Advertisement

ಕೆಪಿಟಿ, ನಂತೂರು: ವಾಹನ ಮೇಲ್ಸೆತುವೆ; ಕಾಮಗಾರಿಗೆ ಶೀಘ್ರ ಚಾಲನೆ

03:10 PM Aug 24, 2022 | Team Udayavani |

ಮಹಾನಗರ: ಮಂಗಳೂರು ನಗರದಲ್ಲಿ ತೀವ್ರ ವಾಹನ ದಟ್ಟನೆ ಎದುರಿಸುತ್ತಿರುವ ಕೆಪಿಟಿ ಹಾಗೂ ನಂತೂರುಗಳಲ್ಲಿ ರಾಷ್ಟೀಯ ಹೆದ್ದಾರಿ 66 ರಲ್ಲಿ ವಾಹನ ಮೇಲ್ಸೇತುವೆ ( ವೆಹಿಕಲ್‌ ಒವರ್‌ಪಾಸ್‌-ವಿಒಪಿ) ನಿರ್ಮಾಣವಾಗಲಿದ್ದು ಶೀಘ್ರ ಯೋಜನೆ ಕಾರ್ಯಾನುಷ್ಠಾನಕ್ಕೆ ಬರಲಿದೆ.

Advertisement

ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಜರಗಿದ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡ ಅವರು ಕೆಪಿಟಿಯಲ್ಲಿ 25 ಕೋರೂ. ವೆಚ್ಚದಲ್ಲಿ ವಿಒಪಿ ನಿರ್ಮಾಣಗೊಳ್ಳಲಿದ್ದು ಈಗಾಗಲೇ ಟೆಂಡರ್‌ ಪ್ರಕ್ರಿಯೆ ನಡೆದಿದೆ. ಮಳೆ ನಿಂತ ಕೂಡಲೇ ಮುಂದಿನ ತಿಂಗಳು ಕಾಮಗಾರಿ ಪ್ರಾರಂಭವಾಗಲಿದೆ. ವಿಒಪಿ ರಾಷ್ಟ್ರೀಯ ಹೆದ್ದಾರಿ ಮೇಲು ಗಡೆಯಿಂದ ಸಾಗಲಿದ್ದು ಸಕೀìಟ್‌ ಹೌಸ್‌ನಿಂದ ವಿಮಾನ ನಿಲ್ದಾಣ ರಸ್ತೆಗೆ ನಿರ್ಮಾಣಗೊಳ್ಳಲಿದೆ ಎಂದರು.

ನಂತೂರಿನಲ್ಲೂ 22 ಕೋ.ರೂ. ವೆಚ್ಚದಲ್ಲಿ ವಿಒಪಿ ನಿರ್ಮಾಣ ಯೋಜನೆ ಸಿದ್ಧಗೊಂಡಿದ್ದು ಒಂದು ತಿಂಗಳೊಳಗೆ ಟೆಂಡರ್‌ ಪ್ರಕ್ರಿಯೆ ನಡೆಯುವ ನಿರೀಕ್ಷೆ ಇದೆ. ಟೆಂಡರ್‌ ಪ್ರಕ್ರಿಯೆ ಮುಗಿದ ಕೂಡಲೇ ಇಲ್ಲೂ ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದವರು ವಿವರಿಸಿದರು.

ಸ್ಮಾರ್ಟ್‌ ಸಿಟಿ ಯೋಜನೆಯಡಿ ನಿರ್ಮಾಣವಾಗಲಿರುವ ಸೆಂಟ್ರಲ್‌ ಮಾರುಕಟ್ಟೆ ಕಾಮಗಾರಿಗೆ ಮಳೆ ನಿಂತ ಬಳಿಕ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದು ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಹೇಳಿದರು.

ಹಂಪನಕಟ್ಟೆಯಲ್ಲಿ ಬಹು ಅಂತಸ್ತು ಕಾರು ಪಾರ್ಕಿಂಗ್‌ ಯೋಜನೆಯ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು ಇದಕ್ಕೆ ವೇಗ ನೀಡುವಂತೆ ಶಾಸಕ ವೇದವ್ಯಾಸ ಕಾಮತ್‌ ಹೇಳಿದರು.

Advertisement

ಮಂಗಳೂರು ತಾಲೂಕಿನ ತೆಂಕ ಎಡಪದವು ಬ್ರಿಂಡೇಲ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಒಣ ಮತ್ತು ಪ್ಲಾಸ್ಟಿಕ್‌ ತ್ಯಾಜ್ಯವನ್ನು ನಿರ್ವಹಿಸುವ ಎಂಆರ್‌ ಎಫ್‌ ಘಟಕ ನಿರ್ಮಾಣವನ್ನು ತ್ವರಿತ ಗೊಳಿಸಬೇಕು ಎಂದು ಶಾಸಕ ಡಾ| ಭರತ್‌ ಶೆಟ್ಟಿ ವೈ. ಅವರು ಹೇಳಿದರು.

