Advertisement
ಪ್ರತಿ ಚುನಾವಣೆಯಲ್ಲೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ಬಿಜೆಪಿ ಈ ಚುನಾವಣೆಯಲ್ಲಿ ತನ್ನೆಲ್ಲ ಶಕ್ತಿಯನ್ನು ಒಟ್ಟಿಗೆ ಪ್ರಯೋಗಿಸುವ ಮೂಲಕ ಹೊಸದೊಂದು ಸಂಚಲನ ಸೃಷ್ಟಿಸಿದೆ. ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡುವಂತೆ ಬಿರುಸಿನಿಂದ ಪ್ರಚಾರದ ಅಖಾಡದಲ್ಲಿ ಮುನ್ನುಗ್ಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಪ್ರಯತ್ನ ಕಾಂಗ್ರೆಸ್-ಜೆಡಿಎಸ್ ಪಾಳಯದಲ್ಲಿ ಕಂಡುಬರುತ್ತಿಲ್ಲ.
Related Articles
Advertisement
ಜಿಲ್ಲೆಯ ಎಲ್ಲ ಶಾಸಕರು, ಮುಖಂಡರು, ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಚುನಾವಣೆಗೆ ರಂಗು ತುಂಬುವುದಕ್ಕೆ ವರಿಷ್ಠರು ಆಸಕ್ತಿ ವಹಿಸುತ್ತಿಲ್ಲ. ವರಿಷ್ಠರ ಅನುಪಸ್ಥಿತಿಯಲ್ಲಿ ಕ್ಷೇತ್ರಕ್ಕೆ ಬರುವುದಕ್ಕೆ ಶಾಸಕರು ಸಿದ್ಧರಿಲ್ಲ. ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಎಲ್ಲ ಶಾಸಕರನ್ನು ಭೇಟಿ ಮಾಡಿ ಪ್ರಚಾರಕ್ಕೆ ಕರೆತರುವ ಗೋಜಿಗೆ ಹೋಗದೆ ತಮ್ಮ ಕೆಲವೇ ಬೆಂಬಲಿಗರೊಂದಿಗೆ ಅಲ್ಲಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್ ಪಾಳಯದಲ್ಲಿ ನೀರಸ ವಾತಾವರಣ ಮುಂದುವರಿದಿದೆ.
ಇನ್ನು ಕಾಂಗ್ರೆಸ್ ಪರಿಸ್ಥಿತಿಯೂ ಜೆಡಿಎಸ್‌ಗಿಂತ ಭಿನ್ನವಾಗೇನೂ ಇಲ್ಲ. ಅಲ್ಲಿಯೂ ರಾಜ್ಯಮಟ್ಟದ ನಾಯಕರು ಬಂದು ಠಿಕಾಣಿ ಹೂಡಿಲ್ಲ. ಉಸ್ತುವಾರಿ ವಹಿಸಿಕೊಂಡಿ ರುವ ಕೆ.ಜೆ.ಜಾರ್ಜ್ ಕ್ಷೇತ್ರದಿಂದ ದೂರವೇ ಉಳಿದಿ ದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಜತೆ ಮಾಜಿ ಸಚಿವ ರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರ ಸ್ವಾಮಿ, ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಬಂದು ಹೋಗಿದ್ದಾರಷ್ಟೆ. ಒಲ್ಲದ ಮನಸ್ಸಿನಿಂದಲೇ ಚುನಾವಣಾ ರಣಾಂಗಣ ಪ್ರವೇಶಿಸಿರುವ ಕೆ.ಬಿ.ಚಂದ್ರ ಶೇಖರ್ ಚುನಾವಣಾ ಪ್ರಚಾರದ ಕಣದಲ್ಲಿದ್ದಾರೆ.
