ರಾಜ್ಯದ ನಾಗರಿಕ ಸೇವೆಗಳಿಗೆ ನೇಮಕಾತಿಗಳನ್ನು ಮಾಡುವ ಸ್ವಾಯತ್ತ ಹೊಣೆ ಹೊತ್ತು ವಜ್ರ ಮಹೋತ್ಸವ ಆಚರಿಸಿಕೊಂಡಿರುವ ಸಂವಿಧಾನಾತ್ಮಕ ಸಂಸ್ಥೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಇತ್ತೀಚಿನ ದಶಕಗಳಲ್ಲಿ “ಋಣಾತ್ಮಕ’ ವಿಚಾರ ಮತ್ತು ಆರೋಪಗಳ ಕಾರಣಕ್ಕೆ ಚರ್ಚೆಗೆ ಗ್ರಾಸವಾಗುತ್ತಿರುವುದು ವಿಪರ್ಯಾಸ. ನೇಮಕಾತಿ ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳ ಸಾಲು-ಸಾಲು ಕಳಂಕಗಳನ್ನು ಕೆಪಿಎಸ್ಸಿ ಅಂಟಿಸಿಕೊಂಡು ಬಂದಿದೆ. 2019ನೇ ಸಾಲಿನ ಎಫ್ಡಿಎ ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಕಳಂಕಗಳ ಸರಮಾಲೆಗೆ ಹೊಸ ಸೇರ್ಪಡೆೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ನೇಮಕಾತಿಗೆ 2010ರಲ್ಲಿ ಪರೀಕ್ಷೆ ನಡೆಯುವ ವೇಳೆ ಸಹ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಇದಾದ ಬಳಿಕ ಆಗಾಗ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಲವು ಘಟನೆಗಳು ನಡೆದಿವೆ. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಬೆಳಕಿಗೆ ಬಂದಾಗ ಪೊಲೀಸರು ದೂರು ದಾಖಲಾಗಿ ಕೆಲವರನ್ನು ಬಂಧಿಸಿದ ಆರಂಭಿಕ ಪ್ರಕ್ರಿಯೆಗಳು ನಡೆದು ಅನಂತರ ತನಿಖೆ ಆಮೆ ನಡಿಗೆಯಲ್ಲಿ ಸಾಗಿದ ಅನೇಕ ಉದಾಹರಣೆಗಳಿವೆ. ತಪ್ಪಿತಸ್ಥರನ್ನು ಕಾನೂನು ರೀತಿ ಶಿಕ್ಷೆಗೊಳಪಡಿಸಿದ ನಿದರ್ಶನಗಳೂ ಕಡಿಮೆ.
ಇದು ಕೆಳ ಹಂತದ ಹುದ್ದೆಗಳ ನೇಮಕಾತಿ ವೃತ್ತಾಂತವಾದರೆ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಂತೂ ಕೆಪಿಎಸ್ಸಿಯಲ್ಲಿ ಭಾರೀ ಅಕ್ರಮ ನಡೆದ ಕರಾಳ ಇತಿಹಾಸವಿದೆ. 1998, 1999, 2004, 2011ರ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮಗಳು ನಡೆದು ಆಗಿನ ಅಧ್ಯಕ್ಷರು, ಸದಸ್ಯರು ಜೈಲು ಪಾಲಾಗಿದ್ದರು. 2014 ಮತ್ತು 2015ನೇ ಸಾಲಿನ ನೇಮಕಾತಿಯಲ್ಲಿ ಡಿಜಿಟಲ್ ಮೌಲ್ಯಮಾಪನದಲ್ಲಿ ಗೊಂದಲ ಉಂಟಾಗಿತ್ತು. ಈ ಎಲ್ಲ ಪ್ರಕರಣಗಳು ಈಗಲೂ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿವೆ. ಈ ಪ್ರಕರಣಗಳಲ್ಲಿ ಸರಕಾರದ ಮೊಂಡುತನ ಹಾಗೂ ಕೆಪಿಎಸ್ಸಿಯ ನಿರ್ಲಕ್ಷ್ಯಕ್ಕೆ ನ್ಯಾಯಾಲಯ ಸಾಕಷ್ಟು ಬಾರಿ ಚಾಟಿ ಬೀಸಿದೆ. ನ್ಯಾಯಾಂಗ ನಿಂದನೆಯ ಎಚ್ಚರಿಕೆ ಕೊಟ್ಟಿದೆ. ನೋವಿನ ವಿಚಾರವೆಂದರೆ “ಕೆಪಿಎಸ್ಸಿ ಇರುವುದೇ ಅಕ್ರಮ ಮಾಡಲಿಕ್ಕೆ, ಇದನ್ನು ಉಳಿಸುವುದಕ್ಕಿಂತ ಬರ್ಖಾಸ್ತು ಮಾಡುವುದು ಉತ್ತಮ’ ಎಂದು ಹೈಕೋರ್ಟ್ ತೀಕ್ಷ್ಣವಾಗಿ ಹೇಳಿತ್ತು ಅನ್ನುವುದು ಗಮನಾರ್ಹ.
