Advertisement
ಕರ್ನಾಟಕ ಸಾರ್ವಜನಿಕ ಪರೀಕ್ಷೆಯಲ್ಲಿನ (ನೇಮಕ) ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ನಿಯಂತ್ರಣ ವಿಧೇಯಕ, ರೇಣುಕಾ ಯಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಪೌರಾಡಳಿತ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ. ಈ ಸಂಬಂಧ ಕಳೆದ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಸೂಕ್ತ ಸ್ಪಷ್ಟೀಕರಣದೊಂದಿಗೆ ವಿಧೇಯಕಗಳನ್ನು ರಾಜ್ಯಪಾಲರಿಗೆ ವಾಪಸ್ ಕಳುಹಿಸಲಾಗಿತ್ತು.
ಈ 3 ವಿಧೇಯಕಗಳಿಗೆ ಒಪ್ಪಿಗೆ ಸೂಚಿಸಿರುವ ರಾಜ್ಯಪಾಲರು ಕರ್ನಾಟಕ ಕಂದಾಯ ಕಾಯಿದೆ ತಿದ್ದುಪಡಿ ವಿಧೇಯಕಕ್ಕೆ ಸಂಬಂಧಪಟ್ಟಂತೆ ಕೆಲ ಪ್ರಶ್ನೆಗಳನ್ನು ಎತ್ತಿ ಕಡತ ವಾಪಸ್ ಕಳುಹಿಸಿದ್ದಾರೆ. ಇದು ಸಚಿವ ಕೃಷ್ಣಬೈರೇಗೌಡ ಅವರ ಆಕ್ರೋಶಕ್ಕೆ ಕಾರಣವಾಗಿದ್ದು,’ ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ತಂದ ವಿಧೇಯಕವನ್ನು ಬಿಜೆಪಿ ರಾಜ್ಯಪಾಲರು ವಾಪಾಸ್ ಕಳುಹಿಸಿದ್ದಾರೆ’ ಎಂದು ಟೀಕಿಸಿದ್ದಾರೆ. ಯಾವಾಗ ಮಂಡನೆ?:
ಕರ್ನಾಟಕ ಸಾರ್ವಜನಿಕ ಪರೀಕ್ಷೆ ವಿಧೇಯಕ 2023ರ ಡಿಸೆಂಬರ್ 6ರಂದು ವಿಧಾನಸಭೆಯಲ್ಲಿ ಮಂಡನೆಯಾಗಿ, ಡಿ.13ರಂದು ಅಂಗೀಕಾರಗೊಂಡಿತ್ತು. ಬಳಿಕ ಡಿ.14ರಂದು ವಿಧಾನ ಪರಿಷತ್‌ನಲ್ಲೂ ಅಂಗೀಕಾರವಾಗಿ ರಾಜ್ಯಪಾಲರ ಸಹಿಗೆ ಕಳಿಸಿಕೊಡಲಾಗಿತ್ತು.
Related Articles
Advertisement
ರಾಜ್ಯ ಸರ್ಕಾರ ನಡೆಸುವ ಸಾರ್ವಜನಿಕ ಪರೀಕ್ಷೆಗಳಲ್ಲಿ ಅನುಚಿತ, ಭ್ರಷ್ಟ ವರ್ತನೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ತಡೆಗಟ್ಟಲು ಕಟ್ಟುನಿಟ್ಟಿನ, ಪರಿಣಾಮಕಾರಿ ಕ್ರಮಕೈಗೊಳ್ಳಲು ಈ ವಿಧೇಯಕ ಅಸ್ತ್ರವಾಗಿ ಬಳಕೆಯಾಗುವುದರಿಂದ ಇದು ಮಹತ್ವವಾಗಿದ್ದು, ಪೂರ್ವ ತಯಾರಿ ನಡೆದಿಲ್ಲ ಎಂಬುದು ರಾಜಭವನದ ಆಕ್ಷೇಪವಾಗಿತ್ತು.
ಅದೇ ರೀತಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬಹುಮಹಡಿ ಕಟ್ಟಡದಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿ ಮಹಡಿ ಕಟ್ಟಿಕೊಳ್ಳಲು ಅನುಮತಿ ನೀಡುವ ಮೂಲಕ ಬೊಕ್ಕಸ ಭರ್ತಿಗೆ ಯೋಜಿಸಿ ರೂಪಿಸಿದ್ದ ವಿಧೇಯಕಕ್ಕೆ ರಾಜ್ಯಪಾಲರು ತಡೆ ಹಾಕಿದ್ದಾರೆ. ಅಕ್ರಮ-ಸಕ್ರಮವನ್ನು ಬೇರೆ ರೂಪದಲ್ಲಿ ತಂದಿದ್ದೀರಿ, ನಗರದಲ್ಲಿ ಈಗಾಗಲೇ ಮೂಲ ಸೌಕರ್ಯದ ಕೊರತೆ ಇದ್ದು, ಇಂತಹ ತೀರ್ಮಾನ ಮುಂದೆ ಸಮಸ್ಯೆಗೆ ಕಾರಣವಾಗುತ್ತದೆ ಎಂದು ರಾಜಭವನ ಅಪಸ್ವರ ಎತ್ತಿದೆ.