Advertisement

ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಈಶ್ವರಪ್ಪರನ್ನು ಸಂಪುಟದಿಂದ ಕೈಬಿಡಿ; ಡಿ.ಕೆ.ಶಿವಕುಮಾರ್

05:44 PM Aug 06, 2020 | keerthan |

ಬಳ್ಳಾರಿ: ಸಮಾಜದಲ್ಲಿ ಶಾಂತಿ ಭಂಗವುಂಟಾಗುವ ರೀತಿಯಲ್ಲಿ ಹೇಳಿಕೆ ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪರನ್ನು ಸಿಎಂ ಯಡಿಯೂರಪ್ಪನವರು ಕೂಡಲೇ ಸಚಿವ ಸ್ಥಾನದಿಂದ ತೆಗೆಯಬೇಕು. ಪೊಲೀಸ್ ಇಲಾಖೆ ಸುಮೊಟೊ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನವರು, ಬುಧವಾರ ಶಿವಮೊಗ್ಗದ ಕಾರ್ಯಕ್ರಮವೊಂದರಲ್ಲಿ ಸಮಾಜದಲ್ಲಿ ಶಾಂತಿ ಭಂಗವುಂಟು ಮಾಡುವ ರೀತಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಅಯೋಧ್ಯೆ ಮತ್ತು ಮಥುರಾದಲ್ಲಿ ಮಸೀದಿ, ಮಂದಿರಗಳನ್ನು ತೆರವುಗೊಳಿಸಿದಂತೆ ರಾಜ್ಯದಲ್ಲೂ ಎಲ್ಲಾ ಮಸೀದಿ, ಮಂದಿರಗಳನ್ನು ತೆರವುಗೊಳಿಸಬೇಕು ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಸರ್ಕಾರದ ಒಂದು ಭಾಗವಾಗಿರುವ ಸಚಿವ ಈಶ್ವರಪ್ಪನವರು ಇಂಥಹ ಹೇಳಿಕೆ ನೀಡಬಾರದು. ಸಾಮಾನ್ಯ ಜನರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದರೆ, ಟ್ವೀಟ್ ಮಾಡಿದರೆ ರಾಜ್ಯ ಸರ್ಕಾರ ಕಠಿಣ ಕ್ರಮಕೈಗೊಳ್ಳಲಾಗುತ್ತದೆ. ಆದರೆ, ಸರ್ಕಾರದ ಭಾಗವಾಗಿರುವ ಸಚಿವ ಈಶ್ವರಪ್ಪನವರು ಪ್ರಚೋದನಾಕಾರಿ ಹೇಳಿಕೆ ನೀಡಿ 24 ಗಂಟೆಯಾದರೂ  ಸರ್ಕಾರದಿಂದ ಯಾವುದೇ ಕ್ರಮಕೈಗೊಂಡಿಲ್ಲ. ಇದು ಸರಿಯಲ್ಲ ಎಂದರು.

ಬಾಬರಿ ಮಸೀದಿಯನ್ನು ಹೊರತುಪಡಿಸಿ, ದೇಶದ ಯಾವುದೇ ಮಸೀದಿ, ಮಂದಿರಗಳ ಬಗ್ಗೆ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಅಂತಹದ್ದರಲ್ಲಿ ಸರ್ಕಾರದ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವ ಈಶ್ವರಪ್ಪನವರು ಈ ರೀತಿಯ ಪ್ರಚೋದನಾಕಾರಿ ಹೇಳಿಕೆಯನ್ನು ನೀಡಬಾರದು. ಸರ್ಕಾರದ ಎಲ್ಲ ಸಚಿವರನ್ನು ಒಗ್ಗೂಡಿಸಿಕೊಂಡು ಸರ್ಕಾರವನ್ನು ಮುನ್ನಡೆಸುವುದಾಗಿ ಪ್ರಮಾಣ ವಚನ ಸ್ವೀಕರಿಸಿರುವ ಸಿಎಂ ಯಡಿಯೂರಪ್ಪನವರು ಕೂಡಲೇ ಈಶ್ವರಪ್ಪನವರ ವಿರುದ್ಧ ಕ್ರಮಕೈಗೊಳ್ಳಬೇಕು. ಸಚಿವ ಸ್ಥಾನದಿಂದ ಕೈ ಬಿಡಬೇಕು. ಪೊಲೀಸ್ ಇಲಾಖೆಯ ಡಿಜಿಪಿಯವರೇ ಸುಮೊಟೊ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಶಾಸಕರಾದ ಭೀಮಾನಾಯ್ಕ್, ಜೆ.ಎನ್.ಗಣೇಶ್, ಅಲ್ಲಂ ವೀರಭದ್ರಪ್ಪ, ಜಿಪಂ ಸದಸ್ಯ ಎ.ಮಾನಯ್ಯ, ಜಿಲ್ಲಾಧ್ಯಕ್ಷರಾದ ಮಹ್ಮದ್ ರಫೀಕ್, ಬಿ.ಶಿವಯೋಗಿ, ಮುಖಂಡರಾದ ರಾಮ್‌ಪ್ರಸಾದ್, ಪಾಲಿಕೆ ಸದಸ್ಯ ಬೆಣಕಲ್ಲು ಬಸವರಾಜ್, ಜಯಕುಮಾರ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next