Advertisement

Central Govt ವಿರುದ್ಧ ರಾಜ್ಯ ಸರಕಾರದ “ನಿರ್ಣಯ’ ಸಮರ!

12:11 AM Jul 26, 2024 | Team Udayavani |

ಬೆಂಗಳೂರು: ನೀಟ್‌ ವ್ಯವಸ್ಥೆ ರದ್ದುಪಡಿಸುವುದೂ ಸೇರಿ ಕೇಂದ್ರದ ವಿರುದ್ಧ ರಾಜ್ಯ ಸರಕಾರ ಗುರುವಾರ 4 ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದ್ದು, ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರ ಮಾಡಲಾಗಿದೆ.

Advertisement

ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ವಿಪಕ್ಷಗಳು ಧರಣಿ ನಡೆಸುತ್ತಿರುವಾಗಲೇ ಈ ಎಲ್ಲ ನಿರ್ಣಯ ಪಾಸು ಮಾಡಿಕೊಳ್ಳಲಾಗಿದೆ. ಈ ಮೂಲಕ ಕೇಂದ್ರ ಸರಕಾರದ ವಿರುದ್ಧ ರಾಜ್ಯದ ಸೈದ್ಧಾಂತಿಕ ಹೋರಾಟ ಮತ್ತೆ ಮುಂದುವರಿದಿದೆ.

ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಬಿಜೆಪಿ ಹಾಗೂ ಜೆಡಿಎಸ್‌ ಶಾಸಕರು ಗುರುವಾರವೂ ಸಭಾಧ್ಯಕ್ಷರ ಪೀಠದ ಎದುರು ಧರಣಿ ಪ್ರಾರಂಭಿಸಿದರು. ಗದ್ದಲದ ಮಧ್ಯೆ ಪ್ರಮುಖ ವಿಧೇಯಕಗಳಿಗೆ ಅಂಗೀಕಾರ ಪಡೆದುಕೊಳ್ಳಲಾಯಿತು. ಬಳಿಕ ನಿರ್ಣಯದ ಬಗ್ಗೆ ಪ್ರಸ್ತಾವಿಸಿದ ಸ್ಪೀಕರ್‌ ಖಾದರ್‌, ಚರ್ಚೆಯಲ್ಲಿ ಭಾಗವಹಿಸುವಂತೆ ವಿಪಕ್ಷ ಸದಸ್ಯರಿಗೆ ಮನವಿ ಮಾಡಿದರು. ಆದರೆ ಗದ್ದಲ ಮುಂದುವರಿದಾಗ “ಕ್ಷೇತ್ರ ಪುನರ್ವಿಂಗಡಣೆ’, “ಒಂದು ರಾಷ್ಟ್ರ ಒಂದು ಚುನಾವಣೆ’, “ನೀಟ್‌’ ಹಾಗೂ “ಇತರ ಪಾರಂಪರಿಕ ಅರಣ್ಯ ವಾಸಿಗಳ ಹಕ್ಕು ಮಾನ್ಯತೆ’ ನಿರ್ಣಯವನ್ನು ಅಂಗೀಕರಿಸಲಾಗಿದೆ.

ಕುತೂಹಲಕಾರಿ ಸಂಗತಿ ಎಂದರೆ ಈ ನಾಲ್ಕು ನಿರ್ಣಯಗಳನ್ನು ಸಿಎಂ ಸಿದ್ದರಾಮಯ್ಯ ಮಂಡಿಸಲಿಲ್ಲ. ಬದಲಾಗಿ ಸಚಿವರಿಗೆ ಈ ಜವಾಬ್ದಾರಿ ನೀಡಿ ಮೌನಕ್ಕೆ ಶರಣಾಗಿದ್ದರು.

ವಿಪಕ್ಷಗಳ ವಿರೋಧ
ಈ 4 ನಿರ್ಣಯವನ್ನು ವಿಪಕ್ಷಗಳು ತೀವ್ರವಾಗಿ ವಿರೋಧಿಸಿವೆ. ಈ ವಿಚಾರಗಳಿಗೂ ಪ್ರತ್ಯೇಕವಾಗಿ ಒಂದೊಂದು ದಿನ ಚರ್ಚೆ ಅಗತ್ಯವಿದೆ. ಇದಕ್ಕಾಗಿ ಪ್ರತ್ಯೇಕ ಅಧಿವೇಶನ ಕರೆಯಿರಿ. ಯಾವುದೇ ಕಾರಣಕ್ಕೂ ಇದನ್ನು ಸರ್ವಾನುಮತದ ನಿರ್ಣಯ ಎಂದು ಘೋಷಿಸಬೇಡಿ ಎಂದು ವಿಪಕ್ಷಗಳು ಸ್ಪೀಕರ್‌ ಅವರನ್ನು ಆಗ್ರಹಿಸಿದರು.

Advertisement

ಯಾವ ಯಾವ ನಿರ್ಣಯ?:
-ಕ್ಷೇತ್ರ ಪುನರ್ವಿಂಗಡಣೆ
2026 ಅಥವಾ ಅದರ ಅನಂತರ ನಡೆಸುವ ಹೊಸ ಜನಗಣತಿ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ನಡೆಸಬಾರದೆಂಬ ನಿರ್ಣಯವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್‌.ಕೆ. ಪಾಟೀಲ್‌ ಮಂಡಿಸಿದರು. ಜನಸಂಖ್ಯೆ ಆಧರಿಸಿ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ ಸಂದರ್ಭದಲ್ಲಿ ಪ್ರತೀ ರಾಜ್ಯಕ್ಕೆ ಹಂಚಿಕೆ ಮಾಡಬೇಕಾದ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಮತ್ತು ಪ್ರತಿ ರಾಜ್ಯದ ವಿಧಾನಸಭೆಗೆ ನಿಗದಿಪಡಿಸಬೇಕಾದ ಸ್ಥಾನಗಳ ಒಟ್ಟು ಜನಸಂಖ್ಯೆಯನ್ನು 1971 ಜನ
ಗಣತಿಯನ್ನು ಆಧರಿಸಿ ನಿರ್ಧರಿಸಬೇಕೆಂದು ಈ ನಿರ್ಣಯದ ಮೂಲಕ ಕೇಂದ್ರ ಸರಕಾರವನ್ನು ಆಗ್ರಹಿಸಲಾಗಿದೆ.
-ಒಂದು ರಾಷ್ಟ್ರ, ಒಂದು ಚುನಾವಣೆ ಕಠೊರ ನೀತಿ
ಭಾರತವು ವಿಶ್ವದ ಅತಿ ದೊಡ್ಡ ಒಕ್ಕೂಟ ಪ್ರಜಾಪ್ರಭುತ್ವವಾಗಿದೆ.ಸಂವಿಧಾನದಲ್ಲಿ ಉಲ್ಲೇಖೀಸಲಾದ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಯ ತತ್ವವು ಈ ಪ್ರಜಾಪ್ರಭುತ್ವದ ಆತ್ಮವಾಗಿದೆ. ಘಒಂದು ರಾಷ್ಟ್ರ ಒಂದು ಚುನಾವಣೆ’ ಪ್ರಸ್ತಾವವು ಭಾರತದ ಪ್ರಜಾಸತ್ತಾತ್ಮಕ ಮತ್ತು ಒಕ್ಕೂಟ ವ್ಯವಸ್ಥೆಗೆ ಅಪಾಯವನ್ನುಂಟು ಮಾಡುತ್ತದೆ. ದೇಶದ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳು ಮತ್ತು ಒಕ್ಕೂಟ ಸಮಗ್ರತೆಯನ್ನು ರಕ್ಷಿಸಲು ಈ ಕಠೊರ ನೀತಿಯನ್ನು ಅನುಷ್ಠಾನಗೊಳಿಸಬಾರದೆಂದು ಕೇಂದ್ರ ಸರಕಾರವನ್ನು ಈ ಸದನವು ಒತ್ತಾಯಿಸುತ್ತದೆ ಎಂದು ಎಚ್‌.ಕೆ. ಪಾಟೀಲ್‌ ನಿರ್ಣಯ ಮಂಡಿಸಿದರು.
-ನೀಟ್‌ ರದ್ದತಿಗೆ ಕೋರಿಕೆ
ನೀಟ್‌ ಪರೀಕ್ಷಾ ವ್ಯವಸ್ಥೆಯು, ಗ್ರಾಮೀಣ ಬಡ ಮಕ್ಕಳ ವೈದ್ಯಕೀಯ ಶಿಕ್ಷಣಾವಕಾಶಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು, ಶಾಲಾ ಶಿಕ್ಷಣ ವ್ಯವಸ್ಥೆಯನ್ನು ನಿರರ್ಥಕಗೊಳಿಸುತ್ತದೆ. ಮಾತ್ರವಲ್ಲ ರಾಜ್ಯ ಸರಕಾರದ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ರಾಜ್ಯ ಸರಕಾರದ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದು, ಅದನ್ನು ರದ್ದುಪಡಿಸಬೇಕೆಂದು ವೈದ್ಯ ಶಿಕ್ಷಣ ಸಚಿವ ಡಾ|ಶರಣ್‌ ಪ್ರಕಾಶ್‌ ಪಾಟೀಲ್‌ ನಿರ್ಣಯ ಮಂಡಿಸಿದರು.
-ಇತರ ಪಾರಂಪರಿಕ ಅರಣ್ಯವಾಸಿಗಳ ಹಕ್ಕು
ಬುಡಕಟ್ಟು ಜಾತಿಗಳ ಜತೆಗೆ ಇತರ ಪಾರಂಪರಿಕ ಅರಣ್ಯ ವಾಸಿಗಳಿಗೂ ಪಾರಂಪರಿಕ ಅರಣ್ಯ ವಾಸಿಗಳ ಹಕ್ಕು ಕಾಯಿದೆ ಅನ್ವಯ ಮಾಡಬೇಕೆಂಬುದು ಇನ್ನೊಂದು ಮಹತ್ವದ ನಿರ್ಣಯವಾಗಿದೆ. 1980ರ ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೆ ಬರುವುದಕ್ಕಿಂತ ಮೊದಲು ಶರಾವತಿ ಯೋಜನೆಗಾಗಿ ಭೂಮಿ ಕಳೆದುಕೊಂಡವರಿಗೆ ಅರಣ್ಯ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಿರುವುದಕ್ಕೆ ಇನ್ನೂ ಕಾನೂನು ಮಾನ್ಯತೆ ದೊರೆತಿಲ್ಲ. ಒಟ್ಟು 9136 ಎಕರೆ ಭೂಮಿಯನ್ನು ಬಿಡುಗಡೆ ಮಾಡಿ ಸಂತ್ರಸ್ತರಿಗೆ ಹಕ್ಕುಪತ್ರ ಕೊಡುವ ವಿಚಾರ ಇನ್ನೂ ನನೆಗುದಿಯಲ್ಲಿದೆ. ಹೀಗಾಗಿ 2005ರ ಪಾರಂಪರಿಕ ಅರಣ್ಯವಾಸಿಗಳ ಹಕ್ಕು ಕಾಯಿದೆಯನ್ನು ಬುಡಕಟ್ಟು ಜನಾಂಗದ ಜತೆಗೆ ಅರಣ್ಯದಲ್ಲಿ ವಾಸವಿರುವ ಇತರೆ ಸಮುದಾಯದವರಿಗೂ ವಿಸ್ತರಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಅರಣ್ಯ ಸಚಿವ ಈಶ್ವರ ಖಂಡ್ರೆ ನಿರ್ಣಯ ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next