ಸೋಮವಾರಪೇಟೆ: ಕಳೆದ 5 ದಿನಗಳಿಂದ ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡು ಸಂತ್ರಸ್ತರಾಗಿದ್ದ ಮುಕ್ಕೋಡ್ಲು ಗ್ರಾಮದ ಸುಮಾರು 80 ಮಂದಿಯನ್ನು ರಕ್ಷಿಸಲಾಗಿದೆ.
ಮಾದಾಪುರದ ಇಗ್ಗೊàಡ್ಲು ಮಾರ್ಗವಾಗಿ ಮತ್ತು ಹಚ್ಚಿನಾಡು ಮಾರ್ಗವಾಗಿ ಮುಕ್ಕೋಡ್ಲು ತಲುಪಿದ ಯುವಕರ ತಂಡ ಗ್ರಾಮದೊಳಗೆ ಸಿಲುಕಿದ್ದ ಜನರನ್ನು ಹರಸಾಹಸ ಪಟ್ಟು ರಕ್ಷಿಸಿತು.
ಜಲಪ್ರಳಯದಿಂದ ಗ್ರಾಮದಲ್ಲಿ ಭಾರೀ ಬೆಟ್ಟಗಳು ಕುಸಿದು, ಮರಗಳು ನೆಲಕ್ಕುರುಳಿ ರಸ್ತೆ ಸಂಪರ್ಕ ನಾಶವಾಗಿದೆ. ಹಚ್ಚಿನಾಡು ಗ್ರಾಮದ ಸುಭಾಶ್ ಸೋಮಯ್ಯ ಎಂಬುವರ ಮನೆ ಕಣ್ಮರೆಯಾಗಿದೆ. ಮಾದಾಪುರದ ಇಗ್ಗೊàಡ್ಲು ಎಸ್ಟೇಟ್ ನಡುವೆ ಯಂತ್ರಗಳ ಸಹಾಯದಿಂದ ಶಾಸಕ ಅಪ್ಪಚ್ಚು ರಂಜನ್ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಯುವಕರು ಕಾರ್ಯಾಚರಣೆಗೆ ಇಳಿದರು. ಕೋಟೆಬೆಟ್ಟವನ್ನು ಹತ್ತಿ ಇಳಿದು ಯುವಕರು ಮುಕ್ಕೋಡ್ಲು ಮುಟ್ಟಿದರು. ಅಲ್ಲಿನ ರಾಜೇಶ್ ಎಂಬುವರ ಕುಟುಂಬದ ಇಬ್ಬರು ಮಕ್ಕಳು, ವೃದಟಛಿರು ಸೇರಿದಂತೆ 6 ಮಂದಿಯನ್ನು ರಕ್ಷಿಸಲಾಯಿತು. ಇದರೊಂದಿಗೆ ಸಂಪರ್ಕ ಕಡಿದುಕೊಂಡಿದ್ದ 40ಕ್ಕೂ ಅಧಿಕ ಮಂದಿಯನ್ನು ಮಾದಾಪುರ ಮಾರ್ಗವಾಗಿ ಕರೆದುಕೊಂಡು ಬರಲಾಯಿತು.
ಇತ್ತ ಸೂರ್ಲಬ್ಬಿ, ಹಮ್ಮಿಯಾಲ ಮಾರ್ಗವಾಗಿ ಹಚ್ಚಿನಾಡು ತಲುಪಿದ ತಂಡ, ಮುಕ್ಕೋಡ್ಲುನಲ್ಲಿ ಯಾರ ಸಂಪರ್ಕಕ್ಕೂ ಸಿಗದೇ ಉಳಿದುಕೊಂಡಿದ್ದ ಪೊನ್ನಚೆಟ್ಟಿರ ಮಾದಪ್ಪ-ಬೋಜಮ್ಮ ಅವರ ಮನೆಯವರನ್ನು ರಕ್ಷಿಸಿತು.
5 ದಿನಗಳಿಂದ ಆಹಾರವಿಲ್ಲದೇ ಅತಂತ್ರ ಸ್ಥಿತಿಯಲ್ಲಿದ್ದ ಕುಟುಂಬವನ್ನು ಸೋಮವಾರ ಪೇಟೆಗೆ ಕರೆತರಲಾಯಿತು. ಮನೆಯೊಳಗಿದ್ದ ವಿಕಲಚೇತನ ರತೀಶ್ ಅವರನ್ನು ತಂಡ ಬಡಿಗೆ ಕಟ್ಟಿಕೊಂಡು ಸುಮಾರು 6 ಕಿ.ಮೀ. ಹೊತ್ತು ಸಾಗಿದರು. ಮಂಡಿಯವರೆಗೆ ಹೂತುಕೊಳ್ಳುವ ಕೆಸರಿನ ನಡುವೆ ಸಾಹಸಪಟ್ಟು ಹಚ್ಚಿನಾಡುವರೆಗೆ ಕರೆತರಲಾಯಿತು. ಹೋಂಸ್ಟೇ ಒಂದರಲ್ಲಿ ತಂಗಿದ್ದ ಹಚ್ಚಿನಾಡು, ಕಬ್ಬಣಿ, ಮುಕ್ಕೋಡ್ಲು ಗ್ರಾಮದ ಸುಮಾರು 43 ಮಂದಿಯನ್ನು ರಕ್ಷಿಸಲಾಯಿತು. ಸ್ಥಳೀಯ ಜನಪ್ರತಿನಿಧಿಗಳು ಕಾರ್ಯಾಚರಣೆಗೆ ಸಹಕಾರ ನೀಡಿದರು.
ಮುಕ್ಕೋಡ್ಲು ಗ್ರಾಮದಲ್ಲಿ ಲಕ್ಷಾಂತರ ರೂ. ಹಾನಿ ಸಂಭವಿಸಿದೆ. ನಾಟಿ ಮಾಡಿದ್ದ ಗದ್ದೆಗಳು ಮುಚ್ಚಿಹೋಗಿದ್ದು, ಎರಡೂ ಬದಿಯ ಬೆಟ್ಟಗುಡ್ಡ ಕುಸಿಯುತ್ತಿದೆ. ಹೊಳೆಯಂತೂ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಗ್ರಾಮಸ್ಥರ ರಕ್ಷಣೆ
ಕೊಡಗಿನ ಮಕ್ಕಂದೂರು, ಮುಕ್ಕೋಡ್ಲು ಸೇರಿದಂತೆ ಭೂಕುಸಿತಕ್ಕೊಳಕ್ಕಾಗಿ ಸಂಕಷ್ಟದಲ್ಲಿರುವ ಗ್ರಾಮ ವ್ಯಾಪ್ತಿಯ ಎಲ್ಲ ಜನತೆಯನ್ನು ರಕ್ಷಿಸಲಾಗಿದೆ.
ಸೋಮವಾರ ಕೂಡ ಸೇನಾ ಕಾರ್ಯಾಚರಣೆ ನಡೆಸಲಾಗಿದ್ದು, ಅಪಾಯದಲ್ಲಿದ್ದ ಎಲ್ಲ ಗ್ರಾಮಸ್ಥರನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಸೇನಾ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಅಗ್ನಿಶಾಮಕ ದಳ ಮತ್ತು ಗೃಹ ರಕ್ಷಕ ದಳದ ಮಹಾ ನಿರ್ದೇಶಕ ಎಂ.ಎನ್.ರೆಡ್ಡಿ ಮಾಹಿತಿ ನೀಡಿದರು.