Advertisement

ಕೋವಿಡ್  ಮುಕ್ತ ಗ್ರಾಮ ಅಭಿಯಾನ

01:39 PM May 19, 2021 | Team Udayavani |

ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿರುವಂತೆ ಜನ ಭಾಗಿದಾರಿ ಕಲ್ಪನೆಯಡಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಎಲ್ಲ ಜನಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ಸಹಯೋಗದಲ್ಲಿ ಕೊರೊನಾ ಮುಕ್ತ ಗ್ರಾಮ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು. ಈ ಕುರಿತು ಮಾರ್ಗಸೂಚಿಗಳಿರುವ ಪ್ರತ್ಯೇಕವಾದ ಪತ್ರವನ್ನು ಎಲ್ಲ ಗ್ರಾಪಂಗಳಿಗೆ ಶೀಘ್ರದಲ್ಲಿ ನೀಡಲಾಗುವುದು ಎಂದು ಡಿಸಿ ನಿತೇಶ ಪಾಟೀಲ ಹೇಳಿದರು.

Advertisement

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಜರುಗಿದ ವಿಡಿಯೋ ಸಂವಾದದ ನಂತರ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಕೈಗೊಂಡು ಅವರು ಮಾತನಾಡಿದರು. ಕೊರೊನಾ ಮುಕ್ತ ಗ್ರಾಮ ಅಭಿಯಾನವನ್ನು ಜನಪ್ರತಿನಿಧಿಗಳ ಸಹಭಾಗಿತ್ವದಲ್ಲಿ ಯಶಸ್ವಿಗೊಳ್ಳಿಸಲು ಕ್ರಮ ಕೈಗೊಳ್ಳಲಾಗುವುದು. ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ, ಗ್ರಾಮಲೆಕ್ಕಾಧಿಕಾರಿಗಳನ್ನು ಒಳಗೊಂಡ ಕೋವಿಡ್‌ ಕಾರ್ಯಪಡೆ ಮೂಲಕ ಕೋವಿಡ್‌ ನಿಯಂತ್ರಿಸುವ ಕಾರ್ಯ ಮಾಡಲಾಗುವುದು ಎಂದರು. ಗ್ರಾಮ ಮಟ್ಟದಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಮೂಲಕ ಕೊರೊನಾ ಕುರಿತ ಪ್ರಾಥಮಿಕ ಮಾಹಿತಿ ಸಂಗ್ರಹಿಸಿ, ಸ್ಥಳದಲ್ಲಿಯೇ ಅಗತ್ಯ ಸಲಹೆ ನೀಡಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು. ಗ್ರಾಪಂ ಪ್ರತಿನಿಧಿಗಳು ಗ್ರಾಮಸ್ಥರ ಸಹಕಾರದೊಂದಿಗೆ ಗ್ರಾಮವನ್ನು ಕೊರೊನಾದಿಂದ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅವರಿಗೆ ಅಗತ್ಯವಿರುವ ಔಷಧ, ಚಿಕಿತ್ಸಾ ಸೌಲಭ್ಯ, ವೈದ್ಯಕೀಯ ಅನುಕೂಲತೆಗಳನ್ನು ಆರೋಗ್ಯ ಇಲಾಖೆಯಿಂದ ಕಲ್ಪಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಹಾನಗರ ಪೊಲೀಸ್‌ ಆಯುಕ್ತ ಲಾಬೂರಾಮ್‌ ಮಾತನಾಡಿ, ಅನಗತ್ಯ ಸಂಚರಿಸುವ ವಾಹನ ಸವಾರರಿಗೆ ಕೋವಿಡ್‌ ಟೆಸ್ಟ್‌ ಮಾಡಲು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಪ್ರತ್ಯೇಕವಾಗಿ ಟೆಸ್ಟಿಂಗ್‌ ತಂಡಗಳನ್ನು ನಿಯೋಜಿಸಿ, ಪೊಲೀಸ್‌ ಕರ್ತವ್ಯನಿರತ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ನಿರ್ವಹಿಸಬೇಕು ಎಂದರು.

ಜಿಪಂ ಸಿಇಒ ಡಾ| ಸುಶೀಲಾ ಬಿ. ಮಾತನಾಡಿ, ಗ್ರಾಮ ಮಟ್ಟದಲ್ಲಿ ಕೋವಿಡ್‌ ನಿಯಂತ್ರಣಕ್ಕಾಗಿ ಕಾರ್ಯಪಡೆಗಳನ್ನು ರಚಿಸಲಾಗಿದೆ. ಗ್ರಾಮದ ಪ್ರತಿ ಓಣಿಗಳಲ್ಲಿ ಸಂಚರಿಸಿ ಕೋವಿಡ್‌ ಮಾರ್ಗಸೂಚಿ ಮತ್ತು ಸೋಂಕಿತರಿಗೆ ಚಿಕಿತ್ಸೆ, ಕಾಳಜಿ ಕೇಂದ್ರಗಳ ಮಾಹಿತಿ ನೀಡಲಾಗುತ್ತಿದೆ. ಕೋವಿಡ್‌ ಟೆಸ್ಟಿಂಗ್‌ ಮತ್ತು ಲಸಿಕೆ ವಿತರಣೆಗೆ ಆದ್ಯತೆ ನೀಡಲಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಎಸಿ ಡಾ| ಗೋಪಾಲ ಕೃಷ್ಣ ಬಿ., ಕಿಮ್ಸ್‌ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ|ಯಶವಂತ ಮದೀನಕರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಶಿವಕುಮಾರ ಮಾನಕರ, ಡಿಮ್ಹಾನ್ಸ್‌ ನೋಡಲ್‌ ಅಧಿಕಾರಿ ಡಾ| ರಾಘವೆಂದ್ರ ನಾಯಕ, ಆರ್‌ ಸಿಎಚ್‌ಒ ಡಾ|ಎಸ್‌.ಎಂ. ಹೊನಕೇರಿ, ಡಿಎಸ್‌ಒ ಡಾ| ಸುಜಾತಾ ಹಸವಿಮಠ, ಡಾ| ಶಶಿ ಪಾಟೀಲ, ಡಾ| ಲಕ್ಷ್ಮೀಕಾಂತ ಲೊಕರೆ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next