ಕಾಂಗ್ರೆಸ್-ಜೆಡಿಎಸ್‌ನಿಂದ ಮುಖಂಡರು- ಕಾರ್ಯಕರ್ತರು ಬಿಜೆಪಿ ಪಾಲಾಗುತ್ತಿದ್ದರೂ ಅದನ್ನು ತಡೆಯುವ ಸಣ್ಣ ಪ್ರಯತ್ನಕ್ಕೂ ಉಭಯ ಪಕ್ಷಗಳ ನಾಯಕರು ಮುಂದಾಗಿಲ್ಲ. ಕ್ಷೇತ್ರಕ್ಕೆ ಆಗಮಿಸಿ ಶಾಸಕರೆಲ್ಲರಿಗೂ ಜವಾಬ್ದಾರಿ ಹಂಚಿ ಕ್ಷೇತ್ರದಲ್ಲೇ ಬೀಡು ಬಿಡುವಂತೆ ಮಾಡುವ ಮುಖಂಡರು- ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ, ಧೈರ್ಯ ತುಂಬುವ ಪ್ರಯತ್ನಕ್ಕೆ ಜೆಡಿಎಸ್ ವರಿಷ್ಠರು ಮುಂದಾಗಿಲ್ಲ.
ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಬಿಜೆಪಿಗೆ ಪೈಪೋಟಿ ನೀಡಲಾಗದಷ್ಟು ಅಸಮರ್ಥ ರಾದರೇ ಎಂಬ ಅನುಮಾನಗಳೂ ಕ್ಷೇತ್ರದ ಜನರನ್ನು ಕಾಡಲಾರಂಭಿಸಿವೆ. ಉಭಯ ಪಕ್ಷಗಳಿಗೆ ಸಮರ್ಥ ಅಭ್ಯರ್ಥಿ ಸಿಗಲಿಲ್ಲವೇ ಅಥವಾ ಚುನಾವಣೆ ಬಗ್ಗೆ ಎರಡೂ ಪಕ್ಷಗಳ ರಾಜ್ಯ ನಾಯಕರು ನಿರಾಸಕ್ತಿ ವಹಿಸಿ ನಿರ್ಲಕ್ಷ್ಯ ಮಾಡಿದ್ದಾರೆಯೇ ಎಂಬ ಪ್ರಶ್ನೆಗಳೂ ಕಾರ್ಯಕರ್ತರಲ್ಲಿದೆ.
ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಸೋಲಿಗೆ ಹೆಣೆಯಲಾಗಿದ್ದ ಸೂತ್ರವನ್ನೇ ಇಲ್ಲಿಯೂ ರೂಪಿಸ ಲಾಗಿದೆಯೇ ಎಂಬ ಅನುಮಾನಗಳು ಮೇಲೆದ್ದಿವೆ. ಸಂಸದೆ ಸುಮಲತಾ ಕೂಡ ಬಿಜೆಪಿ ಬೆನ್ನಿಗೆ ನಿಂತಿದ್ದಾರೆಂಬ ಮಾತುಗಳು ಕೇಳಿ ಬಂದಿದ್ದು, ಬಿಜೆಪಿ ದಿನೇದಿನೆ ಕ್ಷೇತ್ರದಲ್ಲಿ ಬಲ ಹೆಚ್ಚಿಸಿಕೊಳ್ಳುತ್ತಿದೆ.
ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಕಾರ್ಯತಂತ್ರ ಕೆ.ಆರ್.ಪೇಟೆಯಲ್ಲಿ ಎರಡೂ ಪಕ್ಷಗಳಿಗೆ ಅನುಕೂಲಕರವಾಗಿರುವಂತೆ ಕಂಡು ಬಾರದ ಹಿನ್ನೆಲೆಯಲ್ಲಿ ಅವರಿಬ್ಬರೂ ಯಶವಂತಪುರ, ಗೋಕಾಕ್, ಹುಣಸೂರು, ಚಿಕ್ಕಬಳ್ಳಾಪುರಗಳಿಗೆ ಅದನ್ನು ಸೀಮಿತಗೊಳಿಸಿಕೊಳ್ಳುವರೇ ನೋಡಬೇಕು.
* ಮಂಡ್ಯ ಮಂಜುನಾಥ್