Advertisement

ಕೋವಿಡ್ 19 ನಿಯಂತ್ರಣ: ಜಿಲ್ಲಾಡಳಿತಕ್ಕೆ ಬೊಮ್ಮಾಯಿ ಶ್ಲಾಘನೆ

02:21 AM Apr 08, 2020 | Sriram |

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಜಿಲ್ಲಾಡಳಿತದ ಕ್ರಮಗಳನ್ನು ರಾಜ್ಯದ ಗೃಹ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅಭಿನಂದಿಸಿದ್ದಾರೆ.

Advertisement

ಅವರು ಮಂಗಳವಾರ ಜಿಲ್ಲಾಧಿಕಾರಿ ಅವರೊಂದಿಗೆ ಜಿಲ್ಲೆಯ ಕೋವಿಡ್ 19 ನಿಯಂತ್ರಣ ಕುರಿತು ಕೈಗೊಂಡಿರುವ ಕ್ರಮಗಳು ಮತ್ತು ಜಿಲ್ಲೆಯ ಇತರ ಸಮಸ್ಯೆಗಳ ಕುರಿತು ವೀಡಿಯೋ ಕಾನ್ಫರೆನ್ಸ್‌ ನಡೆಸಿದರು.

ಉಡುಪಿಯ ನೆರೆ ಜಿಲ್ಲೆಗಳಾದ ದ.ಕ. ಮತ್ತು ಉ.ಕ.ದಲ್ಲಿ ಕೋವಿಡ್ 19 ಪ್ರಕರಣ ಹೆಚ್ಚಾಗಿರುವುದರಿಂದ ಗಡಿ ಪ್ರದೇಶವನ್ನು ಹೆಚ್ಚು ಬಿಗಿಗೊಳಿಸು ವಂತೆ ಹಾಗೂ ಆ ಜಿಲ್ಲೆಗಳಿಂದ ಆವಶ್ಯಕ ಸಾಮಗ್ರಿ ಸಾಗಿಸುವ ವಾಹನಗಳ ಹೊರತು ಅನಗತ್ಯವಾಗಿ ಸಂಚಾರ ನಡೆಸುವವರನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸುವಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚನೆ ನೀಡಿದರು.

ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ನೆರವಿನೊಂದಿಗೆ ಆರೋಗ್ಯ ಇಲಾಖೆಯವರು ಮನೆಮನೆಗೆ ಭೇಟಿ ನೀಡಿ ಸಾರ್ವ ಜನಿಕರ ಆರೋಗ್ಯ ತಪಾಸಣೆ ನಡೆಸುವಂತೆಯೂ ಆ ಸಂದರ್ಭ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆಯೂ ಸೂಚಿಸಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದರು.

ಉಡುಪಿ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರಬಹುದಾದ ಗ್ರಾಮಗಳನ್ನು ಗುರುತಿಸಲಾಗಿದ್ದು, ಈಗಾಗಲೇ ಕ್ರಿಯಾ ಯೋಜನೆ ರೂಪಿಸಲಾಗಿದೆ. ಪ್ರತಿ 2 ದಿನಕ್ಕೊಮ್ಮೆ ಎಲ್ಲ ಗ್ರಾ.ಪಂ.ಗಳ ಸಭೆ ನಡೆಸಲಾಗುತ್ತಿದೆ. ಪ್ರಸ್ತುತ ಸಮಸ್ಯೆ ಇಲ್ಲ ಎಂದು ಸಿಇಒ ಪ್ರೀತಿ ಗೆಹಲೋತ್‌ ತಿಳಿಸಿದರು.

Advertisement

ಕೃಷಿ ಉತ್ಪನ್ನಗಳ ರಕ್ಷಣೆ
ಜಿಲ್ಲೆಯಲ್ಲಿ ಕೃಷಿಕರ ಬೆಳೆಗೆ ಯಾವುದೇ ಹಾನಿಯಾಗದಂತೆ ಕಲ್ಲಂಗಡಿ, ಮಟ್ಟುಗುಳ್ಳ, ಅನಾನಸ್‌ ಸೇರಿದಂತೆ ವಿವಿಧ ಬೆಳೆಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ವ್ಯವಸ್ಥೆ ಮಾಡಲಾಗಿದೆ. ಕೀಟನಾಶಕ, ಬಿತ್ತನೆ ಬೀಜ ಮತ್ತು ರಸಗೊಬ್ಬರಗಳಿಗೆ ಕೊರತೆಯಾಗದಂತೆ ಕ್ರಮ ಕೈಗೊಳ್ಳ ಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಭತ್ತದ ಕಟಾವು ನಡೆಯುತ್ತಿದೆ. ಎಪಿಎಂಸಿ, ಕೃಷಿ ಮತ್ತು ತೋಟಗಾರಿಕಾ ಇಲಾ ಖೆಯ ಅಧಿಕಾರಿಗಳಿಗೆ ಅಗತ್ಯ ನಿರ್ದೇ ಶನಗಳನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಗದೀಶ್‌ ತಿಳಿಸಿದರು.

ಜಿಲ್ಲೆಗೆ ವಿದೇಶದಿಂದ ಬಂದಿರುವ 1,974 ಭಾರತೀಯರು ಮತ್ತು 16 ಜನ ವಿದೇಶಿ ಯರು ಸೇರಿದಂತೆ ಒಟ್ಟು 1,990 ಜನರ ಕ್ವಾರಂಟೈನ್‌ ಅವಧಿ ಎ. 5ಕ್ಕೆ ಮುಕ್ತಾಯ ಗೊಂಡಿದ್ದು ಇನ್ನೂ 14 ದಿನ ಅವರನ್ನು ನಿಗಾದಲ್ಲಿಡಲಾಗಿದೆ. ಪಾಸಿಟಿವ್‌ ಪ್ರಕರಣ ಕಂಡು ಬಂದ ಮೂವರ ಸಂಪರ್ಕದಲ್ಲಿದ್ದ 43 ವ್ಯಕ್ತಿಗಳನ್ನು ಕ್ವಾರಂಟೈನಲ್ಲಿರಿಸಲಾಗಿದೆ. ಅವರೆಲ್ಲರ ಮಾದರಿಗಳ ಪರೀಕ್ಷೆಯಲ್ಲಿ ವರದಿ ನೆಗೆಟಿವ್‌ ಬಂದಿದೆ ಎಂದರು.

ಎಸ್ಪಿ ವಿಷ್ಣುವರ್ಧನ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಎಚ್‌ಒ ಡಾ| ಸುಧೀರ್‌ಚಂದ್ರ ಸೂಡಾ, ಜಿಲ್ಲಾ ಕೋವಿಡ್ 19 ನೋಡೆಲ್‌ ಅಧಿಕಾರಿ ಡಾ| ಪ್ರಶಾಂತ್‌ ಭಟ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next