Advertisement

ಕೋವಿಡ್‌-19 ಆತಂಕ: ಜಿಲ್ಲೆ ಸಂಪೂರ್ಣ ಬಂದ್‌ಗೆ ಉತ್ತಮ ಸ್ಪಂದನೆ

11:48 PM Mar 28, 2020 | Sriram |

ಮಂಗಳೂರು / ಮಣಿಪಾಲ: ಕೋವಿಡ್‌-19 ವಿಸ್ತರಣೆಯನ್ನು ಪ್ರತಿಬಂಧಿಸುವ ನಿಟ್ಟಿನಲ್ಲಿ ಶನಿವಾರ ದಕ್ಷಿಣ ಕನ್ನಡದಲ್ಲಿ ಸಂಪೂರ್ಣ ಲಾಕ್‌ಡೌನ್‌ ನಡೆಸುವಂತೆ ಜಿಲ್ಲಾಡಳಿತ ನೀಡಿದ ಆದೇಶಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ.

Advertisement

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ತುರ್ತು ಅಗತ್ಯ ಸೇವೆಗಳಲ್ಲಿ ಒಂದಾಗಿರುವ ಔಷಧ ಅಂಗಡಿಗಳು ಎಂದಿನಂತೆ ತೆರೆದಿದ್ದವು. ದಿನಸಿ ಸೇರಿದಂತೆ ತರಕಾರಿ-ಹಣ್ಣುಹಂಪಲು ಅಂಗಡಿಗಳು ಬಂದ್‌ ಆಗಿದ್ದವು. ಮಾಹಿತಿ ಇಲ್ಲದೆ ರಸ್ತೆಗಿಳಿದಿದ್ದ ಮಂದಿಯನ್ನು ಪೊಲೀಸರು ತರಾಟೆಗೆ ತೆಗೆದುಕೊಂಡರು. ಕೆಲವೇ ಪೆಟ್ರೋಲ್‌ ಬಂಕ್‌ಗಳು ಮಾತ್ರ ತೆರೆದಿದ್ದು, ಸೀಮಿತ ಸಿಬಂದಿಯಿದ್ದರು.
ಉಳಿದಂತೆ ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಬಂಟ್ವಾಳ, ಕಡಬ ತಾಲೂಕುಗಳಲ್ಲಿಯೂ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಗಳೂರು ನಗರ, ಗ್ರಾಮಾಂತರ ಭಾಗಗಳಲ್ಲಿ ಬಂದ್‌ ಸಂಪೂರ್ಣವಾಗಿತ್ತು. ಜಿಲ್ಲೆಯ ಗ್ರಾಮಾಂತರ ಭಾಗದ ಹಲವೆಡೆ ಪೊಲೀಸರ ಬಿಗಿ ಕ್ರಮ ದಿಂದಾಗಿ ಹೈನುಗಾರರು ಡೈರಿಗಳಿಗೆ ಹಾಲು ಹಾಕಲಾಗದೆ ತೊಂದರೆ ಅನುಭವಿಸಿರುವುದು ವರದಿಯಾಗಿದೆ. ಹಲವೆಡೆ ಔಷಧ ಅಂಗಡಿ ಗಳೂ ಬಂದ್‌ ಆಚರಿಸಿದ್ದವು.

ಸಾಮಾನ್ಯ ದಿನಗಳಲ್ಲಿ ವೀಕೆಂಡ್‌ ವೇಳೆ ಜನಜಂಗುಳಿ ಇರುವ ಮಂಗಳೂರು ಸಂಪೂರ್ಣ ಸ್ತಬ್ಧವಾಗಿತ್ತು. ವೀಕೆಂಡ್‌ ಬಂತೆಂದರೆ ನಗರದ ಜನತೆ ಮಾಲ್‌ಗ‌ಳು, ಸಿನೆಮಾ, ಬೀಚ್‌ ಇತ್ಯಾದಿ ಸುತ್ತಾಟ ನಡೆಸು ತ್ತಾರೆ. ಆದರೆ ಕೋವಿಡ್‌-19 ಇದೆಲ್ಲ ವನ್ನೂ ಸ್ಥಗಿತಗೊಳಿಸಿದೆ. ಶನಿವಾರದ ಸಂಪೂರ್ಣ ಬಂದ್‌ ಬಿಗಿಯಾಗಿದ್ದ ಕಾರಣ ನಗರದ ರಸ್ತೆಗಳೆಲ್ಲ ಸ್ತಬ್ಧವಾಗಿದ್ದವು. ಕೆಲವು ಕಡೆ ಮಾತ್ರ ಸಾರ್ವಜನಿಕರು -ವಾಹನಗಳ ಸಂಚಾರ ಕಂಡುಬಂತು. ನಗರದ ಕೆಲವು ಜಂಕ್ಷನ್‌ ಗಳಲ್ಲಿ ಮಾತ್ರ ಪೊಲೀಸರನ್ನು ನಿಯೋಜಿಸಲಾಗಿತ್ತು.

