Advertisement

ಪರಿಸ್ಥಿತಿ ನಿಭಾಯಿಸಲು ಕೆಪಿಟಿಸಿಎಲ್‌, ಕೆಪಿಸಿಎಲ್‌ ಸಜ್ಜು

10:01 AM Apr 05, 2020 | Sriram |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಕರೆ ಹಿನ್ನೆಲೆಯಲ್ಲಿ ಎ. 5ರಂದು ರಾತ್ರಿ 9ರಿಂದ 9 ನಿಮಿಷಗಳ ಕಾಲ ರಾಜ್ಯದ ಜನ ವಿದ್ಯುತ್‌ ದೀಪಗಳನ್ನು ಆರಿಸಿದರೆ ಆ ಹೊತ್ತಿನಲ್ಲಿ ದಿಢೀರ್‌ 700 ಮೆಗಾವ್ಯಾಟ್‌ ವಿದ್ಯುತ್‌ ಬಳಕೆ ಕಡಿಮೆಯಾಗಲಿದ್ದು, ಆ ಸಂದರ್ಭದಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಪರಿಸ್ಥಿತಿಯನ್ನು ನಿಭಾಯಿಸಲು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ (ಕೆಪಿಟಿಸಿಎಲ್‌) ಮತ್ತು ಕರ್ನಾಟಕ ವಿದ್ಯುತ್‌ ನಿಗಮ (ಕೆಪಿಸಿಎಲ್‌) ಸಜ್ಜಾಗಿವೆ.

Advertisement

ದಿಲ್ಲಿಯಲ್ಲಿನ ನ್ಯಾಶನಲ್‌ ಲೋಡ್‌ ಡಿಸ್‌ಪ್ಯಾಚ್‌ ಸೆಂಟರ್‌ (ಎನ್‌ಎಲ್‌ಡಿಸಿ) ವತಿಯಿಂದ ಶನಿವಾರ ವೀಡಿಯೋ ಸಂವಾದದ ಮೂಲಕ ಎಲ್ಲ ರಾಜ್ಯಗಳ ವಿದ್ಯುತ್‌ ಪ್ರಸರಣ ವಿಭಾಗದ ಅಧಿಕಾರಿಗಳೊಂದಿಗೆ ಸಂವಾದ ನಡೆಯಿತು. ವೀಡಿಯೋ ಸಂವಾದ ಬಳಿಕ ಮಾತನಾಡಿದ ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕಿ ಡಾ| ಎನ್‌. ಮಂಜುಳಾ ಅವರು ರಾಜ್ಯದಲ್ಲಿ ರವಿವಾರ ರಾತ್ರಿ 9 ಗಂಟೆಯಿಂದ 9 ನಿಮಿಷಗಳ ಕಾಲ ವಿದ್ಯುತ್‌ ದೀಪಗಳ ಬಳಕೆ ಸ್ಥಗಿತಗೊಂಡಾಗ ಸುಮಾರು 600ರಿಂದ 700 ಮೆ.ವ್ಯಾ. ವಿದ್ಯುತ್‌ ಬಳಕೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ವಿದ್ಯುತ್‌ ದೀಪಗಳನ್ನಷ್ಟೇ ಆರಿಸಿ ಇತರ ವಿದ್ಯುತ್‌ ಉಪಕರಣಗಳ ಬಳಕೆ ಮುಂದುವರಿಸಬಹುದಾಗಿದೆ. ಜತೆಗೆ ಬೀದಿದೀಪಗಳು ಇತರ ವಿದ್ಯುತ್‌ ಬಳಕೆ ಯಥಾಸ್ಥಿತಿಯಲ್ಲಿರುತ್ತದೆ. ಆ 9 ನಿಮಿಷದ ಅವಧಿಯಲ್ಲಿ ವಿದ್ಯುತ್‌ ಬಳಕೆ ಕಡಿಮೆಯಾಗುವ ಪರಿಸ್ಥಿತಿಯ ನಿರ್ವಹಣೆಗೆ ಪೂರಕ ರೂಪುರೇಷೆ ಸಿದ್ಧಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಲವಿದ್ಯುತ್‌ ಘಟಕದಿಂದ ನಿಯಂತ್ರಣ
ಉಷ್ಣ ಸ್ಥಾವರಗಳಲ್ಲಿ ವಿದ್ಯುತ್‌ ಉತ್ಪಾದನೆಯನ್ನು ದಿಢೀರ್‌ ಸ್ಥಗಿತಗೊಳಿಸುವುದು, ದಿಢೀರ್‌ ಕಾರ್ಯಾರಂಭ ಮಾಡುವುದೂ ಕಷ್ಟ. ಆದರೆ ಜಲವಿದ್ಯುತ್‌ ಘಟಕಗಳಿಂದ ವಿದ್ಯುತ್‌ ಉತ್ಪಾದನೆಯನ್ನು ದಿಢೀರ್‌ ಸ್ಥಗತಿಗೊಳಿಸಲು ಮತ್ತು ಕೇವಲ ಅರ್ಧ ನಿಮಿಷದಲ್ಲಿ ಮತ್ತೆ ಪೂರ್ಣ ಪ್ರಮಾಣದಲ್ಲಿ ಗರಿಷ್ಠ ವಿದ್ಯುತ್‌ ಉತ್ಪಾದನೆಗೆ ಅವಕಾಶವಿದೆ. ಹಾಗಾಗಿ ಜಲವಿದ್ಯುತ್‌ ಘಟಕದ ಮೂಲಕ ಆ 9 ನಿಮಿಷಗಳಲ್ಲಿ ವಿದ್ಯುತ್‌ ಬಳಕೆ ಸ್ಥಗಿತ ಪರಿಸ್ಥಿತಿ ನಿಯಂತ್ರಿಸಲಾಗುವುದು ಎಂದರು.

