ನಾನು ಗಂಡಸು, ಯಾವುದೇ ಕಾರಣಕ್ಕೂ ಹೆಣ್ಣಿಗೆ ತಲೆಬಾಗುವುದಿಲ್ಲ.. ಅದು ತಾಯಿಯಾಗಲಿ, ಹೆಂಡ್ತಿಯಾಗಲಿ, ಅಕ್ಕ-ತಂಗಿಯಾಗಲಿ ಅಥವಾ ಸ್ಕೂಲ್ ಟೀಚರ್ ಆಗಲಿ… ನೀವೇನಾದರೂ ಇಂತಹ ಮನಸ್ಥಿತಿಯವರಾಗಿದ್ದರೆ ಅಥವಾ ನಿಮ್ಮ ಅಕ್ಕ-ಪಕ್ಕದಲ್ಲಿ ಆ ತರಹದ ಯಾರಾದರೂ ಇದ್ದರೆ ಮೊದಲು ಹೋಗಿ ಸಿನಿಮಾ ನೋಡಿ, ಜೊತೆಗೆ ಅವರಿಗೂ ತೋರಿಸಿ….”ಕೌಸಲ್ಯ ಸುಪ್ರಜಾ ರಾಮ’ ಇಂತಹ ಮನಸ್ಥಿತಿಗಳಿಗೆ ಹೇಳಿಮಾಡಿಸಿದ ಸಿನಿಮಾ.
ಇತ್ತೀಚಿನ ವರ್ಷಗಳಲ್ಲಿ ಫ್ಯಾಮಿಲಿ ಡ್ರಾಮಾ ಸಿನಿಮಾಗಳಲ್ಲೂ ಒಳ್ಳೆಯ ಸಂದೇಶ, ಮೌಲ್ಯಗಳಿರುವುದಿಲ್ಲ ಎಂದು ದೂರುವವರು ನೋಡಬೇಕಾದ ಸಿನಿಮಾವಿದು. ನಿರ್ದೇಶಕ ಶಶಾಂಕ್ ಫ್ಯಾಮಿಲಿ ಸೆಂಟಿಮೆಂಟ್ ಅನ್ನು ಮನಮುಟ್ಟುವಂತೆ ಕಟ್ಟಿಕೊಡುವಲ್ಲಿ ಎತ್ತಿದ ಕೈ. ಅದು ಅವರ ಈ ಹಿಂದಿನ ಸಿನಿಮಾಗಳಲ್ಲಿ ಸಾಬೀತು ಮಾಡಿದ್ದಾರೆ. ಈಗ ಮತ್ತೂಮ್ಮೆ “ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಲ್ಲಿ ಫ್ಯಾಮಿಲಿ ಎಮೋಶನ್ಸ್ ಜೊತೆಗೆ ಪಕ್ಕಾ ಮನರಂಜನೆಯನ್ನು ಕಟ್ಟಿಕೊಟ್ಟಿದ್ದಾರೆ.
ಇಡೀ ಸಿನಿಮಾ ನಿಂತಿರೋದೇ ಸೆಂಟಿಮೆಂಟ್ ಮೇಲೆ. ಹಾಗಂತ ಸಿನಿಮಾದ ಪ್ರತಿ ದೃಶ್ಯವೂ ಸೆಂಟಿಮೆಂಟ್‌ನಿಂದ ಕೂಡಿದೆ ಎಂದಲ್ಲ. ಇಂದಿನ ಯೂತ್ಸ್ಗೆ, ಫ್ಯಾಮಿಲಿಗೆ ಖುಷಿ ಕೊಡುವ, ಬಾಯ್ತುಂಬ ನಗುವ ಸಾಕಷ್ಟು ದೃಶ್ಯಗಳಿವೆ. ಸಿನಿಮಾದ ಕಥೆಯ ಬಗ್ಗೆ ಹೇಳುವುದಾದರೆ “ನಾನು ಗಂಡಸು ಎಂಬ ಅಹಂಗೆ ಪೆಟ್ಟು ಕೊಡುವ ಕಥೆ’. ಇದನ್ನು ಹಲವು ಸಂದರ್ಭ-ಸನ್ನಿವೇಶಗಳ ಮೂಲಕ ಹೇಳಿದ್ದಾರೆ.
