Advertisement
ಕರಾವಳಿಯ ಮರವಂತೆ ಸಮೀಪದ ಬಿಜೂರು, ಉಪ್ಪುಂದ, ಖಂಬದಕೋಣೆ, ನಾಗೂರು, ಕಿರಿಮಂಜೇಶ್ವರ ಮುಂತಾದ ಭಾಗಗಳಲ್ಲಿ ಈಗ ನೆಲಗಡಲೆ ಬೆಳೆ ಕೊಯ್ಲು ಸಮಯವಾಗಿದ್ದು, ಈ ಹಿಂದಿನಂತೆ ರೈತರು ಗದ್ದೆಗಳಲ್ಲಿ ನೆಲಗಡಲೆ ಗಿಡಗಳನ್ನು ಕಿತ್ತು ದಿನಗಟ್ಟಲೆ ಗದ್ದೆಗಳಲ್ಲಿ ಕುಳಿತು ಕೊಯ್ಯುವ (ಗಿಡದಿಂದ ಬೇರ್ಪಡಿಸುವ) ಕಾರ್ಯದಲ್ಲಿ ನಿರತವಾಗುವ ಅಗತ್ಯವಿಲ್ಲ, ಅನಿವಾರ್ಯವೂ ಅಲ್ಲ. ಈಗ ಗದ್ದೆಗಳಲ್ಲಿ ನೆಲಗಡಲೆ ಫಸಲನ್ನು ಗಿಡದಿಂದ ಬೇರ್ಪಡಿಸುವ ಯಂತ್ರಗಳ ಸದ್ದು ಜೋರಾಗಿಯೇ ಕೇಳಿಬರುತ್ತಿದೆ.
ಈಗಾಗಲೇ ಬೇರೆ ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿರುವ ಗಿಡದಿಂದ ನಲೆಗಡಲೆ ಫಸಲನ್ನು ಬೇರ್ಪಡಿಸುವ ಒಕ್ಕರಣೆ ಯಂತ್ರವನ್ನು ಕೃಷಿಕ ನಾಗರಾಜ ದೇವಾಡಿಗ ಅವರು ಮೊದಲ ಬಾರಿಗೆ ಪರಿಚಯಿಸಿದ್ದು, ಕೃಷಿ ಕೆಲಸದ ಬಗ್ಗೆ ಜನರ ನಿರಾಸಕ್ತಿ, ಕೂಲಿ ಆಳುಗಳ ಕೊರತೆ, ದಿನದಿಂದ ದಿನಕ್ಕೆ ಏರುತ್ತಿರುವ ಸಂಬಳ ಇವುಗಳನ್ನೆಲ್ಲ ಮನಗಂಡ ಇವರು ಹೊರ ಜಿಲ್ಲೆಗಳಲ್ಲಿ ಸುತ್ತಾಡಿ ಯಂತ್ರದ ಕುರಿತು ಸಂಪೂರ್ಣ ತಿಳಿದುಕೊಂಡು ಎರಡು ವರ್ಷಗಳ ಹಿಂದೆ ಯಂತ್ರವನ್ನು ಈ ಭಾಗಕ್ಕೆ ತಂದು ಬಳಕೆ ಮಾಡಿದಾಗ ಇದರಲ್ಲಿ ಯಶಸ್ಸು ದೊರಕಿತು. ಇತರೆ ರೈತರು ಉಪಯೋಗ ಮಾಡಿದಾಗ ಕೂಲಿಗಳಿಗೆ ತಗುಲುವ ಖರ್ಚು ವೆಚ್ಚಗಳ ಬಗ್ಗೆ ಲೆಕ್ಕ ಹಾಕಿದಾಗ ಗಣನೀಯ ವ್ಯತ್ಯಾಸ ಕಂಡುಬಂದಿರುವುದರಿಂದ ರೈತರಿಗೆ ಇದು ಒಂದು ರೀತಿಯಲ್ಲಿ ವರದಾನವಾಗಿ ಕಂಡಿತು. ಕಡಿಮೆ ಖರ್ಚು ಹೆಚ್ಚು ಕೆಲಸ
