ಕೊಟ್ಟಿಗೆಹಾರ :ಕೊಟ್ಟಿಗೆಹಾರದ ಸರ್ಕಾರಿ ಬಸ್ ನಿಲ್ದಾಣದ ಪ್ರವೇಶ ದ್ವಾರದ ಬಳಿ ಇರುವ ಶಿಥಿಲಾವಸ್ಥೆ ತಲುಪಿದ ಕೌಗೇಟ್ ದುರಸ್ಥಿಗೆ ಸಾರ್ವಜನಿಕರು, ಆಟೋ ಚಾಲಕರು ವಿರೋಧ ವ್ಯಕ್ತಪಡಿಸಿ ನೂತನ ಕೌಗೇಟ್ ಅಳವಡಿಸಲು ಒತ್ತಾಯಿಸಿದರು.
ಕೊಟ್ಟಿಗೆಹಾರದ ಸರ್ಕಾರಿ ಬಸ್ ನಿಲ್ದಾಣದ ಕೌಗೇಟ್ ಶಿಥಿಲಾವಸ್ಥೆ ತಲುಪಿದ್ದು ನೂತನ ಕೌಗೇಟ್ ಅಳವಡಿಸುವಂತೆ ಆಟೋ ಚಾಲಕರು ಕೆಎಸ್‌ಆರ್‌ಟಿ ಅಧಿಕಾರಿಗಳಿಗೆ ಕೆಲವು ದಿನಗಳ ಹಿಂದೆ ಮನವಿ ಸಲ್ಲಿಸಿದ್ದರು. ಭಾನುವಾರ ಶಿಥಿಲಾವಸ್ಥೆ ತಲುಪಿದ ಕೌಗೇಟ್ ರಿಪೇರಿ ಮಾಡಲು ಸಿಬ್ಬಂದಿಗಳು ಬಂದಿದ್ದು ಈ ವೇಳೆ ಸಾರ್ವಜನಿಕರು ಹಾಗೂ ಕೊಟ್ಟಿಗೆಹಾರದ ಆಟೋ ಚಾಲಕರು ನೂತನ ಕೌಗೇಟ್ ಅಳವಡಿಸಬೇಕು ಎಂದು ಹಳೆಯ ಕೌಗೇಟ್ ರಿಪೇರಿಗೆ ವಿರೋಧ ವ್ಯಕ್ತಪಡಿಸಿದರು.
ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಕೊಟ್ಟಿಗೆಹಾರ ನಿಲ್ದಾಣ ನಿಯಂತ್ರಕರು ಮೇಲಾಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದು ದುರಸ್ತಿ ಕಾರ್ಯ ಮಾಡಲು ಬಂದ ಸಿಬ್ಬಂದಿಗಳು ಹಳೆಯ ಕೌಗೇಟ್ ರಿಪೇರಿ ಕೆಲಸವನ್ನು ಸ್ಥಗಿತಗೊಳಿಸಿದರು.
ಇದನ್ನೂ ಓದಿ :ಸಂಸ್ಕಾರಯುತ ಶಿಕ್ಷಣ ಕೊಡುವುದು ನಿಜವಾದ ಶಿಕ್ಷಣ: ಡಾ. ಹನುಮಂತನಾಥ ಸ್ವಾಮೀಜಿ
ಕೌಗೇಟ್ ತುಕ್ಕು ಹಿಡಿದು ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು ಪ್ರತಿ ವರ್ಷವೂ ಹಳೆಯ ಕೌಗೇಟ್ ದುರಸ್ತಿ ಮಾಡಲಾಗುತ್ತಿದೆ. ಆದರೆ ಮತ್ತೆ ಮತ್ತೆ ಹಾಳಾಗುತ್ತಿದ್ದು ನೂತನ ಕೌಗೇಟ್ ಅಳವಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೊಟ್ಟಿಗೆಹಾರ ಆಟೋ ಸಂಘದ ಅಧ್ಯಕ್ಷ ನಾಗೇಶ್, ಸದಸ್ಯರಾದ ದೇವೇಂದ್ರ, ಸೋಮೇಶ್, ಗಣೇಶ್, ಸ್ಥಳೀಯರಾದ ಅಬ್ದುಲ್ ರೆಹಮಾನ್, ಸುಲೈಮಾನ್ ಮುಂತಾದವರು ಇದ್ದರು.