ಮಂಗಳೂರು: ಎರಡು ದಿನಗಳ ಮಂಗಳೂರು ಪ್ರವಾಸದಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಇಂದು ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಅವರ ಮನೆಗೆ ಭೇಟಿ ನೀಡಿದರು.
ಮಂಗಳೂರು ಫರ್‌ನಲ್ಲಿರುವ ಸುರತ್ಕಲ್ ಕ್ಷೇತ್ರದ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆ ಡಿ ಕೆ ಶಿವಕುಮಾರ್ ವಿಜಯಕುಮಾರ್ ಶೆಟ್ಟಿ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ರಾಜಕೀಯ ಚರ್ಚೆಗಳು ನಡೆದಿವೆ. ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿಯವರು ಮಾಜಿ ಶಾಸಕ ಜೆ ಆರ್ ಲೋಬೊ ಅವರು ಪಕ್ಷಕ್ಕೆ ಸಾಕಷ್ಟು ದುಡಿಯುತ್ತಿದ್ದ, ಅವರಿಗೆ ಪಕ್ಷದಲ್ಲಿ ಉತ್ತಮ ಅವಕಾಶ ನೀಡುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ವಿನಂತಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಅವರು ಎತ್ತಿನಹೊಳೆ ಯೋಜನೆ ವಿರುದ್ಧ ಹೋರಾಟ ಮಾಡಿ ಪಕ್ಷದಿಂದ ವಿಮುಖರಾಗಿದ್ದರು. ಮಾಜಿ ಸಚಿವ ರಮಾನಾಥ ರೈ ಅವರೊಂದಿಗೆ ಇರುವ ಮನಸ್ತಾಪವನ್ನು ಸರಿಪಡಿಸುವ ಭರವಸೆಯನ್ನು ಡಿ ಕೆ ಶಿವಕುಮಾರ್ ಇದೇ ವೇಳೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಯು ಟಿ ಖಾದರ್, ಅಭಯಚಂದ್ರ ಜೈನ್, ಕಾಂಗ್ರೆಸ್ ದ ಕ ಜಿಲ್ಲಾಧ್ಯಕ್ಷ ಹರೀಶ್‌ಕುಮಾರ್, ಮಾಜಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಶಾಸಕ ಜೆ ಆರ್ ಲೋಬೋ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಜೊತೆಗಿದ್ದರು.