ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಎಫ್ಆರ್‌ಡಿಐ ವಿಧೇಯಕವನ್ನು ಹಿಂಪಡೆಯಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಷ್ಟ ಅನುಭವಿಸುತ್ತಿರುವ ಬ್ಯಾಂಕ್‌ಗಳ ರಕ್ಷಣೆಗಾಗಿ ಕೇಂದ್ರ ಸರ್ಕಾರ ಎಫ್ಆರ್‌ಡಿಐ ಕಾನೂನು ಜಾರಿಗೆ ಮುಂದಾಗಿದೆ. ಈ ಕಾನೂನು ಜಾರಿಯಾದರೆ, ಬ್ಯಾಂಕ್‌ನಲ್ಲಿ ಸಾರ್ವಜನಿಕರು ಇಟ್ಟಿರುವ ಠೇವಣಿ ಹಣಕ್ಕೆ ಯಾವುದೇ ರಕ್ಷಣೆ ಇರುವುದಿಲ್ಲ. ಎಫ್ಆರ್‌ಡಿಐ ಕಾಯ್ದೆ ಪ್ರಕಾರ ಬ್ಯಾಂಕ್‌ಗಳು ನಷ್ಟ ಅನುಭವಿಸುತ್ತಿವೆ ಎಂದು ಗೊತ್ತಾದರೆ, ಆ ಬ್ಯಾಂಕ್‌ನಲ್ಲಿ ಸಾರ್ವಜನಿಕರು ಠೇವಣಿ ಇಟ್ಟ ಹಣವನ್ನು ಹೇಗೆ ಬೇಕಾದರೂ ಬಳಸಿಕೊಳ್ಳಲು ಹೊಸ ಕಾಯ್ದೆ ಅನುಕೂಲ ಮಾಡಿಕೊಡಲಿದೆ ಎಂದು ಹೇಳಿದರು.
ಸಾರ್ವಜನಿಕರು ತಮ್ಮ ಹಣ ಸುರಕ್ಷಿತವಾಗಿರಲೆಂದು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿರುತ್ತಾರೆ. ಕೇಂದ್ರದ ಹೊಸ ಕಾಯ್ದೆ ಬಂದ ನಂತರ ಸಾರ್ವಜನಿಕರ ಠೇವಣಿಗೆ ಯಾವುದೇ ರಕ್ಷಣೆ ಇರುವುದಿಲ್ಲ. ಇದು ಅತ್ಯಂತ ಗಂಡಾಂತರಕಾರಿ ವಿಧೇಯಕ. ದೇಶದಲ್ಲಿ ಅನೇಕ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ತೀರಿಸಲಾಗದ ಎನ್‌ಪಿಎ ಸುಮಾರು 10 ಲಕ್ಷ ಕೋಟಿ ಇದೆ. 2015 ರ ವರೆಗೆ 2 ಲಕ್ಷ ಕೋಟಿ ಇದ್ದ ಎನ್‌ಪಿಎ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎರಡೇ ವರ್ಷದಲ್ಲಿ 10 ಲಕ್ಷ ಕೋಟಿಗೆ ಏರಿದೆ. ಈ ಹಣದಲ್ಲಿ ಶೇಕಡಾ 50 ರಷ್ಟು ಹಣವನ್ನು ಕೇವಲ ಹತ್ತು ಜನ ಉದ್ಯಮಿಗಳು ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಪ್ರಧಾನಿ ಮೋದಿಯವರ ದುರ್ಬಲ ಆರ್ಥಿಕ ನೀತಿಯಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ನೋಟ್ ಬ್ಯಾನ್ ಹಾಗೂ ಅವೈಜ್ಞಾನಿಕ ಜಿಎಸ್‌ಟಿ ಜಾರಿಯಿಂದ ಉತ್ಪಾದನಾ ವಲಯ, ಸಣ್ಣ ಕೈಗಾರಿಕೆಗಳು ಮುಚ್ಚಿವೆ. ತೆಗೆದುಕೊಂಡ ಸಾಲ ತೀರಿಸಲಾಗದೆ ಬ್ಯಾಂಕ್‌ಗಳು ಕಷ್ಟ ಎದುರಿಸುತ್ತಿವೆ. ಈ ಕಷ್ಟದ ಪರಿಸ್ಥಿತಿಯಿಂದ ಹೊರ ಬರಲು ಪ್ರಧಾನಿ ಹೆಣಗಾಡುತ್ತಿದ್ದಾರೆ ಎಂದರು.
ಬ್ಯಾಂಕ್‌ಗಳ ಹಣ ಬಳಕೆ ಮಾಡಿಕೊಳ್ಳುವ ಕುರಿತಂತೆ ಪ್ರತ್ಯೇಕ ನಿಗಮ ಸ್ಥಾಪಿಸಲು ಮುಂದಾಗಿದ್ದಾರೆ ಸಾರ್ವಜನಿಕರ ಹಣವನ್ನು ಹೇಗೆ ಬೇಕಾದರೂ ಬಳಸಿಕೊಳ್ಳಲು ಆ ನಿಗಮ ತೀರ್ಮಾನ ಕೈಗೊಳ್ಳಲಿದೆ. ಈಗಾಗಲೇ ಕಾಂಗ್ರೆಸ್ ಈ ವಿಧೇಯಕವನ್ನು ವಿರೋಧಿಸಿದೆ. ವಿಧೇಯಕದ ಸಾಧಕ ಬಾಧಕ ಕುರಿತು ತೀರ್ಮಾನಿಸಲು ಸಂಸತ್ತಿನ ಜಂಟಿ ಸದನ ಸಮಿತಿ ರಚನೆಯಾಗಿದ್ದು, ಸಮಿತಿ ಈ ವಿಧೇಯಕವನ್ನು ವಿರೋಧಿಸಬೇಕು ಎಂದು ಆಗ್ರಹಿಸಿದರು.