ಬೆಂಗಳೂರು:ಕೆ.ಆರ್.ಸರ್ಕಲ್‌ನಲ್ಲಿ ಭಾನುವಾರ ನಡೆದ ಘಟನೆ ಹೃದಯ ವಿದ್ರಾವಕ ಕ್ಷಣಕ್ಕೆ ಸಾಕ್ಷಿ ಆಗಿದೆ. ದಾರಿಯಲ್ಲಿ ಹೋಗುತ್ತಿದ್ದ ಮಹಾ ತಾಯಿ ಒಂದು ಕ್ಷಣ ಯೋಚಿಸದೆ ತನ್ನ ಸೀರೆಯನ್ನು ಬಿಚ್ಚಿಕೊಟ್ಟು ಹಲವರ ಪ್ರಾಣ ಉಳಿಸಿದ್ದಾಳೆ.
ರಾಜಧಾನಿಯ ಅತ್ಯಂತ ಜನದಟ್ಟಣೆ ಪ್ರದೇಶಗಳಲ್ಲಿ ಕೆ.ಆರ್. ವೃತ್ತವು ಒಂದು. ಭಾನುವಾರ ಮಧಾಹ್ನ ಸುರಿದ ಮಳೆಗೆ ಈ ವೃತ್ತದ ಅಂಡರ್‌ಪಾಸ್‌ನಲ್ಲಿ ಐದಾರು ಅಡಿ ನೀರು ತುಂಬಿದ್ದು, ಏಕಾಏಕಿ ಬಂದ ಕಾರು ಸಿಕ್ಕಿಕೊಂಡಿತ್ತು. ಕಾರಿನಲ್ಲಿದ್ದ ಕುಟುಂಬದವರು ಸಹಾಯಕ್ಕಾಗಿ ಅರಚಾಡುತ್ತಿದ್ದರು. ಈ ವೇಳೆ ಲೋಕಾಯುಕ್ತ ಕಚೇರಿಯ ಬಳಿ ಇದ್ದ ಪಬ್ಲಿಕ್ ಟೀವಿ ವರದಿಗಾರ ನಾಗೇಶ್ ಎಂಬುವವರು ಅರಚಾಟ ಕೇಳಿ ಸ್ಥಳಕ್ಕೆ ಬಂದಿದ್ದಾರೆ.
ಅವರ ಜತೆಗಿದ್ದ ಅದೇ ವಾಹಿನಿಯ ಕ್ಯಾಬ್ ಚಾಲಕ ವಿಜಯ್ ಈಜು ಬರುತ್ತಿದ್ದ ಕಾರಣ ಯೋಚನೆ ಮಾಡದೇ ನೀರಿನೊಳಗೆ ಜಿಗಿದು ಅಲ್ಲಿದ್ದವರ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ, ಮಳೆ ನೀರಿನಲ್ಲಿ ಸಿಲುಕಿದ್ದವರನ್ನು ಎಳೆದು ತರಲು ಹಗ್ಗ ಅಥವಾ ಇತರೆ ಯಾವುದೇ ಸಲಕರಣೆಗಳು ಇಲ್ಲದೆ ಪರದಾಟ ನಡೆಸಿದ್ದಾರೆ. ಇತ್ತ ನಾಗೇಶ್ ಅವರು ರಸ್ತೆಯಲ್ಲಿ ಹೋಗುತ್ತಿದ್ದ ಜನರ ನೆರವು ಕೇಳುತ್ತಿದ್ದಾರೆ. ದೇವರಂತೆ ಬಂದ ಮಹಾತಾಯಿ ಬಂದು ಕಾರಿನಲ್ಲಿ ಸಿಲುಕಿ ಅರಚಾಡುತ್ತಿದ್ದವರನ್ನು ಕಂಡು ಮರುಗಿದ್ದಾರೆ.
ಅವರ ರಕ್ಷಣೆಗೆ ತಾನು ಉಟ್ಟಿದ್ದ ಸೀರೆಯನ್ನು ಏಕಾಏಕಿ ಬಿಚ್ಚಿ ಕೊಟ್ಟಿದ್ದಾರೆ. ಸೀರೆಕೊಟ್ಟ ಮಹಿಳೆಯ ನೆರವಿಗೆ ಬಂದ ಜನರು ನೀರಿನಲ್ಲಿ ಮುಳುಗುತ್ತಿದ್ದವರ ರಕ್ಷಣೆಗೆ ಸೀರೆ ಬಿಚ್ಚಿಕೊಟ್ಟ ಮಹಿಳೆಯನ್ನು ನೋಡಿ ಅಲ್ಲೆ ಇದ್ದ ಮಹಿಳೆಯೊಬ್ಬರು ತಮ್ಮ ದುಪ್ಪಟ್ಟಾವನ್ನು ಕೊಟ್ಟಿದ್ದಾರೆ. ಪಕ್ಕದಲ್ಲಿಯೇ ನಿಂತ ವ್ಯಕ್ತಿಯೊರ್ವ ತನ್ನ ಶರ್ಟ್ ಬಿಚ್ಚಿ ಕೊಟ್ಟು ಆಕೆಯನ್ನು ಆಟೋದಲ್ಲಿ ಕೂರಿಸಿ ಮನೆಗೆ ಕಳುಹಿಸಿದ್ದಾರೆ.