ಶನಿವಾರ ಬೆಳಗ್ಗಿನ ವೇಳೆ ಮಾರುಕಟ್ಟೆ ಸುತ್ತಮುತ್ತ ಕೆಲವು ದಿನಸಿ ಅಂಗಡಿಗಳು ಮಾತ್ರ ಬಾಗಿಲು ತೆರೆದಿದ್ದವು, ಬಹುತೇಕ ಅಂಗಡಿ ಮಾಲಕರು ಬಂದ್‌ಗೆ ಬೆಂಬಲ ನೀಡಿದರು. ಅಗತ್ಯ ಸಾಮಗ್ರಿಗಳಲ್ಲಿ ಒಂದಾದ ಹಾಲು ಮಾರುವ ಅಂಗಡಿಗಳು ಕೆಲವು ಪ್ರದೇಶಗಳಲ್ಲಿ ಬಂದ್‌ ಆಗಿ ಸಾರ್ವಜನಿಕರಿಗೆ ತೊಂದರೆ ಉಂಟಾಯಿತು. ಕೆಲವು ಕಡೆ ಹಾಲು ಸರಬರಾಜು ವಾಹನಗಳಿಂದಲೇ ಸಾರ್ವಜನಿಕರಿಗೆ ಹಾಲು ಖರೀದಿಸುತ್ತಿದ್ದ ದೃಶ್ಯ ಕಂಡುಬಂತು.

ಕಲ್ಲೇರಿ: ಕಟ್ಟೆಚ್ಚರ
ಕೋವಿಡ್‌-19 ಸೋಂಕು ದೃಢವಾಗಿರುವ ಸಜಿ ಪನಡು ಮತ್ತು ಕಲ್ಲೇರಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಕ್ವಾರಂಟೈನ್‌ ವಿಧಿಸಲಾಗಿದೆ. ಪೊಲೀಸ್‌ ಕಾವಲು ಹಾಕಲಾಗಿದ್ದು, ಮನೆ ಮಂದಿಯನ್ನು ನಿಗಾದಡಿ ಇರಿಸಲಾಗಿದೆ. ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲು ಜಿಲ್ಲಾ ಡಳಿತವೇ ಕ್ರಮ ಕೈಗೊಂಡಿದೆ.

Advertisement

ಪ್ರಕಟನೆ ಗಮನಕ್ಕೆ ಬಂದಿಲ್ಲ
ನಾವು ಮುಂಜಾನೆ 4 ಗಂಟೆಗೇ ಎದ್ದು ಮಾರ್ಕೆಟ್‌ಗೆ ಹೊರಡುತ್ತೇವೆ. ರಾತ್ರಿ ಬೇಗನೆ ಮಲಗುತ್ತೇವೆ. ರಾತ್ರಿ 9- 10 ಗಂಟೆ ವೇಳೆಗೆ ಹೊರಡಿಸುವ ಪ್ರಕಟನೆಗಳು ನಮ್ಮ ಗಮನಕ್ಕೆ ಬರುವುದಿಲ್ಲ. ಶನಿವಾರ ಜಿಲ್ಲೆಯಲ್ಲಿ ಸಂಪೂರ್ಣ ಬಂದ್‌ ಬಗ್ಗೆ ನಮಗೆ ಮಾರ್ಕೆಟ್‌ಗೆ ಬಂದ ಅನಂತರವೇ ಗೊತ್ತಾಗಿದೆ.
 - ಬಶೀರ್‌,
ಸೆಂಟ್ರಲ್‌ ಮಾರ್ಕೆಟ್‌ ವ್ಯಾಪಾರಿ

ಔಷಧ ಸಿಂಪಡಣೆ ಮುಂದುವರಿಕೆ
ಮುನ್ನೆಚ್ಚರಿಕೆ ಕ್ರಮವಾಗಿ ಪಾಲಿಕೆ ವತಿಯಿಂದ ಶನಿವಾರವೂ ನಗರದ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಔಷಧ ಸಿಂಪಡಣೆ ಮಾಡಲಾಗಿದೆ. ಪಾಲಿಕೆಯ ಎರಡು ಜೆಟ್ಟಿಂಗ್‌ ಯಂತ್ರಗಳಲ್ಲಿ ಔಷಧ ಇರಿಸಿ ಜನರು ಹೆಚ್ಚಾಗಿ ತಂಗುವ ವಿವಿಧ ಪರಿಸರಗಳಲ್ಲಿ ಸಿಂಪಡಿಸಲಾಯಿತು.

