Advertisement

KPSC Exam : ಬಾಲಕರ ಕೈಯಲ್ಲಿ ಮೆಟಲ್‌ ಡಿಟೆಕ್ಟರ್‌

12:05 AM Dec 18, 2023 | Team Udayavani |

ಮಂಗಳೂರು: ಕಟ್ಟುನಿಟ್ಟಿನ ತಪಾಸಣೆ, ಭದ್ರತೆಯೊಂದಿಗೆ ನಡೆಯಬೇಕಾದ ಕೆಪಿಎಸ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ.

Advertisement

ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಲೆಕ್ಕ ಸಹಾಯಕರ ಹುದ್ದೆಗಾಗಿ ಕೆಪಿಎಸ್‌ಸಿಯಿಂದ ರವಿವಾರ ಹಲವು ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಿಗದಿಯಾಗಿತ್ತು. ಮಂಗಳೂರಿನ ಬಲ್ಮಠದ ಸರಕಾರಿ ಕಾಲೇಜು ಕೂಡ ಪರೀಕ್ಷಾ ಕೇಂದ್ರವಾಗಿತ್ತು. ಆದರೆ ಇಲ್ಲಿ ತಪಾಸಣೆಗೆ ಬಾಲಕರನ್ನು ಬಳಸಿ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ದೂರುಗಳು ಕೇಳಿಬಂದಿವೆ.

ಏನೂ ತಿಳಿಯದವರ ಕೈಯಲ್ಲಿ ಮೆಟಲ್‌ ಡಿಟೆಕ್ಟರ್‌!
ಈ ಪರೀಕ್ಷಾ ಕೇಂದ್ರದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕರ ಕೈಯಲ್ಲಿ ಮೆಟಲ್‌ ಡಿಟೆಕ್ಟರ್‌ ನೀಡಿ ಅಭ್ಯರ್ಥಿಗಳ ತಪಾಸಣೆ ನಡೆಸಲಾಗಿದೆ. ಸರಿಯಾದ ಮಾಹಿತಿಯೇ ಇಲ್ಲದ ಸುಮಾರು 7ರಿಂದ 8 ಮಕ್ಕಳಿಂದ ತಪಾಸಣೆ ನಡೆಸುವ ಮೂಲಕ ಅಧಿಕಾರಿಗಳು ಕಾಟಾಚಾರಕ್ಕೆ ಎಂಬಂತೆ ಪರಿಶೀಲನೆ ಮಾಡಿಸಿದ್ದಾರೆ ಎಂದು ದೂರಲಾಗಿದೆ.

ಸೂಚನೆ ಕಟ್ಟುನಿಟ್ಟಾಗಿ ಪಾಲಿಸಿಲ್ಲ ?
ಪರೀಕ್ಷೆಗಳಲ್ಲಿ ನಕಲು, ಎಲೆಕ್ಟ್ರಾನಿಕ್‌ ಉಪಕರಣಗಳ ಬಳಕೆ ಮೊದಲಾದ ಅಕ್ರಮಗಳನ್ನು ತಡೆಯುವ ಉದ್ದೇಶ ದಿಂದ ಈ ಬಾರಿ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿಯೂ ಮೊಬೈಲ್‌ ಜಾಮರ್‌, ಮೆಟಲ್‌ ಡಿಟೆಕ್ಟರ್‌, ಬಯೋಮೆಟ್ರಿಕ್‌ ಫೇಸ್‌ ಡಿಟೆಕ್ಷನ್‌ ಹಾಗೂ ಬಾಡಿ ಕೆಮರಾ ಬಳಸಲು ಕೆಪಿಎಸ್‌ಸಿ ಸೂಚನೆ ನೀಡಿತ್ತು. ಆದರೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ.

ತಪಾಸಣೆ ಜವಾಬ್ದಾರಿ ಏಜೆನ್ಸಿಗೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು, “ಮಕ್ಕಳಿಂದ ತಪಾಸಣೆ ನಡೆದಿರುವ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಪರೀಕ್ಷಾ ಕೇಂದ್ರಗಳ ತಪಾಸಣೆಗೆ ಕೆಪಿಎಸ್‌ಸಿಯಿಂದಲೇ ಟೆಂಡರ್‌ ಮೂಲಕ ಏಜೆನ್ಸಿ ನೇಮಕವಾಗಿತ್ತು. ಈ ಬಗ್ಗೆ ಏಜೆನ್ಸಿಯವರಲ್ಲಿ ಮಾಹಿತಿ ಪಡೆದುಕೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next