ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ದರ್ಜೆ ಸಹಾಯಕ ಹುದ್ದೆ ಲಿಖೀತ ಪರೀಕ್ಷೆ ವೇಳೆ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಬಂಧಿ ಸಲಾಗಿದ್ದು, ಬಂಧಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ಹುಕ್ಕೇರಿಯ ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿರುವ ಕಮತನೂರ ಗ್ರಾಮದ ಆದೇಶ ಈರಪ್ಪ ನಾಗನೂರಿ (26), ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಗ್ರಾಮದ ಮಡಿವಾಳಪ್ಪ ಬಾಳಪ್ಪ ತೋರನಗಟ್ಟಿ (36) ಹಾಗೂ ಹೊಸಕೋಟಿ ಗ್ರಾಮದ ಶಂಕರ ಕಲ್ಲಪ್ಪ ಉಣಕಲ್ (30) ಎನ್ನುವವರನ್ನು ಬಂ ಧಿಸಲಾಗಿದೆ.
ಬಂಧಿತರಿಂದ ಒಂದು ಕಾರು ಹಾಗೂ ಮೂರು ಬೈಕ್ ವಶಪಡಿಸಿಕೊಳ್ಳಲಾಗಿದೆ. ಮಡಿವಾಳಪ್ಪ ಮತ್ತು ಶಂಕರ ಪರೀಕ್ಷೆ ಬರೆದ ಅಭ್ಯರ್ಥಿಗಳ ಸಂಬಂಧಿಗಳಾಗಿದ್ದಾರೆ. ಅಭ್ಯರ್ಥಿಗಳು ಪರೀಕ್ಷೆ ಬರೆಯುವಾಗ ಪರೀಕ್ಷಾ ಕೇಂದ್ರಕ್ಕೆ ಮೊಬೈಲ್ ಪೂರೈಸಲು ಪ್ರಯತ್ನಿಸಿದ್ದರು. ಆದರೆ ಪರೀಕ್ಷಾ ಕೇಂದ್ರಕ್ಕೆ ಸಕಾಲಕ್ಕೆ ಪೂರೈಸಲು ಆಗಿರಲಿಲ್ಲ. ಅತಿಥಿ ಉಪನ್ಯಾಸಕ ಆದೇಶ ನಾಗನೂರಿ ಗದಗಿನಿಂದ ಬಂದ ಪ್ರಶ್ನೆ ಪತ್ರಿಕೆಯನ್ನು ಬಿಡಿಸಿ ತಾವೇ ಅರ್ಧದಷ್ಟು ಉತ್ತರ ಬರೆದಿದ್ದ ಎನ್ನಲಾಗಿದೆ.
ಇಬ್ಬರೂ ಮುಖ್ಯ ಆರೋಪಿಗಳಿಂದ ಎರಡು ಮೊಬೈಲ್‌ಗಳನ್ನು ಕಮತನೂರು ಗೇಟ್ ಬಳಿ ಸ್ವೀಕರಿಸಿದ್ದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ತನಿಖೆ ಚುರುಕುಗೊಳಿಸಿರುವ ಗೋಕಾಕ ಪೊಲೀಸರು ಈ ಮೊದಲು 9 ಮಂದಿಯನ್ನು ಬಂಧಿಸಿದ್ದು, ಈಗ ಬಂಧಿತರ ಸಂಖ್ಯೆ 12ಕ್ಕೆ ಏರಿಕೆ ಆಗಿದೆ.
ಸ್ಮಾರ್ಟ್ ವಾಚ್, ಬ್ಲೂಟೂತ್ ಡಿವೈಸ್, ಪ್ರಶ್ನೆಪತ್ರಿಕೆ, ಮೊಬೈಲ್ ವಶಪಡಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಿದಿದ್ದು, ಇನ್ನೂ ಕೆಲವರನ್ನು ಬಂಧಿಸುವ ಸಾಧ್ಯತೆ ಇದೆ.