ನಿರ್ಮಾಣ ಕಾಮಗಾರಿಯನ್ನು ಸೆ.15 ರೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಜಿ.ಪಂ.ಸಿಇಒ ಡಾ| ಕುಮಾರ್‌ ತಿಳಿಸಿದರು.

ಸ್ಮಾರ್ಟ್‌ಸಿಟಿಯಡಿ ಕೈಗೆತ್ತಿಕೊಂಡಿ ರುವ 58 ಯೋಜನೆಗಳಲ್ಲಿ 23 ಪೂರ್ಣಗೊಂಡಿದೆ. 35 ಕಾಮಗಾರಿಗಳು ಪ್ರಗತಿಯಲ್ಲಿವೆ. ಒಟ್ಟಾರೆಯಾಗಿ ಶೇ. 60ರಷ್ಟು ಕಾಮಗಾರಿಗಳು ಪೂರ್ಣವಾಗಿವೆ ಎಂದು ಅಧಿಕಾರಿಗಳು ವಿವರಿಸಿದರು. ಕಾಮಗಾರಿಗಳ ವಿವರ ಹಾಗೂ ಪಟ್ಟಿ ನೀಡಿದರೆ ಅದನ್ನು ಪರಿಶೀಲಿಸಿ ಶೇ.60ಕ್ಕಿಂತ ಜಾಸ್ತಿ ಕಾಮಗಾರಿಗಳು ಪೂರ್ಣಗೊಂಡಿದ್ದರೆ ಅವುಗಳನ್ನು ಪ್ರಧಾನ ಮಂತ್ರಿ ನಗರಕ್ಕೆ ಭೇಟಿ ನೀಡುವ ಸಂದರ್ಭ ಸಾಧ್ಯವಾದಲ್ಲಿ ಅವರಿಂದ ಉದ್ಘಾಟನೆ ಮಾಡಲು ಕೋರಿಕೊಳ್ಳಲಾಗುವುದು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

ಮೇಯರ್‌ ಪ್ರೇಮಾನಂದ ಶೆಟ್ಟಿ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತ ಮದನ್‌ ಮೋಹನ್‌, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ದಿಶಾ ಸಭೆಯ ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.

ಜಪ್ಪು ಮಹಾಕಾಳಿ ಪಡ್ಪು

ಮೇಲ್ಸೇತುವೆ ಸ್ಮಾರ್ಟ್‌ ಸಿಟಿ ಯೋಜನೆಯಡಿ ನಿರ್ಮಾಣವಾಗಲಿರುವ ಜಪ್ಪು ಮಹಾಕಾಳಿ ಪಸ್ಪ ಮೇಲ್ಸೇತುವೆ ಕಾಮಗಾರಿಯಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಶಾಸಕ ವೇದವ್ಯಾಸ ಕಾಮತ್‌ ಅವರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ನಳಿನ್‌ ಕುಮಾರ್‌ ಅವರು ಕಾಮಗಾರಿಯ ವಿನ್ಯಾಸ ಮಾಡುವಾಗ ಸಮರ್ಪಕವಾಗಿ ಮಾಡಬೇಕು. ಪಡೀಲ್‌ ಹಾಗೂ ಪಂಪ್‌ವೆಲ್‌ನಲ್ಲಿ ಪ್ರಸ್ತುತ ಮಳೆಗಾಲದಲ್ಲಿ ನೀರು ನಿಂತು ಆಗುತ್ತಿರುವ ಸಮಸ್ಯೆ ಇಲ್ಲಿ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಈ ಮೇಲ್ಸೇತುವೆಯಿಂದ ನೇತ್ರಾವತಿ ನದಿಗೆ ಸುಮಾರು 800 ಮೀಟರ್‌ನಲ್ಲಿ ಒಳಚರಂಡಿ ನಿರ್ಮಿಸುವ ಯೋಜನೆ ಇದೆ. ಇದರಿಂದ ಸೇತುವೆಯಿಂದ ಕೆಳಭಾಗದಲ್ಲಿ ನೀರು ನಿಲ್ಲುವುದನ್ನು ತಡೆಯಬಹುದು ಎಂದು ಸ್ಮಾರ್ಟ್‌ ಸಿಟಿ ಯೋಜನೆಯ ಅಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next