ಒಂದು ಕೂಲಿ ಆಳು ದಿನಕ್ಕೆ ಒಂದರಿಂದ ಎರಡು ಚೀಲ ನೆಲಗಡಲೆ ಕೊಯ್ದರೆ ಯಂತ್ರವು ಒಂದು ಗಂಟೆಗೆ ಸುಮಾರು 20 ರಿಂದ 25 ಚೀಲದಷ್ಟು ನೆಲಗಡಲೆಯನ್ನು ಗಿಡದಿಂದ ಬೇರ್ಪಡಿಸುತ್ತದೆ. ಎರಡು ಗಂಟೆಗೆ ಒಂದು ಎಕರೆಯಷ್ಟು ಗಿಡಗಳನ್ನು ಕಟಾವು ಮಾಡುತ್ತದೆ ಎಂದು ಹೇಳುತ್ತಾರೆ. ಒಂದು ದಿನಕ್ಕೆ ಒಬ್ಬರಿಗೆ (ಮಹಿಳೆಯರಿಗೆ) 300 ರೂ. ವೇತನವಾದರೆ, ಯಂತ್ರದ ಒಂದು ಗಂಟೆ ಬಾಡಿಗೆ 800 ರೂ. ಮಾತ್ರ. ಇದರ ಜತೆಗೆ ಗಿಡಗಳನ್ನು ಸಣ್ಣದಾಗಿ ಕಟಾವು ಮಾಡುವುದರಿಂದ ಜಾನುವಾರುಗಳಿಗೆ ತಿನ್ನಲು ಮಳೆಗಾಲದ ಆಹಾರಕ್ಕಾಗಿ ಮತ್ತೂಮ್ಮೆ ಸಿದ್ಧಪಡಿಸುವ ಅಗತ್ಯವಿರುವುದಿಲ್ಲ, ಅದಕ್ಕೆ ತಗಲುವ ಇತರೆ ಖರ್ಚು ಉಳಿತಾಯ ಸಾಧ್ಯವಾಗಿದೆ.
Related Articles
Advertisement
ಕಡಿಮೆ ಹಣ ವರ್ಷದಿಂದ ವರ್ಷಕ್ಕೆ ಕೂಲಿ ಆಳುಗಳ ಕೊರತೆ ಏರುತ್ತಿರುವ ಸಂಬಳದಿಂದಾಗಿ ಹೆಚ್ಚು ಖರ್ಚು ವೆಚ್ಚಗಳಿಂದಾಗಿ ಕೃಷಿಯಲ್ಲಿ ಲಾಭಾಂಶ ಕಾಣಲು ಸಾಧ್ಯವಾಗುತ್ತಿಲ್ಲ. ಇಂದು ಹಣ ಕೊಟ್ಟರೂ ಕೂಲಿ ಆಳುಗಳು ಸಿಗುತ್ತಿಲ್ಲವಾದ್ದರಿಂದ ಯಂತ್ರದ ಬಳಕೆ ಉಪಯುಕ್ತ ವಾಗಿದೆ. ನೆಲಗಡಲೆ ಕೈಯಿಂದ ಕೊಯ್ಯಲು ಕೆಲವು ದಿನಗಳು ಬೇಕಾಗುತ್ತದೆ, ಸಾವಿರಾರು ರೂಪಾಯಿ ಅಗತ್ಯವಿದೆ. ಆದರೆ ಈ ಯಂತ್ರದಿಂದ ಕಡಿಮೆ ಹಣದಲ್ಲಿ
ಕೆಲಸವು ಒಂದೆರಡು ಗಂಟೆಗಳಲ್ಲಿ ಮುಗಿಯುತ್ತದೆ.
– ನಾಗರಾಜ ದೇವಾಡಿಗ, ಕೃಷಿಕರು – ಕೃಷ್ಣ ಬಿಜೂರು