ಇನ್ನೊಂದೆಡೆ ಉಷ್ಣ ವಿದ್ಯುತ್‌ ಘಟಕಗಳನ್ನು ಸಾಧ್ಯವಾದಷ್ಟು ಕಡಿಮೆ ಉತ್ಪಾದನೆಗೆ ಸೀಮಿತಗೊಳಿಸಿಕೊಳ್ಳಲಾಗುತ್ತದೆ. ಜತೆಗೆ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಹಂಚಿಕೆಯಡಿ ಪೂರೈಕೆಯಾಗುವ ವಿದ್ಯುತ್‌ ಪ್ರಮಾಣವನ್ನು ಆ ಹೊತ್ತಿನಲ್ಲಿ ಸಾಧ್ಯವಾದಷ್ಟು ಕನಿಷ್ಠ ಮಟ್ಟಕ್ಕೆ ಸೀಮಿತಗೊಳಿಸಲಾಗುತ್ತದೆ. ಕೃಷಿ ಪಂಪ್‌ಸೆಟ್‌ ಸಹಿತ ಇತರ ಚಟುವಟಿಕೆಗಳಿಗೆ ವಿದ್ಯುತ್‌ ಪೂರೈಕೆ ಸಹಜ ಸ್ಥಿತಿಯಲ್ಲಿರಲಿದೆ. 9 ನಿಮಿಷಗಳ ಅವಧಿ ಪೂರ್ಣಗೊಳ್ಳುತ್ತಿದ್ದಂತೆ ಜಲವಿದ್ಯುತ್‌ ಉತ್ಪಾದನೆ ಆರಂಭವಾಗಲಿದ್ದು, ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತದೆ ಎಂದು ವಿವರಿಸಿದರು.

ರಾಜ್ಯಾದ್ಯಂತ 9 ನಿಮಿಷಗಳ ಕಾಲ ವಿದ್ಯುತ್‌ ದೀಪಗಳು ಬಂದ್‌ ಆಗುವ ಹಿನ್ನೆಲೆಯಲ್ಲಿ ವಿದ್ಯುತ್‌ ಪ್ರಸರಣ ಫೀಡರ್‌ಗಳಲ್ಲೂ ಒತ್ತಡ ಉಂಟಾಗದಂತೆ ನಿಯಂತ್ರಣದಲ್ಲಿಟ್ಟುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವಿದ್ಯುತ್‌ ಬಳಕೆ ಏರಿಳಿತವನ್ನು ಪರಿಸ್ಥಿತಿಗೆ ತಕ್ಕಂತೆ ನಿಭಾಯಿಸಲು ವ್ಯವಸ್ಥೆ ಮಾಡಿ ಕೊಳ್ಳುವಂತೆಯೂ ಸೂಚಿಸಲಾಗಿದೆ ಎಂದರು.

Advertisement

ರವಿವಾರ ರಾತ್ರಿ 9ಕ್ಕೆ 9 ನಿಮಿಷಗಳ ಕಾಲ ದೇಶದ ಜನ ವಿದ್ಯುತ್‌ ದೀಪಗಳನ್ನು ಆರಿಸಿದರೆ 13,000 ಮೆ.ವ್ಯಾ. ವಿದ್ಯುತ್‌ ಬಳಕೆ ಸ್ಥಗಿತವಾಗಲಿದೆ ಎಂಬುದಾಗಿ ಸಂವಾದದ ವೇಳೆ ತಿಳಿಸಲಾಯಿತು. ದಕ್ಷಿಣ ಭಾರತದಲ್ಲಿ 3,500 ಮೆ.ವ್ಯಾ. ವಿದ್ಯುತ್‌ ಬಳಕೆ ಕಡಿಮೆಯಾಗಲಿದ್ದು, ಕರ್ನಾಟಕದಲ್ಲಿ 600ರಿಂದ 700 ಮೆ.ವ್ಯಾ.ಗಳಷ್ಟು ಬಳಕೆ ಇಳಿಕೆಯಾಗುವ ಸಾಧ್ಯತೆ ಇದೆ.
-ಡಾ| ಎನ್‌.ಮಂಜುಳಾ,
ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕಿ

Advertisement

Udayavani is now on Telegram. Click here to join our channel and stay updated with the latest news.

Next