ಸೆಂಟ್ರಲ್‌ ಮಾರುಕಟ್ಟೆಯಲ್ಲಿ ವ್ಯಾಪಾರ
ಜಿಲ್ಲಾಡಳಿತ ಸಂಪೂರ್ಣ ಬಂದ್‌ಗೆ ನಿರ್ದೇಶನ ನೀಡಿದ್ದರೂ ಶನಿವಾರ ಬೆಳಗ್ಗೆ ನಗರದ ಸೆಂಟ್ರಲ್‌ ಮಾರುಕಟ್ಟೆಯಲ್ಲಿ ಕೆಲವು ತರಕಾರಿ ಅಂಗಡಿಗಳು ತೆರೆದಿದ್ದವು. ಈ ಪ್ರದೇಶದಲ್ಲಿ ಸಾರ್ವಜನಿಕರ ಓಡಾಟ ಇದ್ದರೂ ಪ್ರಮಾಣ ಕಡಿಮೆಯಿತ್ತು.

ತಡರಾತ್ರಿಯ ಪ್ರಕಟನೆ ಮೂಡಿಸಿದ ಗೊಂದಲ
ಶನಿವಾರ ಬೆಳಗ್ಗೆ ಸೆಂಟ್ರಲ್‌ ಮಾರ್ಕೆಟ್‌ ಮತ್ತು ಇತರ ಕೆಲವು ಕಡೆ ಅಂಗಡಿ ತೆರೆದು ವ್ಯಾಪಾರ ನಡೆಸಲು ಮತ್ತು ಸಾರ್ವಜನಿಕರು ಅಗತ್ಯ ವಸ್ತು ಖರೀದಿಸುವುದಕ್ಕಾಗಿ ತೆರಳಲು ಸಂಪೂರ್ಣ ಲಾಕ್‌ಡೌನ್‌ ಆದೇಶ ಶುಕ್ರವಾರ ರಾತ್ರಿ ವೇಳೆ ದಿಢೀರ್‌ ಆಗಿ ಹೊರಬಿದ್ದುದೇ ಕಾರಣ. ಕೆಲವು ದಿನಗಳಿಂದ ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆ ತನಕ ಅವಶ್ಯ ವಸ್ತುಗಳನ್ನು ಖರೀದಿಸಲು ಅನುಮತಿ ಇತ್ತು. ಸೆಂಟ್ರಲ್‌ ಮಾರ್ಕೆಟ್‌ನಂತಹ ಪ್ರಮುಖ ವ್ಯಾಪಾರ ಕೇಂದ್ರಕ್ಕೆ ಪ್ರತಿದಿನ ಮುಂಜಾನೆ 4-5 ಗಂಟೆ ವೇಳೆಗೆ ಬರುವ ವ್ಯಾಪಾರಿಗಳು ಅದಕ್ಕಾಗಿ ರಾತ್ರಿ ಬೇಗನೆ ಮಲಗಿರುತ್ತಾರೆ. ಹಾಗಾಗಿ ಅವರಿಗೆ ರಾತ್ರಿ 9 ಗಂಟೆ ಬಳಿಕ ಜಿಲ್ಲಾಡಳಿತ ಬಂದ್‌ ಬಗ್ಗೆ ತೆಗೆದುಕೊಂಡ ನಿರ್ಧಾರ ತಿಳಿದಿರುವ ಸಾಧ್ಯತೆ ಕಡಿಮೆ. ಸಂಜೆ ವೇಳೆಗೇ ಸಂಪೂರ್ಣ ಬಂದ್‌ ಪ್ರಕಟನೆ ಹೊರಡಿಸುತ್ತಿದ್ದರೆ ಈ ಗೊಂದಲ ಉದ್ಭವಿಸುತ್ತಿರಲಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.

Advertisement

Udayavani is now on Telegram. Click here to join our channel and stay updated with the latest news.

Next