ಮಂಡ್ಯ: ಕೆ.ಆರ್.ಪೇಟೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಬೆಳ್ಳಂಬೆಳಿಗ್ಗೆ ಜೆಸಿಬಿ ಯಂತ್ರಗಳು ಘರ್ಜಿಸಿದವು. ಪುರಸಭೆಯ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ಬಿಗಿ ಭದ್ರತೆಯಲ್ಲಿ ತೆರವುಗೊಳಿಸಲಾಯಿತು.
ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರ್ ಎಂ.ಶಿವಮೂರ್ತಿ ಮತ್ತು ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು.
ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಸಹೋದರ ತಾಪಂ ಮಾಜಿ ಅಧ್ಯಕ್ಷ ಕೆ.ಬಿ.ಈಶ್ವರ ಪ್ರಸಾದ್ ಮತ್ತು ಸಹೋದರರು ಅಕ್ರಮವಾಗಿ ಪುರಸಭೆಯ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ್ದರು. ಕೆ.ಆರ್.ಪೇಟೆ ಪಟ್ಟಣದಲ್ಲಿ ಸರ್ಕಾರಿ ಭೂಮಿ ಹಾಗೂ ನಿವೇಶನಗಳನ್ನು ಅಕ್ರಮವಾಗಿ ವಶಪಡಿಸಿಕೊಂಡು ವಾಣಿಜ್ಯ ಸಮುಚ್ಛಯಗಳು ಹಾಗೂ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವುದಾಗಿ ಸಚಿವ ಡಾ.ನಾರಾಯಣಗೌಡ ಕಾನೂನು ಹೋರಾಟ ನಡೆಸಿದ್ದರು. ಮಂಡ್ಯ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಅವರ ಆದೇಶದ ಮೇರೆಗೆ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಏಕಕಾಲದಲ್ಲಿ 10 ಜೆಸಿಬಿಗಳು, 2 ಡಿಗ್ಗಿಂಗ್ ಯಂತ್ರಗಳನ್ನು ಬಳಸಿಕೊಂಡು ಕಟ್ಟಡಗಳನ್ನು ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ.
ಇದನ್ನೂ ಓದಿ:ಮೈಸೂರು ದಸರಾ 2020: ಚಾಮುಂಡಿ ಸನ್ನಿಧಿಯಲ್ಲಿ ಮೈಸೂರು ದಸರಾಗೆ ಚಾಲನೆ
ಮೂಕಪ್ರೇಕ್ಷಕರಂತೆ ಈಶ್ವರಪ್ರಸಾದ್ ಮತ್ತು ಸಹೋದರರು ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ವೀಕ್ಷಿಸಿದರು.
ನಾಗಮಂಗಲ ಡಿವೈಎಸ್ ಪಿ ನವೀನ್ ಕುಮಾರ್, ಪಾಂಡವಪುರ ಸಿಪಿಐ ಕೆ.ಪ್ರಭಾಕರ್, ನಾಗಮಂಗಲ ಸಿಪಿಐ ಕೆ.ರಾಜೇಂದ್ರ, ಸಿಪಿಐ ಕೆ.ಎನ್.ಸುಧಾಕರ್ ಮತ್ತು ಮಂಡ್ಯ ಮಹಿಳಾ ಠಾಣೆಯ ಸಿಪಿಐ ಆನಂದೇಗೌಡರ ನೇತೃತ್ವದಲ್ಲಿ ಭಾರೀ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.