ಕೊಟ್ಟೂರು: ಕೋವಿಡ್ ಭೀತಿಯಿಂದ ಕೊಟ್ಟೂರು ಠಾಣೆ ಪೊಲೀಸರು ಕ್ವಾರಂಟೈನ್ ನಲ್ಲಿದ್ದು ಮರಳು ದಂಧೆಕೋರರು ಇದನ್ನೇ ಲಾಭವಾಗಿಸಿಕೊಂಡು ಮರಳು ಎಗ್ಗಿಲ್ಲದೆ ಮರಳು ಸಾಗಾಣಿಕೆ ನಡೆಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪಟ್ಟಣದ ಬಿಕ್ಕಿಮರಡಿ ದುರ್ಗಾಂಬ ದೇವಾಲಯದ ಹಿಂಭಾಗದಲ್ಲಿ ನಾಲ್ಕೈದು ಟ್ರ್ಯಾಕ್ಟರ್‌ಗಳು ರಾಜಾರೋಷವಾಗಿ ಬುಧವಾರ ಗ್ರಾವಲ್ ಸಾಗಾಣಿಕೆಯಲ್ಲಿ ತೊಡಗಿದ್ದವು. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆಯೊಬ್ಬರಿಗೆ ಕೋವಿಡ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಠಾಣೆಯ ಎಲ್ಲ ಸಿಬ್ಬಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಹೀಗಾಗಿ ಬೇರೆ ಠಾಣೆಯಿಂದ ಈ ಠಾಣೆಗೆ ಕರ್ತವ್ಯಕ್ಕೆ ಪೊಲೀಸರನ್ನು ನಿಯೋಜಿಸಲಾಗಿದೆ. ಆದರೆ ಮರಳು ದಂಧೆಕೋರರು ಇದನ್ನೇ ಸದುಪಯೋಗ ಪಡಿಸಿಕೊಂಡು ತಮ್ಮ ಅಕ್ರಮ ಮುಂದುವರಿಸಿದ್ದಾರೆ. ತಾತ್ಕಾಲಿಕವಾಗಿ ಡ್ನೂಟಿಗೆ ಹಾಜರಾದ ಪೊಲೀಸರು ತಮ್ಮನ್ನು ಏನೂ ಮಾಡಲಾರರು ಎಂಬ ಧೈರ್ಯದಲ್ಲಿ ತಮ್ಮ ಧಂಧೆ ಮುಂದುವರಿಸಿದ್ದಾರೆ.
ಕೂಡ್ಲಿಗಿ, ಶಿರಬಿ, ಚಪ್ಪರದಹಳ್ಳಿ, ಹ್ಯಾಳ್ಯಾ, ಮರೂರು, ರಾಂಪುರ ಮಾರ್ಗದಲ್ಲಿನ ಹಳ್ಳಗಳ ಹೊಲಗಳಿಂದ ರಾತ್ರಿಯಿಂದ ಬೆಳಗಾಗುವ ತನಕ ಮರಳು ಕಳ್ಳಸಾಗಾಣಿಕೆ ನಡೆಯುತ್ತಿದೆ. ಪೊಲೀಸರು ಮರಳು ಕಳ್ಳಸಾಗಾಣಿಕೆ ಮಾಡುವ ಅನೇಕ ಟ್ರ್ಯಾಕ್ಟರ್‌ಗಳನ್ನು ಸೀಜ್ ಮಾಡಿರುವುದರಿಂದ ಈಗ ನಂಬರ್ ಪ್ಲೇಟ್ ಇಲ್ಲದ ಟ್ರ್ಯಾಕ್ಟರ್‌ಗಳು ಮರಳು ಸಾಗಾಣಿಕೆ ಮಾಡುತ್ತಿವೆ. ಮರಳು ಕಳ್ಳ ಸಾಗಾಣಿಕೆ ದಂಧೆಗೆ ಕಡಿವಾಣ ಹಾಕಲು ಹಗಲು ರಾತ್ರಿ ಶ್ರಮಿಸುತ್ತಿದ್ದ ಪಿಎಸ್‌ಐ ಎ. ಕಾಳಿಂಗ ಈಗ ಕ್ವಾರಂಟೈನ್‌ನಲ್ಲಿರುವುದು ಹಾಗೂ ಸಿಪಿಐ ಒಬ್ಬರೇ ಎಲ್ಲವನ್ನೂ ನಿಭಾಯಿಸಬೇಕಾಗಿರುವ ಅನಿವಾರ್ಯತೆ ಎದುರಾಗಿದೆ. ಇದು ದಂಧೆ ಹೆಚ್ಚಾಗಲು ಕಾರಣವಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೊಟ್ಟೂರು ಭಾಗದಲ್ಲಿ ಮರಳು ಕಳ್ಳ ಸಾಗಾಣಿಕೆಗೆ ಕಡಿವಾಣ ಹಾಕಲು ವಿಶೇಷ ಪೊಲೀಸ್ ತಂಡವನ್ನು ಕರ್ತವ್ಯಕ್ಕೆ ನಿಯೋಜಿಸಬೇಕಿದೆ ಎಂದು ಸಾರ್ವಜನಿಕರ ಒತ್ತಾಯಿಸಿದ್ದಾರೆ.
ಪೊಲೀಸರು ಕ್ವಾರೈಂಟನ್ ನಲ್ಲಿರುವುದು ಕಳ್ಳರಿಗೆ ಆಟವಾಗಿದೆ. ಅಂತರ್ಜಲ ಹೆಚ್ಚಿಸಲು ಪಟ್ಟಣಕ್ಕೆ ಇರುವ ಕೆರೆ ಇದು ಒಂದೇ. ಆದರೆ ಅದರಲ್ಲಿ ಮರಳು ಕಳ್ಳಸಾಗಾಣಿಕೆಯಾಗುತ್ತಿರುವುದು ದುರಂತ. ಪೊಲೀಸ್ ಗಸ್ತು ತಿರುಗಿ ಇಂಥ ಕೃತ್ಯಗಳಿಗೆ ಕಡಿವಾಣ ಹಾಕುತ್ತಿದ್ದರು. ಆದರೆ ಈ ಕೋವಿಡ್ ಭೀತಿಯಿಂದಾಗಿ ಎಲ್ಲವೂ ನಿಂತುಹೋದ ಹಿನ್ನೆಲೆಯಲ್ಲಿ ಕಳ್ಳರ ಕಾಟ ಜೋರಾಗಿದೆ.
ಕೊಟ್ರೇಶ್,
ಗ್ರಾಮಸ್ಥ ಕೊಟ್ಟೂರು
ಇಂಥ ಕಳ್ಳ ಸಾಗಾಣಿಕೆ ಮಾಡುವವರು ಯಾರೇ ಆಗಲಿ ಕೂಡಲೇ ಪರಿಶೀಲಿಸಿ ಕಳ್ಳ ಸಾಗಾಣಿಕೆಗೆ ಕಡಿವಾಣ ಹಾಕುತ್ತೇವೆ. ಇಡೀ ಊರೇ ಕೋವಿಡ್ ಭೀತಿಯಲ್ಲಿರುವಾಗ ಇಂಥ ಕೃತ್ಯಗಳು ಮುಂದುವರಿಯದಂತೆ ಕ್ರಮ ಕೈಗೊಳ್ಳುತ್ತೇವೆ.
ರವೀಂದ್ರ ಕುರುಬಗಟ್ಟಿ,
ಸಿಪಿಐ, ಕೊಟ್ಟೂರು
ಎಂ. ರವಿಕುಮಾರ