮಿ ರಾಜೇಂದ್ರ ವಿ. ಶೆಟ್ಟಿ, ಮೂಲ್ಕಿ ಶ್ರೀ ವೆಂಕಟರಮಣ ದೇಗುಲದ ಮೊಕ್ತೇಸರ ಎಂ. ಅತುಲ್ ಕುಡ್ವ, ಜೀವನ್ ಕೆ. ಶೆಟ್ಟಿ ಮೂಲ್ಕಿ, ಉದ್ಯಮಿಗಳಾದ ರಾಘವೇಂದ್ರ ನೆಲ್ಲಿಕಟ್ಟೆ, ಜಗದೀಶ್ ಶೆಟ್ಟಿ ಐ ನೋಳಿ ಮತ್ತು ಸತೀಶ್ ಶೆಟ್ಟಿ ಕೊಟ್ರಪಾಡಿ ಉಪಸ್ಥಿತರಿದ್ದರು.
ಕೃಷಿಯಲ್ಲಿ ವಿಶೇಷ ಆವಿಷ್ಕಾರಗಳನ್ನು ಮಾಡಿರುವ ಹರಿಕೃಷ್ಣ ತೋಡಿನ್ನಾಯ ಕಿನ್ನಿಗೋಳಿ, ಕಾಳಪ್ಪ ಪಿರಿಯಾಪಟ್ಟಣ, ಗಣಪತಿ ಭಟ್ ಎಸ್.ಕೆ. ಬಂಟ್ವಾಳ, ಸುಧಾಕರ ಪೂಜಾರಿ ಕೇಪು, ಚಂದ್ರಶೇಖರ ಆಚಾರ್ಯ ಕೋಟೇಶ್ವರ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.ಸಂಚಾಲಕ ಪ್ರಶಾಂತ್ ಪೈ ಪ್ರಸ್ತಾವಿಕವಾಗಿ ಮಾತನಾಡಿದರು. ನಿತೇಶ್ ಶೆಟ್ಟಿ ಎಕ್ಕಾರ್ ನಿರೂಪಿಸಿದರು