ಕಲಬುರಗಿ: ನಿರ್ಮಾಣ ಕಾರ್ಯಕ್ಕೆ ಅಡಿಗಲ್ಲು ಹಾಕಿದ 11 ತಿಂಗಳೊಳಗೆ 700 ಕೋಟಿ ರೂ. ವೆಚ್ಚದ ಅಫಜಲಪುರ ತಾಲೂಕಿನ ಚಿನ್ಮಯಗಿರಿ ಕೆಪಿಆರ್ ಸಕ್ಕರೆ ಕಾರ್ಖಾನೆ ಪೂರ್ಣವಾಗಿದ್ದು, ದಾಖಲೆ ಎನ್ನುವಂತಾಗಿದೆ.
ಬಾಳೆಹೊನ್ನುರು ರಂಭಾಪುರಿ ಪೀಠದ ಜಗದ್ಗುರು ಡಾ| ವೀರ ಸೋಮೇಶ್ವರ ಮಹಾ ಸ್ವಾಮೀಜಿ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾಮಗಾರಿ ಆರಂಭಿಸಿದ 11 ತಿಂಗಳೊಳಗೆ ಕಾರ್ಖಾನೆ ಕಬ್ಬು ನುರಿಸುವ ಕಾರ್ಯ ಆರಂಭಿಸಿದ್ದು ದಾಖಲೆ ಎನ್ನುವಂತಿದೆ. ಕೆಪಿಆರ್ ಆಡಳಿತ ಮಂಡಳಿಯ ಸತತ ಪ್ರಯತ್ನ, ಧಾರ್ಮಿಕ ಮನೋಬಲದ ಹಿನ್ನೆಲೆಯಲ್ಲಿ ಕಾರ್ಖಾನೆ ಬಹು ಬೇಗ ತಲೆಎತ್ತಿದೆ ಎಂದರು.
ಬೆಳೆಗೆ ಯೋಗ್ಯ ಬೆಲೆ-ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಾಗ ನೆಮ್ಮದಿ ಬದುಕು ಸಾಗಿಸಲು ಸಾಧ್ಯ. ಹೀಗಾಗಿ ರೈತರಿಗೆ ಯೋಗ್ಯ ಬೆಲೆ ನೀಡಿ ಎಂದು ಕಾರ್ಖಾನೆ ಆಡಳಿತ ಮಂಡಳಿಗೆ ಸಲಹೆ ನೀಡಿದ ಜಗದ್ಗುರುಗಳು, ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ರೈತರ ಸಮಸ್ಯೆಗಳನ್ನು ಬಗೆಹರಿಸಲು ಆಗದಿರುವುದನ್ನು ನೋಡುತ್ತಿದ್ದೇವೆ. ಹಾಗೆ ಆಗಬಾರದು. ಮುಖ್ಯವಾಗಿ ಮಾಲೀಕರ ಕಾಳಜಿ, ರೈತರ ನಂಬಿಕೆ, ಕಾರ್ಮಿಕರ ಹಿತ ಕಾಪಾಡಿದಲ್ಲಿ ಕಾರ್ಖಾನೆ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ನುಡಿದರು.
ಶಾಸಕ ಎಂ.ವೈ. ಪಾಟೀಲ ಮಾತನಾಡಿ, ತಾವೇ 11 ತಿಂಗಳ ಹಿಂದೆ ಸಕ್ಕರೆ ಕಾರ್ಖಾನೆ ನಿರ್ಮಾಣ ಕಾರ್ಯಕ್ಕೆ ಅಡಿಗಲ್ಲು ಹಾಕಿದ್ದೆವು. ಈಗ ಪ್ರಾರಂಭೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಸುದೈವ ಎನ್ನಬಹುದು. ಕಾರ್ಖಾನೆಯವರು ರೈತರಿಗೆ 15 ದಿನದೊಳಗೆ ಹಣ ಪಾವತಿ ಜತೆಗೆ ಕಾರ್ಖಾನೆಯಲ್ಲಿ ಪರಿಸರ ಸ್ವತ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದರು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿದರು. ಚಿನ್ಮಯಗಿರಿ-ಮಹಾಂಪುರದ ಮಹಾಂತೇಶ್ವರ ಮಠದ ಹಿರಿಯ ಪೀಠಾಧಿಪತಿ ಶ್ರೀ ಸಿದ್ಧರಾಮ ಶಿವಾಚಾರ್ಯರು ಆಶೀರ್ವಚನ ನೀಡಿ, ಮಹಾಂತ ತಪೋಭೂಮಿಯಲ್ಲಿ ಸಕ್ಕರೆ ಕಾರ್ಖಾನೆ ಶುಭಾರಂಭ ಆಗುತ್ತಿರುವುದರಿಂದ ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಮಹಾಂತೇಶ್ವರ ಮಠದ ಕಿರಿಯ ಪೀಠಾಧಿಪತಿ ವೀರ ಮಹಾಂತ ಶಿವಾಚಾರ್ಯರು ಮಾತನಾಡಿ, ವರ್ಷದೊಳಗೆ ಕಾರ್ಖಾನೆ ಶುಭಾರಂಭ ಆಗಿರುವುದು ಆಡಳಿತ ಮಂಡಳಿ ಕಾರ್ಯವೈಖರಿ ನಿರೂಪಿಸುತ್ತದೆ. ಸಿಬ್ಬಂದಿ ವರ್ಗ ಸಹ ಉತ್ತಮ ಕಾರ್ಯದ ಮನೋಬಲ ಹೊಂದಿದೆ. ಮೂರು ದಶಕಗಳ ಹಿಂದೆಯೇ ಸಿದ್ಧರಾಮ ಶಿವಾಚಾರ್ಯರು ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಲಿದೆ ಎಂದಿದ್ದರು. ಅದೀಗ ಸಾಕಾರಗೊಂಡಿದೆ ಎಂದರು. ಮಹಾಂತಜ್ಯೋತಿ ವಿದ್ಯಾಪೀಠದ ಸಹ ಅಧ್ಯಕ್ಷ, ಸರ್.ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ| ಎಂ.ಎಸ್. ಜೋಗದ ಮಾತನಾಡಿ, ಸಕ್ಕರೆ ಕಾರ್ಖಾನೆ ತಲೆ ಎತ್ತಿರುವುದು ಮಹಾಂತನ ಲೀಲೆ ಎಂದು ಹೇಳಿದರು.
ಆಲಮೇಲ ಕೆಪಿಆರ್ ಸಕ್ಕರೆ ಕಾರ್ಖಾನೆ ನಿರ್ದೇಶಕ ಜೋಗೂರ ಮಾತನಾಡಿದರು. ಕೆಪಿಆರ್ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕೆ.ಪಿ. ರಾಮಸ್ವಾಮಿ, ಗಂಗಾಧರ ಹುಕ್ಕೇರಿ, ಲಕ್ಷ್ಮಣರಾವ್, ಚಿಂಚನಸೂರದ ಶ್ರೀ ಸಿದ್ಧಮಲ್ಲ ಶಿವಾಚಾರ್ಯರು, ಕೌಲಗಾ ಶ್ರೀಗಳು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತೀನ ವಿ. ಗುತ್ತೇದಾರ, ಮುಖಂಡರಾದ ಶಿವಶರಣಪ್ಪ ಹೀರಾಪುರ, ಗೋವಿಂದ ಭಟ್, ರಾಜು ಅವರಳ್ಳಿ ಮುಂತಾದವರಿದ್ದರು.