ಕಾರಲ್ಲಿದ್ದವರನ್ನು ರಕ್ಷಿಸಿದ ವಿಜಯ್: ಕ್ಯಾಬ್ ಚಾಲಕ ವಿಜಯ್ ಕಾರಿನೊಳಗೆ ಇದ್ದವರನ್ನು ಹೇಗೋ ಕಾರಿನ ಮೇಲೆ ಕೂರಿಸಿ ಜೀವವನ್ನು ಉಳಿಸಿದ್ದಾರೆ. ಇನ್ನೋರ್ವ ಯುವತಿ ಸೀಟಿನ ಮಧ್ಯ ಭಾಗಕ್ಕೆ ಸಿಕ್ಕಿ ಹಾಕಿಕೊಂಡಿದ್ದರಿಂದ ಆಕೆಯ ರಕ್ಷಣೆಗೆ ತುಂಬಾ ಹೊತ್ತು ಒದ್ದಾಡಿ ಕಷ್ಟ ಪಟ್ಟು ಆಕೆಯನ್ನು ಮೇಲೆತ್ತಿ ರಕ್ಷಣಾ ತಂಡಕ್ಕೆ ಒಪ್ಪಿಸಿದ್ದಾರೆ. ಮಾನವೀಯತೆಗೆ ಸಾಕ್ಷಿಯಾದ ಸೀರೆ ಅಂಡರ್‌ಪಾಸ್ ಬಳಿಯೇ ಉಂಟು ರಕ್ಷಣೆಗೆಂದು ಆ ಅಪರಿಚಿತ ಮಹಿಳೆ ಬಿಚ್ಚಿಕೊಟ್ಟ ಕೇಸರಿ ಬಣ್ಣದ ಸೀರೆ ಇಂದಿಗೂ ಅಂಡರ್‌ಪಾಸ್ ಬಳಿಯೇ ಇದೆ. ಮಧ್ಯರಸ್ತೆಯಲ್ಲಿ ಒಂದು ಕ್ಷಣವೂ ಯೋಚಿಸದೇ ಸೀರೆ ಬಿಚ್ಚಿಕೊಟ್ಟ ಮಹಿಳೆಯ ಮಾನವೀಯತೆಗೆ ಆ ಸೀರೆ ಸಾಕ್ಷಿಯಾದಂತಿದೆ.
ಪಬ್ಲಿಕ್ ಟಿವಿಯ ವರದಿಗಾರ ನಾಗೇಶ್ ಹಾಗೂ ಕ್ಯಾಬ್ ಚಾಲಕ ವಿಜಯ್ ಕಣ್ಣಲ್ಲಿ ಹಲವರ ಜೀವ ಉಳಿಸಿದ ಸಂಭ್ರಮಕ್ಕಿಂತ ಆ ಯುವತಿಯ ಪ್ರಾಣ ಉಳಿಸಿಕೊಳ್ಳಲು ಆಗಿಲಿಲ್ಲವಲ್ಲ ಅನ್ನೋ ನೋವು ಹೆಚ್ಚಿತ್ತು. ತನ್ನ ಜೀವ ಪಣಕ್ಕಿಟ್ಟು ಬೇರೆಯವರ ಜೀವನ ಉಳಿಸಲು ವಿಜಯ್ ಅವರ ಸಾಹಸ, ಸಾರ್ವಜನಿಕ ಸ್ಥಳದಲ್ಲಿ ಉಟ್ಟ ಸೀರೆಯನ್ನೇ ಬಿಚ್ಚಿಕೊಟ್ಟ ಮಹಾತಾಯಿಯ ಕಾರ್ಯ ನಮ್ಮ ನಡುವೆ ಮಾನವೀಯತೆ ಜೀವಂತವಿದೆ ಎಂಬುದಕ್ಕೆ ಸಾಕ್ಷಿ. ಇವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.