ತೆಲಸಂಗ: ಅವ್ಯವಸ್ಥೆಗಳ ಆಗರವಾಗಿ ಗ್ರಾಮಸ್ಥರು, ಮಕ್ಕಳ ಪಾಲಕರ ಕೆಂಗಣ್ಣಿಗೆ ಗುರಿಯಾಗಿದ್ದ ಸಮೀಪದ ಕೊಟ್ಟಲಗಿಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯ ಈಗ ಮಾದರಿಯಾಗುವತ್ತ ಹೆಜ್ಜೆ ಹಾಕಿದೆ.
ಆಗಸ್ಟ್ 29ರಂದು ಉದಯವಾಣಿ “ಕೊಟ್ಟಲಗಿ ಮೆ. ಪೂರ್ವ ಹಾಸ್ಟೇಲ್ ಸುಧಾರಣೆ ಎಂದು?’ ಶೀರ್ಷಿಕೆ ಅಡಿಯಲ್ಲಿ ಸಮಗ್ರ ವರದಿ ಪ್ರಕಟಿಸಿತ್ತು. ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಕೈಗೊಂಡ ಸುಧಾರಣಾ ಪ್ರಯತ್ನಗಳು ಫಲಿಸಿದ್ದು, ಇಂದು ವಸತಿ ಶಾಲೆ ಕನ್ನಡಿಯಂತೆ ಕಂಗೊಳಿಸತೊಡಗಿದೆ.
ತಿಂಗಳಿಗೊಮ್ಮೆ ಮಾತ್ರ ಬರುತ್ತಿದ್ದ ಮೇಲ್ವಿಚಾರಕರು ನಿತ್ಯ ಕಾಣ ಸಿಗುತ್ತಾರೆ. ಶೌಚಾಲಯಗಳು, ಅಡುಗೆ ಕೋಣೆ ಗಬ್ಬೆದ್ದು ನಾರುತ್ತಿದ್ದವು. ಈಗ ಸ್ವಚ್ಛಗೊಂಡಿವೆ. ವಸತಿ ಶಾಲೆಗೆ ದಾಖಲಾದ 43 ಮಕ್ಕಳ ಪೈಕಿ ಕೇವಲ 13 ಮಕ್ಕಳು ಇರುತ್ತಿದ್ದರು. ಸದ್ಯ ಹಾಜರಾತಿಯೂ ಹೆಚ್ಚಿದೆ. ಸಿಸಿ ಕ್ಯಾಮೆರಾಗಳು ಹಾಳಾಗಿದ್ದವು. ಮಕ್ಕಳಿಗೆ ಮಚ್ಚರದಾನಿ ಇರದೆ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳುವ ಸ್ಥಿತಿ ಇತ್ತು. ಈಗ ಎಲ್ಲವೂ ಸುಧಾರಿಸಿದೆ.
ವಸತಿ ನಿಲಯದಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡಿದ್ದೇವೆ. ಸದ್ಯಕ್ಕೆ ಎಲ್ಲ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಮುಂದೆ ಹೀಗಾಗದಂತೆ ನಿಗಾ ವಹಿಸಲಾಗಿದೆ. ಯಾವುದೇ ಸಮಸ್ಯೆ ಇದ್ದಲ್ಲಿ ನಮ್ಮ ಗಮನಕ್ಕೆ ತಂದರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಪ್ರವೀಣ ಪಾಟೀಲ ಸ.ನಿ.ಸಮಾಜ ಕಲ್ಯಾಣ ಇಲಾಖೆ
ಮಕ್ಕಳಿಗೆ ಸರಕಾರದ ಪ್ರತಿ ಸೌಲತ್ತು ತಲುಪಿಸಲಾಗುತ್ತಿದೆ. ಯಾವುದೇ ತೊಂದರೆ ಇಲ್ಲ. ಇಂತಹ ಒಂದು ಬದಲಾವಣೆಗೆ ಸಹಕರಿಸಿದ ಗ್ರಾಮದ ಹಿರಿಯರಿಗೆ ಅಭಿನಂದಿಸುತ್ತೇನೆ. ವಸತಿ ನಿಲಯವನ್ನು ಮಾದರಿ ಆಗಿ ಪರಿವರ್ತಿಸುತ್ತೇನೆ. ಫಕೀರಪ್ಪ ಕೋರಕೊಪ್ಪ, ವಸತಿ ನಿಲಯದ ಮೇಲ್ವಿಚಾರಕ,
ಗ್ರಾಮೀಣ ಭಾಗದಲ್ಲಿ ಬಹುತೇಕ ಸರಕಾರಿ ಕಚೇರಿಗಳು ನಿರ್ಲಕ್ಷ್ಯಕ್ಕೊಳಗಾಗಿವೆ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ಮುಖ್ಯ ಪಾತ್ರ ವಹಿಸುತ್ತವೆ. ಉದಯವಾಣಿ ವರದಿ ಪರಿಣಾಮ ಇಂದು ಗ್ರಾಮದ ವಸತಿ ನಿಲಯ ಕಂಗೊಳಿಸುತ್ತಿದೆ. ರಘು ದೊಡ್ಡನಿಂಗಪ್ಪಗೋಳ, ಯುವ ಮುಖಂಟ
ಒಬ್ಬ ಅಧಿಕಾರಿ ವಸತಿ ನಿಲಯಗಳಲ್ಲಿನ ಮಕ್ಕಳನ್ನು ತನ್ನ ಮಕ್ಕಳಂತೆ ನೋಡಿಕೊಂಡಾಗ ಮಾತ್ರ ವೃತ್ತಿಯಲ್ಲಿ ತೃಪ್ತಿ ಹಾಗೂ ಆತನ ಕುಟುಂಬ ಸಂತಸದಿಂದ ಇರುತ್ತದೆ. ಇಲ್ಲಿನ ವಸತಿ ನಿಲಯ ಇಂದು ಸಾಕಷ್ಟು ಸುಧಾರಣೆ ಕಂಡಿದೆ. ಡಾ|ರವಿ ಸಂಕ, ಸ್ಥಳೀಯ ವೈದ್ಯರು.