ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ರಾಜಕೀಯ ಆರಂಭದ ದಿನಗಳಿಂದಲೂ ಕೇಂದ್ರದ ನಾಯಕರೊಂದಿಗೆ ನೇರ ಸಂಪರ್ಕ ಹೊಂದಿದ ರಾಜಕಾರಣಿ ಜಾಫರ್ ಷರೀಫ್. ಆರು ದಶಕಗಳ ಕಾಲ ರಾಜ್ಯ ಕಾಂಗ್ರೆಸ್ ಹಾಗೂ ಹೈ ಕಮಾಂಡ್ ನಾಯಕರ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಮೂಲತಃ ಚಿತ್ರದುರ್ಗ ಜಿಲ್ಲೆಯವರೇ ಆಗಿದ್ದ ಎಸ್.ನಿಜಲಿಂಗಪ್ಪ ಅವರು ಎಐಸಿಸಿ ಅಧ್ಯಕ್ಷರಾಗಿದ್ದರಿಂದ ಅವರ ಮೂಲಕ ನೇರವಾಗಿ ರಾಷ್ಟ್ರೀಯ ನಾಯಕರ ಜೊತೆ ಗುರುತಿಸಿಕೊಳ್ಳುವಲ್ಲಿ ಜಾಫರ್ ಷರೀಫ್ ಯಶಸ್ವಿಯಾಗಿದ್ದರು. ಕಾಂಗ್ರೆಸ್ ಇಬ್ಭಾಗವಾದಾಗ ಇಂದಿರಾ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದರಿಂದ ನೆಹರು ಮನೆತನಕ್ಕೂ ಬಹುಬೇಗ ಹತ್ತಿರದವರಾದರು.
ಇದು ರಾಜ್ಯ ಕಾಂಗ್ರೆಸ್‌ನಲ್ಲಿ ಹೈ ಕಮಾಂಡ್ ಜೊತೆಗೆ ನೇರ ಸಂಪರ್ಕ ಹೊಂದುವ ಕೊಂಡಿಯಾಗಿ ಕೆಲಸ ಮಾಡಲು ಅವರಿಗೆ ಹೆಚ್ಚು ಅನುಕೂಲವಾಯಿತು. ಜಾಫರ್ ಷರೀಫ್ ಕೂಡ ಇದನ್ನು ಅಷ್ಟೇ ಜಾಣ ನಡೆಯಿಂದ ಉಳಿಸಿಕೊಂಡಿದ್ದರು. ದೇವರಾಜ ಅರಸು ಅವರಿಂದ ಹಿಡಿದು ಸಿದ್ದರಾಮಯ್ಯನವರವರೆಗೂ ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಯಾರೇ ಮುಖ್ಯಮಂತ್ರಿಯಾದರೂ, ಅವರಿಗೆ ನೇರವಾಗಿ ಸಲಹೆ ಸೂಚನೆ ನೀಡುವ ಶಕ್ತಿಯನ್ನು ಜಾಫರ್ ಷರಿಫ್ ಬೆಳೆಸಿಕೊಂಡಿದ್ದರು.
ಬಂಡಾಯದ ನಾಯಕ: ಜಾಫರ್ ಷರೀಫ್ ನೇರ ನುಡಿಯಿಂದಲೇ ಹೆಸರು ವಾಸಿಯಾದವರು. ರಾಜ್ಯದಲ್ಲಿ ಕಾಂಗ್ರೆಸ್‌ನ ಯಾರೇ ಮುಖ್ಯಮಂತ್ರಿಯಾದರೂ, ಅವರ ಕಾರ್ಯ ವೈಖರಿಯ ಬಗ್ಗೆ ನೇರವಾಗಿಯೇ ಆರೋಪ ಮಾಡುವ ಛಾತಿಯುಳ್ಳವರಾಗಿದ್ದರು. ವೀರೇಂದ್ರ ಪಾಟೀಲ್, ಎಸ್.ಬಂಗಾರಪ್ಪ, ವೀರಪ್ಪ ಮೊಯಿಲಿ, ಎಸ್.ಎಂ. ಕೃಷ್ಣ ಹಾಗೂ ಸಿದ್ದರಾಮಯ್ಯ ಸೇರಿದಂತೆ ಯಾರೇ ಅಧಿಕಾರದಲ್ಲಿದ್ದರೂ, ಅವರ ಆಡಳಿತದಲ್ಲಿ ವ್ಯತ್ಯಾಸಗಳು ಕಂಡು ಬಂದಾಗ ಬಹಿರಂಗವಾಗಿಯೇ ಟೀಕೆ ಮಾಡುವ ವ್ಯಕ್ತಿತ್ವ ಬೆಳೆಸಿಕೊಂಡಿದ್ದರು.
ಜಾಫರ್ ಷರೀಫ್ ಅವರು ನಮ್ಮನ್ನು ಅಗಲಿದ ಸುದ್ದಿ ಕೇಳಿ ಆಘಾತವಾಗಿದೆ. ಭಾರತೀಯ ರೈಲ್ವೆಗೆ ಆಧುನಿಕ ಸ್ಪರ್ಶ ನೀಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, ಕರ್ನಾಟಕಕ್ಕೆ ಅನೇಕ ಹೊಸ ರೈಲು ಯೋಜನೆಗಳನ್ನು ತಂದಿದ್ದರು.
-ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ
ರಾಷ್ಟ್ರದ ಅತ್ಯಂತ ಹಿರಿಯ ಕಾಂಗ್ರೆಸ್ ನಾಯಕ ಸಿ.ಕೆ. ಜಾಫರ್ ಷರೀಫ್ ಕನ್ನಡಾಂಬೆಯ ಮಗನಾಗಿದ್ದರು. ರಾಷ್ಟ್ರ ಕಂಡ ಅತ್ಯಂತ ಯಶಸ್ವಿ ರೈಲ್ವೆ ಸಚಿವರಾಗಿ ರಾಜ್ಯ ಹಾಗೂ ರಾಷ್ಟ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಜಾತ್ಯಾತೀತ ನಾಯಕರಾಗಿದ್ದರು.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ಅಂಬರೀಶ್ ನಿಧನರಾದ ದುಃಖದಿಂದ ಹೊರ ಬರುವ ಮೊದಲೇ, ಜಾಫರ್ ಷರೀಫ್ ನಿಧನದ ಸುದ್ದಿ ಅತೀವ ದುಃಖ ಉಂಟು ಮಾಡಿದೆ. ಅವರ ಅಗಲಿಕೆ ರಾಜ್ಯಕ್ಕೆ, ಕಾಂಗ್ರೆಸ್‌ಗೆ ತುಂಬಲಾರದ ನಷ್ಟ. ಎಲ್ಲ ಸಮುದಾಯದವರ ಜತೆ ಬಾಂಧವ್ಯ ಹೊಂದಿದ್ದ ಜಾತ್ಯಾತೀತ ನಾಯಕರಾಗಿದ್ದರು.
-ಈಶ್ವರ್ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