ಸಿನಿಮಾದ ಮೊದಲರ್ಧ ತುಂಬಾ ಮಜವಾಗಿ ಸಾಗಿದರೆ, ದ್ವಿತೀಯಾರ್ಧ ಒಂದು ಟ್ವಿಸ್ಟ್ ಮೂಲಕ ತೆರೆದುಕೊಳ್ಳುತ್ತದೆ. ಆರಂಭದಲ್ಲಿ ಒಂದು ಪ್ರೇಮಕಥೆಯಾಗಿ ತೆರೆದುಕೊಳ್ಳುವ ಸಿನಿಮಾ, ಮುಂದೆ ಸಾಗುತ್ತಾ ತಾಯಿ-ಮಗನ ಸೆಂಟಿಮೆಂಟ್ ಆಗಿ ಬದಲಾಗುತ್ತದೆ. ಈ ಕಥೆಯ ಒಂದು ವೈಶಿಷ್ಟವೆಂದರೆ ಇದು ಯಾವುದೇ ಒಂದು ಆಯಾಮಕ್ಕೆ ಸೀಮಿತವಾಗಿಲ್ಲ. ಗಂಡಸೆಂಬ ಅಹಂನ ಕಥೆಯಾಗಿ, ಸ್ವಾತಂತ್ರ್ಯ ಬಯಸುವ ಹೆಣ್ಣಿನ ಕಥೆಯಾಗಿ, ಸಂಸಾರದ ನಡುವಿನ ನಂಬಿಕೆ, ಹೊಂದಾಣಿಕೆಯ ಕಥೆಯಾಗಿ ಸಾಗುತ್ತದೆ. ಆ ಮಟ್ಟಿಗೆ ಶಶಾಂಕ್ ಈ ಬಾರಿ ಒಂದು ವಿಭಿನ್ನ ಕಥೆಯನ್ನು ತೆರೆಗೆ ತಂದಿದ್ದಾರೆ.
ಇದೊಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾವಾದರೂ ಚಿತ್ರದಲ್ಲಿ ಅನವಶ್ಯಕ ಬಿಲ್ಡಪ್‌ಗ್ಳಿಲ್ಲ. ಇಡೀ ಸಿನಿಮಾದ ಹೈಲೈಟ್‌ಗಳಲ್ಲಿ ಡೈಲಾಗ್ ಕೂಡಾ ಒಂದು. ಭಾವನಾತ್ಮಕ ಸನ್ನಿವೇಶಗಳಲ್ಲಿ ಬರುವ ಸಂಭಾಷಣೆಗಳು ಮನಮುಟ್ಟುವಂತಿವೆ. ನಾಯಕ ಕೃಷ್ಣ ಕೆರಿಯರ್‌ನಲ್ಲಿ ಒಂದು ಹೊಸ ಬಗೆಯ ಸಿನಿಮಾವಿದು. ಕೃಷ್ಣ ಕೂಡಾ ಇಲ್ಲಿ ಎರಡು ಶೇಡ್‌ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎರಡರಲ್ಲೂ ಇಷ್ಟವಾಗುತ್ತಾರೆ.
ನಾಯಕಿ ಬೃಂದಾ ಆಚಾರ್ಯ ಇದ್ದಷ್ಟು ಹೊತ್ತು ಕ್ಯೂಟ್ ಗರ್ಲ್. ಇಡೀ ಸಿನಿಮಾದ ಅಚ್ಚರಿಗಳಲ್ಲಿ ಮಿಲನಾ ಅವರ ಪಾತ್ರ ಕೂಡಾ ಒಂದು. ಸೆಕೆಂಡ್ ಹಾಫ್ನಲ್ಲಿ ಎಂಟ್ರಿಕೊಡುವ ಇವರು ಸಿನಿಮಾಕ್ಕೊಂದು ಹೊಸ ಕಲರ್ ತರುತ್ತಾರೆ. ಮಮತೆಯ ತಾಯಿಯಾಗಿ ಸುಧಾ ಬೆಳವಾಡಿ, ಸಿಡಿಸಿಡಿ ಸಿಡಿಯುವ ತಂದೆಯಾಗಿ ರಂಗಾಯಣ ರಘು, ಭಾಮೈದನಾಗಿ ನಾಗಭೂಷಣ್ ಇಷ್ಟವಾಗುತ್ತಾರೆ. ಇಲ್ಲಿ ಬರುವ ಪ್ರತಿ ಪಾತ್ರಗಳು ತನ್ನದೇ ಆದ ಮಹತ್ವ ಹೊಂದಿವೆ. ಅದು ಕೂಡಾ ಈ ಸಿನಿಮಾದ ಹೈಲೈಟ್ ಎನ್ನಬಹುದು. ಚಿತ್ರದ ಹಾಡುಗಳು ಕಥೆಗೆ ಪೂರಕವಾಗಿದ್ದು, ಗುನುಗುವಂತಿದೆ. ಫ್ಯಾಮಿಲಿ ಜೊತೆಗೆ ಥಿಯೇಟರ್‌ನತ್ತ ಜಾಲಿರೈಡ್ ಹೋಗಬಯಸುವವರಿಗೆ “ಕೌಸಲ್ಯ ಸುಪ್ರಜಾ ರಾಮ’ ಒಂದು ಉತ್ತಮ ಆಯ್ಕೆಯಾಗಬಹುದು.
ರವಿಪ್ರಕಾಶ್ ರೈ