ಕೆಪಿಎಸ್ಸಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಅಥವಾ ನೇಮಕಾತಿ ಅಕ್ರಮ ನಡೆದಾಗಲೆಲ್ಲ ಅಲ್ಲಿನ ಸಿಬಂದಿಯ ಕೈವಾಡವಿಲ್ಲದೇ ಅಕ್ರಮ ನಡೆಯಲು ಸಾಧ್ಯವಿಲ್ಲ ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತವೆ. ಕೆಪಿಎಸ್ಸಿಯಲ್ಲಿ ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರಲು ನೇಮಿಸಲಾಗಿದ್ದ ಪಿ.ಸಿ. ಹೂಟಾ ಸಮಿತಿಯು 2013ರಲ್ಲಿ ಅನೇಕ ಶಿಫಾರಸುಗಳನ್ನು ನೀಡಿದೆ. ಸಮಿತಿಯ 65ನೇ ಶಿಫಾರಸಿನ ಪ್ರಕಾರ ಕೆಪಿಎಸ್ಸಿಯಲ್ಲಿನ ಒಟ್ಟು ಸಿಬಂದಿಯ ಪೈಕಿ ಶೇ.50ರಷ್ಟು ಸಿಬಂದಿಯನ್ನು ಪ್ರತೀ ಎರಡು ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಬೇರೆ ಇಲಾಖೆಗಳಿಗೆ ವರ್ಗಾವಣೆಗೊಳಿಸಿ, ಬೇರೆ ಇಲಾಖೆಗಳ ಸಿಬಂದಿಯನ್ನು ಕೆಪಿಎಸ್ಸಿಗೆ ನಿಯೋಜಿಸಬೇಕು ಎಂದಿದೆ. ಆದರೆ ಈವರೆಗೆ ಇದಕ್ಕೆ ನಿಯಮಗಳನ್ನು ರೂಪಿಸಲಾಗಿಲ್ಲ.
ಇವೆಲ್ಲದ್ದಕ್ಕೂ ಕೇವಲ ಕೆಪಿಎಸ್ಸಿಯತ್ತ ಬಿಟ್ಟು ಮಾಡುವುದು ನ್ಯಾಯೋಚಿತವಲ್ಲ. ಕೆಪಿಎಸ್ಸಿಯಲ್ಲಿ ನಡೆಯುವ ಅಕ್ರಮ, ಗೊಂದಲಗಳಿಗೆ ಸರಕಾರಗಳು ಹೊಣೆ ಹೊರಬೇಕಾಗುತ್ತದೆ. ಸಂಸ್ಥೆಯನ್ನು ಕಳಂಕ ಮುಕ್ತಗೊಳಿಸಿ ದಕ್ಷತೆ, ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆ ಮರು ಸ್ಥಾಪಿಸುವ ತುರ್ತು ಅವಶ್ಯವಿದೆ.