ಚಾಮರಾಜನಗರ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕೋವಿಡ್-19ರ ಸಮಸ್ಯೆಗಳ ನಿಗಾವಣೆಗೆ ರಚಿಸಲಾದ ಸಮಿತಿಯ ವರದಿ ಯಲ್ಲಿ ಆಕ್ಸಿಜನ್ ಕೊರತೆಯಿಂದ 36 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿದೆ. ಹೀಗಾಗಿ, ಮೂರೇ ಮಂದಿ ಮೃತಪಟ್ಟಿರುವುದು ಎಂದು ಸಮರ್ಥಿಸಿಕೊಂಡ ಆರೋಗ್ಯ ಸಚಿವ ಡಾ. ಸುಧಾಕರ್ ಅವರನ್ನು ಸಂಪುಟದಿಂದ ವಜಾ ಮಾಡಬೇಕು. ಅಲ್ಲದೇ ಈ ಘಟನೆಗೆ ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಒತ್ತಾಯಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದ ಜವಾಬ್ದಾರಿಯುತ ಸಚಿವರಾಗಿರುವ ಸುಧಾಕರ್ ಅವರು ಘಟನೆ ನಡೆದ ಮಾರನೆಯ ದಿನ ಚಾ.ನಗರಕ್ಕೆ ಬಂದು ಸುಳ್ಳು ಹೇಳಿದ್ದಾರೆ. ಮುಖ್ಯಮಂತ್ರಿ ಈ ಪ್ರಕರಣದ ತನಿಖೆಗೆ ಆದೇಶೀಸಿದ್ದಾರೆ. ತನಿಖೆಯ ನಂತರ ನಿಖರವಾಗಿ ತಿಳಿದು ಹೇಳುತ್ತೇನೆ ಎನ್ನಬಹುದಿತ್ತು. ಅಥವಾ ವೈದ್ಯರಿಂದ ಮಾಹಿತಿಯನ್ನು ಪಡೆದು ಇಷ್ಟು ಜನ ಮರಣ ಹೊಂದಿದ್ದಾರೆ ಎಂದು ತಿಳಿಸಬಹುದಿತ್ತು. ಆದರೆ ಅವರು ಸುಳ್ಳು ಹೇಳಿದ್ದಾರೆ ಎಂದರು. ಅಲ್ಲದೇ 304 ಸೆಕ್ಷನ್ ಅನ್ವಯಿಸಿ, ಈ ಸಾವಿಗೆ ಯಾರು ಯಾರು ಕಾರಣರಾಗಿದ್ದಾರೆ. ಆರೋಗ್ಯ ಸಚಿವರಿಂದ ಅಧಿಕಾರಿಗಳವರೆಗೆ ಅವರ ವಿರುದ್ಧ ಕೇಸ್ ದಾಖಲು ಮಾಡಬೇಕು. ಕಠಿಣ ಕ್ರಮ ಕೈಗೊಳ್ಳಬೇಕು. ಘಟನೆಯಲ್ಲಿ ಮೃತರಾದವರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ನ್ಯಾಯಮೂರ್ತಿ ಎನ್. ವೇಣುಗೋಪಾಲ ಗೌಡ ಅವರ ಅಧ್ಯಕ್ಷತೆಯ ಸಮಿತಿಯ ವರದಿಯಲ್ಲಿ ಮೇ 2 ರಿಂದ ಮೇ 3ರವರೆಗೆ ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದ ಘಟನೆಗಳನ್ನು ಸವಿ ವರವಾಗಿ ತಿಳಿಸಲಾಗಿದೆ. 31 ಪುಟಗಳ ವರದಿಯನ್ನೂ ಸಲ್ಲಿಸಲಾಗಿದೆ. ಈ ವರದಿಯಲ್ಲಿ ಆಮ್ಲಜನಕ ಕೊರತೆಯಿಂದ 36 ಮಂದಿ ಮೃತಪಟ್ಟಿದ್ದಾರೆ ಎಂದು ಉಲ್ಲೇಖೀಸ ಲಾಗಿದೆ ಎಂದರು.
ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಈ ಘಟನೆಗೆ ರಾಜ್ಯ ಸರ್ಕಾರವೇ ನೇರ ಹೊಣೆ. ಅಂದು ಬೆಳಗ್ಗೆ 9 ಗಂಟೆಗೇ ಜಿಲ್ಲಾಧಿಕಾರಿಗೆ ಆಕ್ಸಿಜನ್ ಕೊರತೆ ಇದೆ ಎಂಬುದು ತಿಳಿದಿತ್ತು. ಆದರೂ ಕ್ರಮ ಕೈಗೊಂಡಿಲ್ಲ. ಸಚಿವ ಡಾ. ಸುಧಾಕರ್‌ಗೆ ಮಾನವೀಯ ಕಳಕಳಿ ಇರಲಿಲ್ಲ. ಮೂರೇ ಜನ ಸತ್ತಿರೋದು ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಸುಧಾಕರ್ ಅವರನ್ನು ಸಂಪುಟದಿಂದ ತಕ್ಷಣ ವಜಾ ಮಾಡಬೇಕು. ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಶಾಸಕ ಆರ್. ನರೇಂದ್ರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.